ಕರಾವಳಿ

ಜೂಜುಕೋರರ ಸ್ವರ್ಗ, ಸ್ಕಿಲ್‌ಗೇಮ್ ಅಡ್ಡೆ ಮುಚ್ಚದಿದ್ದಲ್ಲಿ ಪ್ರತಿಭಟನೆ :ಡಿವೈ‌ಎಫ್‌ಐ ಎಚ್ಚರಿಕೆ

Pinterest LinkedIn Tumblr

ani_201110_muneer

ಮಂಗಳೂರು,ಅ.18 : ಮಂಗಳೂರಿನಾದ್ಯಂತ ಆರು ವರ್ಷಗಳ ಹಿಂದೆ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿ ಮುಚ್ಚಲ್ಪಟ್ಟಿದ್ದ ಸ್ಕಿಲ್‌ಗೇಮ್ ಜೂಜು ಅಡ್ಡೆಗಳನ್ನು ಮಂಗಳೂರು ಪೊಲೀಸ್ ಕಮೀಷನರ್ ಆರ್. ಹಿತೇಂದ್ರ ಅವರು ರಿಕ್ರಿಯೇಷನ್ ಕ್ಲಬ್‌ಗಳ ಹೆಸರಿನಲ್ಲಿ ಮತ್ತೆ ತೆರೆಯಿಸಿದ್ದಾರೆ. ಬಡ, ಕೆಳಮಧ್ಯಮ ವರ್ಗಗಳ ದುಡಿಮೆಯನ್ನು ಕಿತ್ತುಕೊಂಡು ಬೀದಿ ಪಾಲಾಗಿಸುವ ಇಂತಹ ಸ್ಕಿಲ್‌ಗೇಮ್ ಜೂಜು ಅಡ್ಡೆಗಳನ್ನು ಮುಚ್ಚದಿದ್ದಲ್ಲಿ ಸ್ಕಿಲ್‌ಗೇಮ್ ಅಡ್ಡೆಗಳ ಎದುರುಗಡೆಯೇ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈ‌ಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಪೊಲೀಸರ ಶಾಮೀಲಾತಿಯೊಂದಿಗೆ ಅಕ್ರಮ ಸ್ಕಿಲ್‌ಗೇಮ್ ಅಡ್ಡೆಗಳು ನಾಯಿಕೊಡೆಗಳಂತೆ ನಗರದಲ್ಲಿ ತಲೆ ಎತ್ತುತ್ತಿವೆ. ಮುಖ್ಯವಾಗಿ ಲಿಂಕ್ಕಿಂಗ್ ಟವರ್, ಸೆಂಟ್ರಲ್ ಮಾರ್ಕೆಟ್, ಜ್ಯೋತಿ ವೃತ್ತ, ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು, ಕೊಟ್ಟಾರ ಜಂಕ್ಸನ್, ಕಂಕನಾಡಿ, ಹಂಪನಕಟ್ಟೆ ಪರಿಸರ ಸೇರಿದಂತೆ ನಗರದ ಮುಖ್ಯಕೇಂದ್ರಗಳಲ್ಲಿ ಕಾರ್‍ಯಾಚರಿಸುತ್ತಿರುವ ಈ ಜೂಜು ಅಡ್ಡೆಗಳಿಂದ ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು ಸೇರಿದಂತೆ ದುಡಿಮೆಗಾರ ಜನತೆ ತಮ್ಮ ದುಡಿಮೆಯ ಹಣವನ್ನು ಜೂಜಿಗೆ ವ್ಯಯಿಸಿ ಭಿಕಾರಿಗಳಾಗುತ್ತಿದ್ದಾರೆ. ಇವರ ಬಡಪಾಯಿ ಕುಟುಂಬಗಳು ಬೀದಿಗೆ ಬೀಳುತ್ತಿದೆ. ಆಳುವ ಪಕ್ಷದ ನಾಯಕರ ಬೆಂಬಲದೊಂದಿಗೆ ಪೊಲೀಸ್ ಕಮೀಷನರ್ ಮೌಖಿಕ ಅನುಮತಿಯೊಂದಿಗೆ ಕಾರ್‍ಯಾಚರಿಸುತ್ತಿರುವ ಸ್ಕಿಲ್‌ಗೇಮ್ ಅಡ್ಡೆಗಳನ್ನು ತಕ್ಷಣ ಮುಚ್ಚದಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

Write A Comment