ಕರಾವಳಿ

ಕುಂಭಾಸಿ ಕೊರಗ ಮಕ್ಕಳ ಪಾಲಿಗೆ ಆಶಾಕಿರಣವಾದ `ಮಕ್ಕಳ ಮನೆ’; ಆಟ-ಪಾಠದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗೂ ಇಲ್ಲಿ ಪ್ರೋತ್ಸಾಹ

Pinterest LinkedIn Tumblr

ಕುಂದಾಪುರ: ಈ ಮನೆಯೊಳಗೆ ಬಂದರೇ ಮಕ್ಕಳ ಟ ಕಣ್ಣಿಗೆ ಮುದ ನೀಡುತ್ತದೆ, ಅವರ ಸಹಬಾಳ್ವೆ ಎಲ್ಲರನ್ನೂ ತಲೆದೂಗಿಸುವಂತೆ ಮಾಡುತ್ತದೆ. ಹೀಗೆ ಆಟ, ಪಾಠ ಪ್ರವಚನದಲ್ಲಿ ಫುಲ್ ಖುಷ್ ಆಗಿ ಪಾಲ್ಘೊಳ್ಳುತ್ತಿರುವ ಈ ಮಕ್ಕಳು ಮೊದಲು ಹೀಗಿರಲಿಲ್ಲ. ಮನೆಯ ಕಷ್ಟ-ಬಡತನದ ನಡುವೆ ತುತ್ತಿನ ಚೀಲ ತುಂಬಿಸಲು ಪೋಷಕರೊಂದಿಗೆ ಭಿಕ್ಷಾಟನೆ ಮಾಡುವುದು, ಸಣ್ಣ-ಪುಟ್ಟ ಕೆಲಸ ಮಾಡುವುದೇ ಇವರ ಕಾಯಕವಾಗಿತ್ತು. ಆದರೇ ಈಗ ಈ ಮಕ್ಕಳ ದಿನಚರಿ ಬದಲಾಗಿದೆ.

Kumbashi_Koraga_childrens (10) D D D

ತಾಲೂಕಿನ ಕುಂಭಾಸಿ ಕೊರಗ ಕಾಲನಿಯ ನಿವಾಸಿಗಳಾದ ಈ ಹದಿನೈದು ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಉತ್ಸುಹಕರಾಗಿದ್ದಾರೆ. ಇವರಿಗೆ ಸರಕಾರದ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ (ಐಟಿಡಿಪಿ) ಹಾಗೂ ಸ್ಥಳೀಯ ಪಂಚಾಯತ್ ಸೇರಿದಂತೆ ಕೊರಗ ಮುಖಂಡರು ಸಾಥ್ ನೀಡುತ್ತಿದ್ದಾರೆ.

ಕುಂಭಾಶಿಯ ಗ್ರಾ.ಪಂ. ಸಮೀಪದ ಅಂಬೇಡ್ಕರ್ ಭವನಕ್ಕೆ ಹೊಂದಿಕೊಂಡಂತೆಯೇ ಮಕ್ಕಳ ಮನೆಯೆಂಬ ಹೆಸರಿನಲ್ಲಿ ಕಟ್ಟಡವೊಂದನ್ನು ರಚಿಸಲಾಗಿದೆ. ಮಕ್ಕಳು ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿ ಇಲ್ಲಿ ಐಟಿಡಿಪಿ ವ್ಯವಸ್ಥೆ ಮಾಡುವ ಉಪಹಾರ ತಿಂದುಕೊಂಡು ಮನೆಪಾಠ ಕಲಿತು ಶಾಲೆಗಳಿಗೆ ತೆರಳುತ್ತಾರೆ. ಸಂಜೆ ಇವರು ಶಾಲೆಯಿಂದ ಬರುತ್ತಲೇ ಕಾಫಿ-ಚಾ ಹಾಗೂ ತಿಂಡಿ ಸಿದ್ದವಾಗಿರುತ್ತೆ ಅದನ್ನು ತಿಂದು ಪುನಃ ಆಟ ಹಾಗೂ ಮನೆ ಪಾಠ- ಹೋಂ ವರ್ಕಿನಲ್ಲಿ ತಲ್ಲೀನರಾಗುತ್ತಾರೆ. ಸಂಜೆ ಸ್ನಾನದ ಬಳಿಕ ಕೊಂಚ ವಿಶ್ರಾಂತಿ ಪಡೆಯುವ ಸಲುವಾಗಿ ಸ್ಥಳೀಯ ಕುಂಭಾಸಿ ಗ್ರಾಮಪಂಚಾಯತ್ ನೀಡಿದ ಟಿ.ವಿ. ವೀಕ್ಷಿಸಿ, ರಾತ್ರಿ ಊಟ ಮಾಡಿ ಅಂಬೇಡ್ಕರ್ ಭವನದಲ್ಲಿಯೇ ತಂಗುತ್ತಾರೆ. ನಿತ್ಯ ಈ ಪರಿಪಾಠ ಬೆಳೆದು ಬಂದಿದ್ದು ತಮ್ಮ ತಮ್ಮ ಮನೆಗಳಿಗೆ ನಿತ್ಯ ಯಾವುದಾದರೂ ಒಂದು ಸಮಯದಲ್ಲಿ ಭೇಟಿ ನೀಡಿ ಬರುತ್ತಾರೆ.

