ಅಂತರಾಷ್ಟ್ರೀಯ

ನಾರ್ವೆಗೆ ರಾಷ್ಟ್ರಪತಿ ಪ್ರಣವ್ ಭೇಟಿ

Pinterest LinkedIn Tumblr

pranav.jpg1

ಓಸ್ಲೊ, ಅ. 14: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾರ್ವೆಗೆ ಭೇಟಿ ನೀಡಿದ್ದು, ಆ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಸರಕಾರಿ ಮುಖ್ಯಸ್ಥನಾಗಿದ್ದಾರೆ. ಅವರು ಗುರುವಾರ ಫಿನ್‌ಲ್ಯಾಂಡ್‌ನ ರೊವೇನಿಯಮಿಗೆ ಭೇಟಿ ನೀಡಲಿದ್ದಾರೆ.

ಮುಖರ್ಜಿಗೆ ಸೋಮವಾರ ಬೆಳಗ್ಗೆ ಇಲ್ಲಿನ ರಾಜ ಅರಮನೆಯಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಬಳಿಕ ಅವರು ದೊರೆ ಐದನೆ ಹೆರಾಲ್ಡ್ ಮತ್ತು ನಾರ್ವೆಯ ಉನ್ನತ ರಾಜಕೀಯ ನಾಯಕರೊಡನೆ ಸಮಾಲೋಚನೆ ನಡೆಸಿದರು. ಉಭಯ ದೇಶಗಳು ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿವೆ.

2013 ಮೇ ತಿಂಗಳಲ್ಲಿ ನಡೆದ ಆರ್ಕ್‌ಟಿಕ್ ಸಮಿತಿ ಸಭೆಯಲ್ಲಿ ಖಾಯಂ ವೀಕ್ಷಕ ಸ್ಥಾನಮಾನವನ್ನು ಪಡೆದ ಬಳಿಕ ವಿಶ್ವದ ನೂತನ ರಾಜಕೀಯ ವೇದಿಕೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಕ್‌ಟಿಕ್ ವಲಯದಲ್ಲಿ ಭಾರತ ಈಗಾಗಲೇ ಆಯಕಟ್ಟಿನ ಹಿಡಿತವನ್ನು ಪಡೆದುಕೊಂಡಿದೆ.

ಸಮಿತಿಯಲ್ಲಿ ಅಮೆರಿಕ, ಕೆನಡ, ಸ್ವೀಡನ್, ಡೆನ್ಮಾರ್ಕ್, ಐಸ್‌ಲ್ಯಾಂಡ್, ನಾರ್ವೆ, ರಶ್ಯ ಮತ್ತು ಫಿನ್‌ಲ್ಯಾಂಡ್ ಸದಸ್ಯ ದೇಶಗಳಾಗಿವೆ.
‘‘ಆರ್ಕ್‌ಟಿಕ್ ವಲಯದಲ್ಲಿ ಭಾರತದ ಹಿತಾಸಕ್ತಿ ವಿಜ್ಞಾನ, ಪರಿಸರ, ವಾಣಿಜ್ಯ ಹಾಗೂ ಆಯಕಟ್ಟಿನ ಕ್ಷೇತ್ರಗಳಿಗೆ ಸಂಬಂಧಿಸಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Write A Comment