ಕರಾವಳಿ

ಜನಸಾಮಾನ್ಯರ ಸಮಸ್ಯೆಗೆ ಕಾಂಗ್ರೆಸ್ ಸರಕಾರ ಸ್ಪಂಧಿಸುತ್ತಿಲ್ಲ: ಬಿ.ಕಿಶೋರ್ ಕುಮಾರ್

Pinterest LinkedIn Tumblr

ಕುಂದಾಪುರ: ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ಜನ ಸಾಮಾನ್ಯರ ಸಮಸ್ಯೆಗಳು ವಿಪರೀತವಾಗಿದೆ. ಆನರಿಗೆ ನಿತ್ಯ ಅಗತ್ಯವಾಗಿ ಬೇಕಾಗಿರುವ ಕಂದಾಯ ಹಾಗೂ ಆಹಾರ ಇಲಾಖೆ ಕೆಲಸಗಳು ಹಿನ್ನಡೆಯಲ್ಲಿ ಆಗುತ್ತಿದೆ ಇದೆ ಎಂದು ಬಿಜೆಪಿ ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರಕುಮಾರ್ ಹೇಳಿದ್ದಾರೆ.

ಕುಂದಾಪುರದ ಪ್ರೆಸ್ ಕ್ಲಬ್‌ನಲ್ಲಿ ಭಾನುವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

B Kishore Kumar

ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ತನ್ನ ಅಧಿಕಾರ ಅವಧಿಯಲ್ಲಿ ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದರಿಗೆ ಅನೂಕೂಲ ಕಲ್ಪಿಸಲು 94ಸಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಗರಿಷ್ಠ 9.5  ಸೆಂಟ್ಸ್‌ವರೆಗೆ ಭೂಮಿ ಮಂಜೂರು ಮಾಡಲು ಅವಕಾಶ ಕಲ್ಪಿಸಿ ಮಸೂದೆ ರೂಪಣೆಯ ಅನುಮತಿಗಾಗಿ ರಾಜ್ಯಪಾಲರಿಗೆ ಕಳುಹಿಸಿದ್ದಾಗ, ಕಾಂಗ್ರೆಸ್‌ನ ಕುತಂತ್ರ ನೀತಿಯಿಂದಾಗಿ ಈ ಮಸೂದೆಗೆ ರಾಜ್ಯಪಾಲರು ಅಂಗೀಕಾರ ನೀಡಿರಲಿಲ್ಲ. ಇದು ಜಾರಿಗೆ ಬಂದಿದ್ದರೆ ಉಡುಪಿ ಜಿಲ್ಲೆಯ ೪,೮೭೫ ಜನರಿಗೆ ಅನೂಲವಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ 94 ಸಿಸಿ(3ಎ) ನಮೂನೆಯಲ್ಲಿ ಅರ್ಜಿ ನೀಡಿದ್ದಲ್ಲಿ, 3-5 ಸೆಂಟ್ಸ್ ಭೂಮಿ ನೀಡುತ್ತೇವೆ ಎಂದು ಭರವಸೆಯನ್ನು ನೀಡುತ್ತಿದ್ದರೂ, ಅದು ಗಗನ ಕುಸುಮವಾಗುತ್ತಿದೆ.