D D D D D D D D D

ಯಾಕೇ ಈ ಪ್ರಯತ್ನ: ಹಲವು ವರ್ಷಗಳಿಂದ ಕೆಲವು ಮೇಲ್ವರ್ಗದ ಜನರಿಂದ ದೌರ್ಜನ್ಯಕ್ಕೊಳಗಾಗುತ್ತಾ, ಸಮಾಜದಿಂದಲೇ ದೂರವಿರುವ ಕೊರಗ ಕುಟುಂಬದವರ ಪಾಡು ಹೇಳತೀರದು. ಕುಂಭಾಶಿ ಪ್ರದೇಶದಲ್ಲಿಯೂ ಇದೇ ಅವ್ಯವಸ್ಥೆಯಿಂದ ಕೊರಗ ಕುಟುಂಬಗಳು ಹಿಂದಿನಿಂದಲೂ ಬದುಕುತ್ತಿದ್ದರು. ಸಮಾಜ ಇವರನ್ನು ದೂರವಿಟ್ಟೇ ಬದುಕುತ್ತಿತ್ತು, ಇದಕ್ಕೆ ಪೂರಕವಾಗಿ ಇವರೆಲ್ಲರೂ ಅನಕ್ಷರಸ್ಥರು, ಏನನ್ನು ತಿಳಿಯದವರು ಎಂಬ ಪ್ರಜ್ಞೆ ಎಲ್ಲರಲ್ಲೂ ಇತ್ತು. ಸಮಾಜದಿಂದ, ಶಿಕ್ಷಣದಿಂದ ತಾವೂ ದೂರವಿದ್ದ ಇವರು ತಮ್ಮ ಮಕ್ಕಳನ್ನು ಶಾಲೆಯತ್ತ ಮುಖ ಮಾಡಿಸಿಯೂ ಇರಲಿಲ್ಲ, ತಮ್ಮ ಕೆಲಸದ ಸಹಾಯಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದರೇ ಹೊರತು ಎಂದೂ ಮಕ್ಕಳ ಭವಿಷ್ಯದ ಬಗ್ಗೆ ಇವರಿಗೆ ಕೊಂಚವೂ ಆಲೋಚನೆ ಇರಲಿಲ್ಲ. ಇದನ್ನೆಲ್ಲಾ ಅರಿತ ಸ್ಥಳೀಯ ಕೊರಗ ಮುಖಂಡ ಗಣೇಶ್ ಕುಂದಾಪುರ, ಗಣೇಶ್ ಬಾರ್ಕೂರು, ಶೇಖರ ಮರವಂತೆ, ಲಕ್ಷ್ಮಣ ಬೈಂದೂರು ಮೊದಲಾದವರ ಹೋರಾಟದ ಫಲವಾಗಿ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ (ಐಟಿಡಿಪಿ) ವತಿಯಿಂದ ಸುಸಜ್ಜಿತ ಕಟ್ಟಡ, ಅಡುಗೆ ಕೋಣೆ ಸಹಿತ ಒಂದು ಹಾಲ್ ಪಡೆದು `ಮಕ್ಕಳ ಮನೆ’ ಹೆಸರಿನಲ್ಲಿ ಕಾಲೋನಿಯ ಮಕ್ಕಳನ್ನು ಒಗ್ಗೂಡಿಸಲಾಯಿತು. ೨ ವರ್ಷ ತುಂಬುತಿರುವ ಇವರ ಮಕ್ಕಳ ಮನೆಯೆಂಬ ನೂತನ ಪ್ರಯತ್ನ ಈಗ ಯಶಸ್ಸಿನತ್ತ ಸಾಗುತ್ತಿದೆ. ೧ ನೇ ತರಗತಿಯಿಂದ ೭ ನೇ ತರಗತಿಗೆ ತೆರಳುವ ೧೧ ಮಕ್ಕಳು ಹಾಗೂ ತೆಕ್ಕಟ್ಟೆ ಪ್ರೌಢಶಾಲೆಗೆ ಹೋಗುವ ೪ ಮಕ್ಕಳು ಈಗ ಇಲ್ಲಿದ್ದಾರೆ. ನಿತ್ಯ ಚಾಚೂ ತಪ್ಪದೇ ತಮ್ಮ ಕಾರ್ಯಗಳನ್ನು ಮಾಡುವ ಇವರು ಸಂತಸದಿಂದಲೇ ಶಾಲೆಗೆ ತೆರಳಿ ಹಿಂದಿರುಗುತ್ತಾರೆ.

