ಕಾಸರಗೋಡು, ಅ.14: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಅಡ್ಡಾದಿಡ್ಡಿ ಚಲಿಸಿ ಎರಡು ದ್ವಿಚಕ್ರ ವಾಹನಗಳ ಮೇಲೆ ಹರಿದ ಪರಿಣಾಮ ಇಬ್ಬರು ಸವಾರರು ಮೃತಪಟ್ಟು, ಇನ್ನಿಬ್ಬರು ಗಂಭೀರ ಗಾಯಗೊಂಡ ದಾರುಣ ಘಟನೆ ಸೀತಾಂಗೋಳಿ ಪೇಟೆಯಲ್ಲಿ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ.
ಮೃತಪಟ್ಟವರನ್ನು ಸ್ಕೂಟರ್ ಸವಾರ ನೆಲ್ಲಿಕುಂಜೆ ಸಿಟಿಎಂ ಹಿತ್ತಲಿನ ಅಬ್ದುನ್ನಾಸರ್(36) ಹಾಗೂ ಪುತ್ತಿಗೆ ನಿವಾಸಿ ಮುಹಮ್ಮದ್ ಕುಂಞಿ ಯಾನೆ ಪೊಡಿಯ(42) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಬ್ದುನ್ನಾಸರ್‌ರ ಪುತ್ರ 4ರ ಹರೆಯದ ನೌಫಲ್ ಹಾಗೂ ಪುತ್ತಿಗೆ ನಿವಾಸಿ ಇರ್ಷಾದ್(30) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಅಬ್ದುನ್ನಾಸರ್ ಮತ್ತು ಅವರ ಪುತ್ರ ನೌಫಲ್ ಯಮಹಾ ರೇ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರೆ, ಮುಹಮ್ಮದ್ ಕುಂಞಿ ಹಾಗೂ ಇರ್ಷಾದ್ ಹೋಂಡಾ ಆ್ಯಕ್ಟಿವಾದಲ್ಲಿ ಸಂಚರಿ ಸುತ್ತಿದ್ದರು.
ಕಾಸರಗೋಡಿನಿಂದ ಉಳಿಯತ್ತಡ್ಕ, ಮಾಯಿಪ್ಪಾಡಿ ರಸ್ತೆಯಾಗಿ ಸೀತಾಂಗೋಳಿಗೆ ತೆರಳುತ್ತಿದ್ದ ಝೆಡ್‌ಎಂಟಿ ಎಂಬ ಖಾಸಗಿ ಬಸ್ ಸೀತಾಂಗೋಳಿ ಪೇಟೆ ತಲುಪುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ಸೀತಾಂಗೋಳಿ ಸರ್ಕಲ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೊದಲು ದನವೊಂದಕ್ಕೆ ಢಿಕ್ಕಿ ಹೊಡೆದಿದೆ. ಆ ಬಳಿಕ ಎದುರಿನಿಂದ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಎರಡು ದ್ವಿಚಕ್ರ ವಾಹನಗಳನ್ನು ಬಸ್ ಸುಮಾರು 150 ಮೀಟರ್ ದೂರದವರೆಗೆ ಎಳೆದೊಯ್ದಿದೆ. ಈ ವೇಳೆ ಯಮಹಾ ರೇ ಸ್ಕೂಟರ್‌ನಲ್ಲಿ ಸಿಲುಕಿಕೊಂಡಿದ್ದ ನಾಸರ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಕುಂಞಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯಾಹ್ನದ ವೇಳೆ ಕೊನೆಯು ಸಿರೆಳೆದಿದ್ದಾರೆ. ಬಸ್ ಢಿಕ್ಕಿಗೊಳಗಾದ ದನ ಕೂಡಾ ಅಸುನೀಗಿದೆ.
ಬಸ್ಸಿನಡಿಗೆ ಸಿಲುಕಿದ ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ಛಿದ್ರಛಿದ್ರಗೊಂಡಿದ್ದವು. ಅಪಘಾತ ದಲ್ಲಿ ಮೃತಪಟ್ಟ ವ್ಯಕ್ತಿಯ ದೇಹ ಗುರುತು ಸಿಗಲಾರದಷ್ಟು ಜರ್ಝರಿತವಾಗಿತ್ತು. ಬಳಿಕ ಮೃತದೇಹದ ಜೇಬಿನಲ್ಲಿ ದೊರೆತ ಡ್ರೈವಿಂಗ್ ಲೈಸೆನ್ಸ್‌ನಿಂದ ಮೃತಪಟ್ಟವರು ಅಬ್ದುನ್ನಾಸರ್ ಎಂದು ಗುರುತಿಸಲಾಯಿತು. ಗಲ್ಫ್ ಉದ್ಯೋಗಿಯಾಗಿದ್ದ ನಾಸರ್ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಹಿಂದಿರುಗಿದ್ದರು. ಇನ್ನೆರಡು ದಿನಗಳಲ್ಲಿ ಮತ್ತೆ ವಿದೇಶಕ್ಕೆ ತೆರಳುವ ಸಿದ್ಧತೆಯಲ್ಲಿದ್ದರೆನ್ನಲಾಗಿದೆ. ನಾಸಿರ್ ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅಪಘಾತದಲ್ಲಿ ಬಸ್ಸಿನಲ್ಲಿದ್ದ ಕೆಲವು ಪ್ರಯಾ ಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಕುಂಬಳೆ ಮತ್ತು ಕಾಸರಗೋಡಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ಕಾರಣ ಹಲವು ತಾಸುಗಳ ಕಾಲ ಈ ಮಾರ್ಗವಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬಸ್ಸಿನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ಬಳಿಕ ರೊಚ್ಚಿಗೆದ್ದ ಸಾರ್ವಜನಿಕರು ಬಸ್ಸಿಗೆ ಕಲ್ಲೆಸೆದು ಹಾನಿಗೊಳಿಸಿದ್ದಲ್ಲದೇ ಈ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ಗಳನ್ನು ಮಧ್ಯಾಹ್ನದವರೆಗೆ ತಡೆದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಸ್ ಚಾಲಕ ಮತ್ತು ಸಿಬ್ಬಂದಿ ಅಪಘಾತ ನಡೆದ ಬೆನ್ನಿಗೇ ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.