ಕರಾವಳಿ

ಗಂಗೊಳ್ಳಿಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿರುವ ನಿರುಪಯುಕ್ತ ತೆರೆದ ಬಾವಿ

Pinterest LinkedIn Tumblr

ಕುಂದಾಪುರ: ರಾಜ್ಯದ ಅನೇಕ ಕಡೆಗಳಲ್ಲಿ ನಿರುಪಯುಕ್ತ ಕೊಳವೆ ಬಾವಿ, ತೆರೆದ ಒಳಚರಂಡಿಗಳಿಂದ ಅನಾಹುತಗಳು ಸಂಭವಿಸುತಲಿದ್ದು, ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ತೆರೆದ ನಿರುಪಯುಕ್ತ ಬಾವಿಯೊಂದು ಅಪಾಯವನ್ನು ಆಹ್ವಾನಿಸುತ್ತಿದೆ.

ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮ್ಯಾಂಗನೀಸ್ ರಸ್ತೆಯಲ್ಲಿರುವ ಡಿಸೇಲ್ ಬಂಕ್ ಸಮೀಪ ನಿರುಪಯುಕ್ತವಾದ ತೆರೆದ ಬಾವಿಯಿದ್ದು, ನೆಲದಿಂದ ಸುಮಾರು ೩ ಅಡಿ ಎತ್ತರದ ಕೆಂಪು ಕಲ್ಲಿನ ಆವರಣ ಗೋಡೆ ಕಟ್ಟಲಾಗಿದೆ. ಈ ಬಾವಿಯ ಸುತ್ತಮುತ್ತ ಅನೇಕ ಮನೆಗಳಿವೆ. ಖಸೇಲ್ ಬಂಕ್‌ನ ಆವರಣ ಗೋಡೆಯ ಹೊರಗಡೆ ಇರುವ ಈ ಬಾವಿಯ ನೀರನ್ನು ಯಾರೂ ಉಪಯೋಗಿಸುತ್ತಿಲ್ಲ. ಹೀಗಾಗಿ ಬಾವಿಯ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ರಾತ್ರಿ ಸಮಯದಲ್ಲಿ ಬಾವಿ ಇರುವುದನ್ನು ಅಂದಾಜಿಸಲು ಸಾಧ್ಯವಿಲ್ಲ. ಪ್ರತಿನಿತ್ಯ ಈ ಮಾರ್ಗದ ಮೂಲಕ ಸಾಗುವ ಪುಟ್ಟ ಮಕ್ಕಳು ಬಾವಿಯನ್ನು ಇಣುಕಿ ನೋಡುತ್ತಿದ್ದರೆ, ಇನ್ನು ಕೆಲವರು ಬಾವಿಯ ಬಳಿ ಗಾಳ ಹಾಕಿ ಮೀನು ಹಿಡಿಯಲು ಬಾವಿಯ ಸುತ್ತಮುತ್ತ ನೆರೆದಿರುತ್ತಾರೆ.

Gangolli_Open Well_problem Gangolli_Open Well_problem (1)

ಬಾವಿಯ ಸುತ್ತಲಿನ ಆವರಣ ಗೋಡೆ ಬಹಳಷ್ಟು ಶಿಥಿಲಗೊಂಡಿದ್ದು, ಬಾವಿಯ ನೀರನ್ನು ಯಾರೂ ಉಪಯೋಗಿಸುತ್ತಿಲ್ಲ. ಮಳೆಗಾಲದ ಸಮಯದಲ್ಲಿ ನೆಲಮಟ್ಟದ ತನಕ ನೀರು ಬಾವಿಯಲ್ಲಿರುತ್ತದೆ. ಸಣ್ಣ ಮಕ್ಕಳು ಪ್ರತಿನಿತ್ಯ ಈ ಬಾವಿಯ ಬಳಿ ಬರುತ್ತಿದ್ದು, ಯಾವುದೇ ಸಂದರ್ಭದಲ್ಲೂ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದು, ನಿರುಪಯುಕ್ತವಾದ ಈ ಬಾವಿಯನ್ನು ಕೂಡಲೇ ಮುಚ್ಚಿಸಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯುವಂತೆ ಸ್ಥಳೀಯ ನಾಗರಿಕರು ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ.

ಈ ತೆರೆದ ನಿರುಪಯುಕ್ತ ಬಾವಿಯು ಬಂದರು ಇಲಾಖೆಯ ಜಾಗದಲ್ಲಿರುವುದರಿಂದ ಸ್ಥಳೀಯ ಗ್ರಾಪಂ. ಗ್ರಾಮಸ್ಥರ ಮನವಿಯನ್ನು ಬಂದರು ಇಲಾಖೆ ಕಳುಹಿಸಿ ಕೈಕಟ್ಟಿ ಕುಳಿತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ನಿರುಪಯುಕ್ತ ಕೊಳೆವೆ ಬಾವಿ ಅಥಬಾ ತೆರೆದ ಬಾವಿಗಳಿದ್ದರೆ ಅದನ್ನು ಕೂಡಲೇ ಮುಚ್ಚಿಸುವಂತೆ ಸರಕಾರ ಆದೇಶ ಹೊರಡಿಸಿದ್ದರೂ, ಸ್ಥಳೀಯ ಗ್ರಾಮ ಪಂಚಾಯತ್ ಇದು ನಮ್ಮ ಕೆಲಸ ಅಲ್ಲ ಎಂದು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆದ್ದರಿಂದ ಮುಂದಾಗಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಪಂಚಾಯತ್ ಕೂಡಲೇ ಕಾರ್ಯಪ್ರವೃತಗೊಂಡು, ನಿರುಪಯುಕ್ತವಾಗಿರುವ ಈ ತೆರೆದ ಬಾವಿಯ ವಿಲೇವಾರಿ ಮಾಡಬೇಕಿದೆ ಎಂಬುದು ಸ್ಥಳೀಯ ಗ್ರಾಮಸ್ಥರ ಒತ್ತಾಯ.

Write A Comment