ಕರಾವಳಿ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ಡಿಸಿ ಕರೆ

Pinterest LinkedIn Tumblr

DC_press_meet_2

ಮಂಗಳೂರು, ಅ.10:  18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕರೆ ನೀಡಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2015 ರ ಜನವರಿ 1ನ್ನು ಅರ್ಹತಾ ದಿನಾಂಕವಾಗಿರಿಸಿ, ಜಿಲ್ಲೆಯಾದ್ಯಂತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಅರ್ಹ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಗೆ ನೋಂದಾಯಿಸುವ ಹಾಗೂ ನೋಂದಾಯಿತ ಮತದಾರರು ವಾಸಸ್ಥಳ ಬದಲಾಯಿಸಿದ್ದಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ವಿಶೇಷವಾಗಿ ಕಾಲೇಜುಗಳಲ್ಲಿ 18 ವರ್ಷ ತುಂಬಿದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರಾಂಶುಪಾಲರುಗಳು ಕಾಲೇಜು ಹಂತದಲ್ಲಿಯೇ ಮತದಾರರ ಪಟ್ಟಿಯ ಹೆಸರು ಸೇರ್ಪಡೆಗೆ ನಮೂನೆ 6 ಅರ್ಜಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ವಿಳಾಸ ಮತ್ತು ವಯಸ್ಸಿನ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಕಾಲೇಜುಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಿದರು.

ಆಯಾ ಮತಗಟ್ಟೆ ಅಧಿಕಾರಿ(ಬಿ.ಎಲ್.ಓ)ಗಳ ಬಳಿ ಮತದಾರರ ಪಟ್ಟಿಗೆ ಸೇರ್ಪಡೆ ಅರ್ಜಿ, ಹೆಸರು ತೆಗೆದುಹಾಕುವ, ವರ್ಗಾವಣೆಗೊಳಿಸುವ ಅರ್ಜಿಗಳು ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇಣಿ ಮಾತನಾಡಿ, ಪ್ರತೀ ಕಾಲೇಜುಗಳು 18 ವರ್ಷ ತುಂಬಿದ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಎಲ್ಲ ವಿದ್ಯಾರ್ಥಿಗಳ ಹೆಸರು ಸೇರ್ಪಡೆಯಾದ ಬಳಿಕ ಈ ಬಗ್ಗೆ ಸೂಕ್ತ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Write A Comment