ಅನುಕೂಲಕರ ವ್ಯವಸ್ಥೆ: ಇದೇ ಸಮುದಾಯದ ಡಿ.ಎಡ್ ಪದವಿ ಪಡೆದ ವಿನಿತಾ ಕೊಣ್ಕಿ ಎನ್ನುವ ಶಿಕ್ಷಕಿಯನ್ನು ಇಲ್ಲಿನ ಮಕ್ಕಳ ಮನೆಪಾಠಕ್ಕಾಗಿ ನೇಮಿಸಲಾಗಿದೆ. ವಿನೀತಾ ಇಲ್ಲಿನ ಮಕ್ಕಳಿಗೆ ಮನೆ ಪಾಠ ಹೇಳುವ ಜೊತೆಗೆ ಚಿತ್ರಕಲೆ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಚಟುವಟಿಕೆಗಳನ್ನು ಕಲಿಸಿಕೊಡುತ್ತಾರೆ. ಇಲ್ಲಿನ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್, ಮೊಟ್ಟೆ, ಮೀನು ಸಾರು ನೀಡುವ ಮೂಲಕ ಆರೋಗ್ಯಕರ ಅಚ್ಚುಕಟ್ಟಿನ ಊಟ ನೀಡಲಾಗುತ್ತೆ. ಐಟಿಡಿಪಿ ವತಿಯಿಂದ ಆಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಸಲಕರಣೆಗಳು ಇದೆ. ಕುಂಭಾಸಿ ಗ್ರಾ.ಪಂ. ವತಿಯಿಂದ ಟಿ.ವಿ. ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ನೀಡಲಾಗಿದೆ.ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕ್ರತಿಕ ಚಟುವಟಿಕೆಗಳನ್ನು ಕಲಿಸುವ ನಿಟ್ಟಿನಲ್ಲಿ ವಿವಿಧ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ರಜಾ ದಿನಗಳಲ್ಲಿ ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತೆ. ವಾರ ವಾರವೂ ಇಲ್ಲಿನ ಮಕ್ಕಳಿಗೆ ನುರಿತ ಕಲಾವಿದರಿಂದ ಯಕ್ಷಗಾನ ಅಭ್ಯಾಸ ನಡೆಸಲಾಗುತ್ತಿದೆ. ಈ ಸಮುದಾಯದ ಕಲೆಯಾದ ಡೋಲು ವಾದನವನ್ನು ಇಲ್ಲಿನ ಮಕ್ಕಳು ನುಡಿಸಿ ಅದಕ್ಕೆ ಹೆಜ್ಜೇ ಹಾಕುವುದೇ ನೋಡಲು ಸೊಗಸು. ಕಲಿಯುವಿಕೆಯಲ್ಲಿಯೂ ಇಲ್ಲಿನ ಮಕ್ಕಳು ಕಮ್ಮಿ ಇಲ್ಲ.

ಕುಂಭಾಸಿ ಕೊರಗ ಕಾಲನಿಯಲ್ಲಿ ಸದ್ಯ ನಾಲ್ಕಾರು ನೂತನ ಮನೆಗಳು ನಿರ್ಮಾಣಗೊಳ್ಳುತ್ತಿದೆ. ಕಳೆದ ವಾರವಷ್ಟೇ ಉಡುಪಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸ ಮನೆಯ ಜೊತೆಗೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ.; ಇಲ್ಲಿನ ಮಕ್ಕಳ ಬದುಕು ಹಸನಾಗಲೀ..ಅವರ ಭವಿಷ್ಯ ಉಜ್ವಲವಾಗಲಿ ಎಂಬುದು ನಮ್ಮ ಹಾರೈಕೆ.

ಮಕ್ಕಳಿಗೆ ಶಿಕ್ಷಣವನ್ನು ನೀಡುವ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮಕ್ಕಳ ಭವಿಷ್ಯ ಹಸನಾಗಲು ಶಿಕ್ಷಣ ಬೇಕು, ಸಮಾಜದಲ್ಲಿ ಈ ಮಕ್ಕಳು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಲು ಅವರನ್ನು ಮಕ್ಕಳ ಮನೆ ಕಾನ್ಸೆಪ್ಟಿನಲ್ಲಿ ಒಂದುಗೂಡಿಸಲಾಗಿದೆ. ಇಲ್ಲಿ ಎಲ್ಲಾ ಮಕ್ಕಳು ಸಂತಸದಿಂದ ತೊಡಗಿಸಿಕೊಂಡಿದ್ದಾರೆ .
– ಗಣೇಶ ಕುಂದಾಪುರ (ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ)

Write A Comment