ಕರಾವಳಿ

‘ವ್ಯಸನ ಮುಕ್ತ ಸಮಾಜಕ್ಕೆ ವಿದ್ಯಾರ್ಥಿಗಳ ಕೊಡುಗೆ’ – ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಮನವಿ

Pinterest LinkedIn Tumblr

 Nitte_drugs_evrenes

ಮಂಗಳೂರು /ನಿಟ್ಟೆ, ಸೆ.30: ಕಾಲೇಜು ಆವರಣದಲ್ಲಿ ಯುವಜನತೆಯನ್ನು ಮಾದಕ ವಸ್ತುಗಳ ಸೇವನೆಗೆ ಪ್ರಚೋದಿಸುವ ಅಥವಾ ಮಾದಕ ವಸ್ತುಗಳನ್ನು ಬಳಸುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ನೀಡುವುದರ ಮೂಲಕ ಈ ದುಶ್ಚಟಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳನ್ನು ಸಂರಕ್ಷಿಸಲು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ‘ವ್ಯಸನ ಮುಕ್ತ ಸಮಾಜಕ್ಕೆ ವಿದ್ಯಾರ್ಥಿಗಳ ಕೊಡುಗೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.54ರಷ್ಟು ಯುವಕರಿದ್ದು, ದೇಶದ ಅಭಿವೃದ್ಧಿಯಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದು. ಕಾಲೇಜು ಜೀವನದಲ್ಲಿ ಕುತೂಹಲದಿಂದ, ಗೆಳೆಯರ ಒತ್ತಡದಿಂದ ಅಥವಾ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನು ಕರಣೆಯಿಂದ ಮಾದಕ ವಸ್ತುಗಳ ಚಟಕ್ಕೆ ವಿದ್ಯಾರ್ಥಿಗಳು ಬಲಿ ಯಾಗುತ್ತಿದ್ದು, ಅರಿವು ಕಾರ್ಯಕ್ರಮಗಳ ಮೂಲಕ ಯುವಶಕ್ತಿಯ ಸದ್ಬಳಕೆ ಸಾಧ್ಯ. ಅಪರಾಧಿಗಳಿಗೆ ಶಿಕ್ಷೆಗೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾಮಾಜಿಕ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಮಾದಕ ವಸ್ತುಗಳ ಸರಬರಾಜು, ಉತ್ಪಾದನೆ ಮಾಡುವವರ ವಿರುದ್ಧ 1985ರ ಮಾದಕವಸ್ತು ನಿಷೇಧ ಕಾನೂನಿನಡಿ 20 ವರ್ಷಗಳ ಕಠಿಣ ಶಿಕ್ಷೆ, ಆತನ ಆಸ್ತಿ ಮುಟ್ಟು ಗೋಲು ಹಾಗೂ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಲೂ ಸಹ ಸಾಧ್ಯವಿದೆ. ಆದುದರಿಂದ ಯುವಜನತೆ ಯಾವುದೇ ಪ್ರಚೋದನೆಗೆ ಒಳಗಾಗಿ ಈ ಚಟಕ್ಕೆ ಬೀಳ ಬಾರದು ಎಂದರು.

ದೇಶದಲ್ಲಿ ಪ್ರತಿ ವರ್ಷ ಒಂದು ಲಕ್ಷ ಇಪ್ಪತ್ತು ಸಾವಿರ ಅಸಹಜ ಸಾವುಗಳು ಸಂಭ ವಿಸುತ್ತಿದ್ದು, ಈ ಪೈಕಿ ಶೇ.50ರಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನ ಯುವ ಜನತೆ. ಇವರಲ್ಲಿ ಅಧಿಕ ಮಂದಿ ಮಾದಕ ವ್ಯಸನಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮಾದಕ ವ್ಯಸನ ಪೀಡಿತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ ಎಂದವರು ಹೇಳಿದರು.

ಮಾದಕ ವಸ್ತುಗಳ ಬಳಕೆ ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರ ವಿರುದ್ಧ ಕೈಗೊಳ್ಳಲಿರುವ ಕಾನೂನು ಕ್ರಮಗಳ ಬಗ್ಗೆ ಯುವ ಜನತೆ ತಿಳಿಯುವುದು ಅತ್ಯಂತ ಆವಶ್ಯಕ. ಕುಡಿದು ವಾಹನ ಚಾಲನೆ ಮಾಡುವುದರಿಂದ ಚಾಲನೆ ಮಾಡುವವ ಸಾಯುವುದರ ಜೊತೆಗೆ ಅಮಾಯಕರ ಸಾವಿಗೂ ಕಾರಣರಾಗುತ್ತಾರೆ. ಸ್ವಾಸ್ಥ ಕುಟುಂಬ ಮತ್ತು ಸಮಾಜ ಮದ್ಯ- ಮಾದಕಗಳಿಂದ ಹೊರತಾಗಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನುಡಿದರು. ವಿಶೇಷ ಉಪನ್ಯಾಸ ನೀಡಿದ ಸ್ವಪ್ನಾ ಗಣೇಶ್,ಹದಿಹರೆಯದಲ್ಲಿ ಕುತೂಹಲ ದಿಂದ ಆರಂಭವಾಗುವ ಮದ್ಯ, ಮಾದಕ ವಸ್ತುಗಳ ಸೇವನೆ ಮುಂದೆ ಚಟವಾಗಿ ಪರಿವರ್ತಿತವಾಗುತ್ತದೆ. ಪ್ರಾರಂಭದಲ್ಲಿ ಕುತೂಹಲಕ್ಕಾಗಿ ತೆಗೆದುಕೊಳ್ಳುವವರಲ್ಲಿ ಶೇ.20ರಿಂದ 30ರಷ್ಟು ಮಂದಿ ಇದಕ್ಕೆ ದಾಸ ರಾಗುತ್ತಾರೆ. ಅಪರೂಪಕ್ಕೆ ಮದ್ಯ ಸೇವನೆ ಮಾಡುವುದರಿಂದಲೂ ಆರೋಗ್ಯಕ್ಕೆ ಹಾನಿ ಶತಸಿದ್ಧ ಎಂದರು.

ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಕೆ.ವೀಣಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಸ್ವಾಗತಿಸಿದರು. ಪ್ರಶುದ್ಧಾ ಕಾರ್ಯಕ್ರಮ ನಿರೂಪಿಸಿದರು. ಡಾ. ಜಯಶ್ರೀ ಶೆಟ್ಟಿ ವಂದಿಸಿದರು.

Write A Comment