ಕರಾವಳಿ

ಸೌಜನ್ಯ ಪ್ರಕರಣಕ್ಕೆ 2 ವರ್ಷವಾದ ಹಿನ್ನೆಲೆ: ಇಂದು ನವಚಂಡಿಕಾ ಯಾಗ ಆಯೋಜನೆ

Pinterest LinkedIn Tumblr

sowjanya_yaga_photo_1

ಬೆಳ್ತಂಗಡಿ,ಅ.10: ಪಾಂಗಳ ನಿವಾಸಿ ಎಸ್‍ಡಿ‌ಎಂ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಅ.10 ರಂದು ನವ ಚಂಡಿಕಾ ಯಾಗವನ್ನು ಪ್ರಜಾಪ್ರಭುತ್ವ ವೇದಿಕೆಯು ಆಯೋಜಿಸಿದೆ.

ನವ ಚಂಡಿಕಾ ಯಾಗವು ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದ್ದು ಯಾಗ ನಡೆಯುವ ಸ್ಥಳದಲ್ಲಿ 11 ಅಗ್ನಿಕುಂಡವನ್ನು ರಚಿಸಲಾಗಿದೆ, ಈ ಯಾಗವನ್ನು 11 ಮಂದಿ ಸ್ವಾಮೀಜಿಗಳು ನೆರವೇರಿಸಲಿದ್ದಾರೆ. ಮುಖ್ಯವಾಗಿ ಕೊಲ್ಲೂರು ದೇವಳದ ಪ್ರಧಾನ ಅರ್ಚಕ ಮಂಜುನಾಥ ಅಡಿಗ, ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಕಾರಿಂಜ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಕೊಲ್ಲೂರು ಧರ್ಮಪೀಠದ ಸ್ವಾಮೀಜಿ, ಸಾಧ್ವಿ ಗೀತಾನಂದಿನಿ, ಮರವೂರು ನಿತ್ಯಾನಂದಾಶ್ರಮ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಧರ್ಮ ವ್ರತಾನಂದ ಸ್ವಾಮೀಜಿ, ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ, ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಸ್ವಾಮೀಜಿ, ಬಾಳೇಕುದ್ರುವಿನ ನರಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾತಾನಂದಮಯೀ ಸ್ವಾಮೀಜಿಗಳು ಯಾಗದಲ್ಲಿ ಪಾಲ್ಗೋಳ್ಳಲಿದ್ದಾರೆ.

ಈ ಯಾಗಕ್ಕೆ ಸುಮಾರು 1008 ಮಂದಿ ಮುತ್ತೈದೆಯರು ಯಾಗದಲ್ಲಿ ಹವಿಸ್ಸನ್ನು ಅರ್ಪಿಸಲಿದ್ದಾರೆ. ಯಾಗದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾಗವು ಮುಂಜಾನೆ 8 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 12 ಗಂಟೆಗೆ ಮುಕ್ತಾಯಗೊಳ್ಳಲಿದೆ,

sowjanya_yaga_photo_2

ಸೌಜನ್ಯ ಪ್ರಕರಣ ಹಿನ್ನೆಲೆ :
ಪಾಂಗಳದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಮಗಳು ಸೌಜನ್ಯ ಕಾಲೇಜಿನಿಂದ ಮನೆಗೆ ಹಿಂದಿರುಗುವ ಸಂದರ್ಭ ಕಾಮುಕರ ಕೈಗೆ ಸಿಲುಕಿ ಅತ್ಯಾಚಾರಗೊಂಡು ಕೊಲೆಯಾಗಿದ್ದಳು. 2012ರ ಅಕ್ಟೋಬರ್ 9ರಂದು ನಡೆದ ಈ ಪ್ರಕರಣದ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಪ್ರಜಾಪ್ರಭುತ್ವ ವೇದಿಕೆಯ ಜತೆಯಲ್ಲಿ ಹಲವಾರು ಸಂಘಟನೆಗಳು ಹೋರಾಟಗಳು ನಡೆಸಿದ್ದವು.

ಪ್ರಕರಣದ ಪ್ರಾರಂಭದಲ್ಲಿ ಸಂತೋಷ್ ಎಂಬ ಮಾನಸಿಕ ಅಸ್ವಸ್ಥನನ್ನು ಆರೋಪಿಯನ್ನಾಗಿ ತೋರಿಸಲಾಗಿತ್ತು. ಆದರೆ ಸೌಜನ್ಯ ಪ್ರಕರಣವು ಹಲವು ಸಂಶಯಗಳನ್ನು ಊರಿನ ಜನರಲ್ಲಿ ಮೂಡಿಸಿದ್ದರಿಂದ ಪ್ರಕರಣದ ಸರಿಯಾದ ತನಿಖೆ ಕೈಗೊಳ್ಳುವಂತೆ ಪ್ರತಿಭಟನೆ ಹೆಚ್ಚಾಯಿತು. ಕಡೆಗೂ ಪ್ರತಿಭಟನಾಕಾರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಸೌಜನ್ಯ ಪ್ರಕರಣವನ್ನು ಸಿಬಿ‌ಐ ತನಿಖೆಗೆ ವಹಿಸಿತ್ತು. ಸಿಬಿ‌ಐ ತನಿಖೆ ಪ್ರಾರಂಭಿಸಿ ಹಲವು ತಿಂಗಳುಗಳು ಕಳೆದರೂ ಇನ್ನೂ ಕೂಡ ಸೌಜನ್ಯ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ ಎನ್ನಲಾಗಿದೆ.

ವರದಿ: ರವಿರಾಜ್ ಕಟೀಲು

Write A Comment