ಕರಾವಳಿ

ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಎಸ್.ಐ ಹಲ್ಲೆ ಹಿನ್ನೆಲೆ ; ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಯಡಿಯೂರಪ್ಪ ಕಾವೂರು ಠಾಣೆಗೆ ಭೇಟಿ

Pinterest LinkedIn Tumblr

yedurappa_visited_kavoor_1

ಮಂಗಳೂರು,ಅ.18 : ಹಿಂದೂ ಸಂಘಟನೆಯ ಕಾರ್ಯಕರ್ತ ಚರಣ್ ಮೇಲೆ ಕಾವೂರು ಠಾಣಾ ಎಸ್.ಐ. ಉಮೇಶ್ ಕುಮಾರ್ ಮತ್ತು ಸಿಬ್ಬಂದಿಗಳು ವಿನಾಕಾರಣ ಹಲ್ಲೆ ನಡೆಸಿರುವ ಬಗ್ಗೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಕೆಲವುದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಕಾವೂರು ಠಾಣೆಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದರು.

ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ವೀನಾ ಕಾರಣ ಹಲ್ಲೆ ನಡೆಸಿದ ಕಾವೂರು ಪೊಲೀಸ್‌ ಠಾಣಾ ಎಸ್‌ಐ ಉಮೇಶ್‌ ಕುಮಾರ್‌ ಹಾಗೂ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಪೊಲೀಸ್ ಪೇದೆಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ದ.ಕ.ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ಬಜರಂಗದಳ ಮಂಗಳೂರು ಘಟಕದ ನೂರಾರು ಕಾರ್ಯಕರ್ತರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದು, ಶುಕ್ರವಾರ ಕಾವೂರು ಪೊಲೀಸ್ ಠಾಣಾ ಮುಂಭಾಗ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಮಾತ್ರವಲ್ಲದೇ ಚರಣ್ ಮೇಲೆ ವೀನಾ ಕಾರಣ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ ಕಾವೂರು ಪೊಲೀಸ್‌ ಠಾಣಾ ಎಸ್‌ಐ ಉಮೇಶ್‌ ಕುಮಾರ್‌ ಹಾಗೂ ಈ ಇಬ್ಬರು ಪೇದೆಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದರು.

yedurappa_visited_kavoor_2

ಈ ಹಿನ್ನೆಲೆಯಲ್ಲಿ ಇಂದು ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಯಡಿಯೂರಪ್ಪ ಅವರು ಮಧ್ಯಾಹ್ನ ನಗರಕ್ಕೆ ಆಗಮಿಸಿ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿದರು. ಬಳಿಕ ಕಾವೂರು ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಯ ಜೊತೆ ಸಮಾಲೋಚನೆ ನಡೆಸಿದ ಯಡಿಯೂರಪ್ಪ ಅವರು ಭಜರಂಗದಳ ಕಾರ್ಯಕರ್ತರಲ್ಲಿ ತಪ್ಪಿತಸ್ಥ ಎಸ್.ಐ. ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

yedurappa_visited_kavoor_3

ವಿ‌ಎಚ್‌ಪಿ ಮುಖಂದ ಜಗದೀಶ್ ಶೇಣವ, ಭಜರಂಗದಳ ನಾಯಕ ಶರಣ್ ಪಂಪ್‍ವೆಲ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಕೃಷ್ಣ ಜೆ.ಪಾಲೆಮಾರ್, ಬಿಜೆಪಿ ನಾಯಕ ಜಗದೀಶ್ ಅಧಿಕಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

yedurappa_visited_kavoor_4a

ಹಲ್ಲೆಯ ಅಣುಕು ಪ್ರದರ್ಶನ :

ಇದೇ ಸಂದರ್ಭದಲ್ಲಿ ಕಾವೂರು ಠಾಣಾ ಎಸ್.ಐ ಹಾಗೂ ಸಿಬ್ಬಂದಿಗಳು ಸಂಘಟನೆಯ ಕಾರ್ಯಕರ್ತನ ಮೇಲೆ ಯಾವ ರೀತಿ ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆ ಸಂಘಟನೆಯ ಕಾರ್ಯಕರ್ತರು ಅಣಕು ಪ್ರದರ್ಶನದ ಮೂಲಕ ಯಡಿಯೂರಪ್ಪ ಅವರಿಗೆ ತೋರಿಸಿದರು.

Write A Comment