ಮಂಗಳೂರು, ಸೆ. 27: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದ ಫೋಟೊಗಳನ್ನು ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಆರೋಪದಲ್ಲಿ ಬೆಂಗಳೂರಿನ ಟೆಕ್ಕಿಯೊಬ್ಬನನ್ನು ಬಂದರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜುಡೀಷಿಯಲ್ ಲೇಔಟ್ ನಿವಾಸಿ ಶ್ಯಾಮ್ ಪ್ರಸಾದ್ ಭಟ್ (37) ಬಂಧಿತ ಆರೋಪಿ.
ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಈತ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಹೇಳಲಾಗಿದೆ. ಕುದ್ರೋಳಿ ದೇವಸ್ಥಾನದ ಸಭಾಂಗಣ ಒಂದರಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಸೌಹಾರ್ದ ಈದ್ ಮಿಲನ್ ಕಾರ್ಯಕ್ರಮದ ಫೋಟೊಗಳನ್ನು ಪ್ರಕಟಿಸಿ ದೇವಸ್ಥಾನದಲ್ಲಿ ಮಾಂಸದೂಟ ಮಾಡಲಾಗಿದೆ ಎಂದು ಪ್ರಚಾರ ಮಾಡಲಾಗಿತ್ತು. ಈ ಬಗ್ಗೆ ಕುದ್ರೋಳಿ ದೇವಸ್ಥಾನದ ಆಡಳಿತಗಾರರು ಎರಡು ತಿಂಗಳ ಹಿಂದೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸೈಬರ್ ಕ್ರೈಂ ವಿಭಾಗದ ಪೊಲೀಸರ ಸಹಕಾರದಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಎರಡು ತಿಂಗಳ ಹಿಂದೆಯೇ ಆರೋಪಿಯನ್ನು ಗುರುತಿಸಿ ಬಂಧಿಸುವ ಪ್ರಕ್ರಿಯೆ ನಡೆದಿತ್ತು. ಈತ ಆರೋಗ್ಯದ ನೆಪ ಹೇಳಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ. ಇದರ ಮಧ್ಯೆ ಫೇಸ್‌ಬುಕ್ ಅಕೌಂಟ್ ಕ್ಲೋಸ್ ಮಾಡಿದ್ದ. ಮೊಬೈಲ್ ನಂಬರನ್ನೂ ಬದಲಾಯಿಸಿದ್ದ. ತನ್ನ ವಾಸವನ್ನೂ ಬದಲಾಯಿಸಿದ್ದ ಇದರಿಂದ ಬಂಧನಕ್ಕೆ ಕಷ್ಟವಾಗಿತ್ತು. ಈತನ ಹೊಸ ಫೇಸ್‌ಬುಕ್ ಅಕೌಂಟರನ್ನು ಪತ್ತೆ ಹಚ್ಚಿದ ಪೊಲೀಸರ ಯುವತಿಯೊಬ್ಬರ ಅಕೌಂಟ್ ಬಳಸಿ ಆತನೊಂದಿಗೆ ಚಾಟ್ ಮಾಡಿದ್ದರು. ತಕ್ಷಣ ಪ್ರತಿಕ್ರಿಯಿಸಿದ ಶ್ಯಾಮ್‌ಪ್ರಸಾದ್, ತನ್ನ ನೂತನ ಮೊಬೈಲ್ ನಂಬರ್ ಹಾಗೂ ಇತರ ಮಾಹಿತಿ ನೀಡಿದನು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಬಂದರು ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.