ಬಲಾಡ್ಯರಿಗೆ 5-10-20 ಎಕ್ರೆ ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡುವ ಸರ್ಕಾರಕ್ಕೆ ಬಡವರಿಗಾಗಿ ಕನಿಷ್ಠ ೫ ಸೆಂಟ್ಸ್ ಭೂಮಿಯನ್ನು ನೀಡಲು ಇಚ್ಚಾ ಶಕ್ತಿ ಇಲ್ಲ. ಸರ್ಕಾರಿ ಭೂಮಿಯಲ್ಲಿ ಕುಳಿತಿರುವವರಿಗೆ ಭೂಮಿ ನೀಡುತ್ತೇವೆ ಎನ್ನುವ ಹೇಳಿಕೆಯನ್ನು ನೀಡುವ ಸರ್ಕಾರ, ರಾಮಸ್ವಾಮಿ ಹಾಗೂ ಇತರ ವರದಿಗಳ ನೆಪದಲ್ಲಿ ಸರ್ಕಾರಿ ಭೂಮಿಯಲ್ಲಿ ಕುಳಿತಿರುವವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದೆ. ಯಡಾಡಿ-ಮತ್ಯಾಡಿ ಗ್ರಾಮದ ಬಡ ಮಹಿಳೆ ಗುಲಾಬಿ ಶೆಡ್ತಿ ಎನ್ನುವವರಿಗೆ 30 ಸೆಂಟ್ಸ್ ಭೂಮಿಗೆ ಡಿ ನೋಟಿಸ್ ಆಗಿದ್ದರೂ, ಅವರನ್ನು ಅಲ್ಲಿಂದ ತೆರವುಗೊಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ನೋಟಿಸು ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು ಸರ್ಕಾರದ ದ್ವಂದ್ವ ನೀತಿಯಿಂದಾಗಿ ಜನರು ಜರ್ಜರಿತರಾಗಿದ್ದಾರೆ ಎಂದು ಆಕ್ರೊಷ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಭೂ ಪರಿವರ್ತನೆಗಾಗಿ ನಗರ ಪ್ರಾಧಿಕಾರದ ಅನುಮತಿಯ ಅಗತ್ಯ ಇರುವುದಿಲ್ಲ, ಈ ಕುರಿತು ತಾಲ್ಲೂಕು ಪಂಚಾಯಿತಿಗಳಿಗೆ ಮಾರ್ಗಸೂಚಿ ನೀಡುವುದಾಗಿ ಸರ್ಕಾರ ಹೇಳಿರುವುದರಿಂದಾಗಿ, 2013ಜೂನ್ ನಂತರ ಭೂ ಪರಿವರ್ತನೆಯಾದ ಭೂಮಿಗಳಿಗೆ 9 & 11 ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಸ್ವಷ್ಟ ಸೂಚನೆಗಳು ಸಂಬಂಧಿಸಿದ ಇಲಾಖೆಗಳಿಗೆ ಬಾರದೆ ಇರುವುದರಿಂದಾಗಿ, 9 & 11 ಇಲ್ಲದೆ ಆಸ್ತಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಅವರು ಇದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಇರುವವರು ಆಸ್ತಿ ಮಾರಾಟ ಮಾಡಲಾಗದೆ ಸಂಕಷ್ಟ ಅನುಭವಿಸುವಂತಾಗಿದದ್ದು ಸರ್ಕಾರ ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಠಾಣಾ ವ್ಯಾಪ್ತಿಯನ್ನು ಹೊರತು ಪಡಿಸಿ ಇನ್ನೂಳಿದ ಕಾಯ್ದಿರಿಸಿದ ಗೋಮಾಳಗಳನ್ನು ಸರ್ಕಾರೇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳ ಬಹುದು ಎನ್ನುವ ನ್ಯಾಯಾಲಯದ ಅಭಿಪ್ರಾಯ ಇರುವುದರಿಂದಾಗಿ, ಗ್ರಾಮ ಠಾಣಾ ಪದ್ದತಿ ಇಲ್ಲದೆ ಇರುವ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಉಪಯೋಗವಾಗದೆ ಇರುವ ಗೋಮಾಳಗಳನ್ನು ಗುರುತಿಸಿ ಸರ್ಕಾರೇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶವಿರುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದ ಅವರು ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ೧೦೦೦ಕ್ಕೂ ಅಧಿಕ ಎಕ್ರೆ ಗೋಮಾಳ ಭೂಮಿಯಿದ್ದು ಅದನ್ನು ಮನೆ ನಿವೇಶನವಾಗಿ ಪರಿವರ್ತಿಸಿ ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಕುಂದಾಪುರ ತಾಲೂಕು ಪಂಚಾಯಿತಿ ಹಾಗೂ ಸರ್ವೇ ಇಲಾಖೆಗಳಲ್ಲಿ ಶೇ.೨೫ ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಸಿಬ್ಬಂದಿಗಳು ಕಾರ್‍ಯ ನಿರ್ವಹಿಸುತ್ತಿದ್ದಾರೆ. ಇಲಾಖಾ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೆ, ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸರ್ಕಾರ ಕೂಡಲೆ ಕೊರತೆಯಾದ ಸಿಬ್ಬಂದಿಗಳನ್ನು ತುಂಬಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಬಿಪಿ‌ಎಲ್ ಕಾರ್ಡ್‌ದಾರರಿಗೆ 1 ರೂಪಾಯಿಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಸರ್ಕಾರ ಪ್ರಚಾರಕ್ಕಾಗಿ ಮಾರ್ಗಸೂಚಿಗಳನ್ನು ಮೀರಿ ಬೇಕಾಬಿಟ್ಟಿ ಪಡಿತರ ಚೀಟಿಗಳನ್ನು ವಿತರಣೆ ಮಾಡಿತ್ತು. ಇದೀಗ ಅದೇ ಸರ್ಕಾರ ಇಲ್ಲದ ಕಾರಣಗಳನ್ನು ಹೇಳಿ ಪಡಿತರ ಚೀಟಿಗಳನ್ನು ರದ್ದು ಮಾಡುವ ಕಾರ್ಯಕ್ಕೆ ಮುಂದಾಗಿದೆ. ಸರ್ಕಾರದ ಈ ರೀತಿಯ ಇಬ್ಬಗೆಯ ನೀತಿಯಿಂದಾಗಿ ಬಡವರಿಗೆ ಸಂಕಷ್ಟಗಳು ಎದುರಾಗುತ್ತಿದೆ. ಬಡವರ ಬದುಕಿನೊಂದಿಗೆ ಚಲ್ಲಾಟವಾಡುವ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಿಕೊಂಡು ಪ್ರಸ್ತುತ ಉದ್ಬವವಾಗಿರುವ ಸಮಸ್ಯೆಗೆ ೨೦ ದಿನದ ಒಳಗೆ ಪರಿಹಾರ ರೂಪಿಸದೆ ಇದ್ದರೆ, ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟವನ್ನು ಮಾಡಲಿದೆ ಎಂದು ಕಿಶೋರ ಇದೆ ಸಂದರ್ಭದಲ್ಲಿ ಎಚ್ಚರಿಸಿದರು.

ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಪುರಸಭಾ ಸದಸ್ಯ ಸತೀಶ್ ಶೆಟ್ಟಿ ಕಿದಿಯೂರು, ಪಕ್ಷದ ಪ್ರಮುಖ ಎ.ಅನಂತಕೃಷ್ಣ ಕೊಡ್ಗಿ, ಹಿಂದುಳಿದ ವರ್ಗಗಳ ಮೋರ್ಚಾದ ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರ ಪೂಜಾರಿ ಅಸೋಡು, ಅರುಣ್ ಬಾಣ, ಪ್ರಶಾಂತ್ ಸಾರಂಗ ಮೊದಲಾದವರು ಉಪಸ್ಥಿತರಿದ್ದರು.
ಜನಸಾಮಾನ್ಯರ ಸಮಸ್ಯೆ ಬಗ್ಗೆ ಸರಕಾರದ ಕಣ್ಣು ತೆರೆಸುವ ಸಲುವಾಗಿ ಸೆ.೩೦ ರಂದು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತದೆ.
– ಬಿ. ಕಿಶೋರ್ ಕುಮಾರ್

Write A Comment