ಕರಾವಳಿ

ಸೆ.27 : ಸಿ.ಎಮ್.ಸಿದ್ದು ಉಡುಪಿ, ಮಂಗಳೂರಿಗೆ ಭೇಟಿ.

Pinterest LinkedIn Tumblr

siddaramayya

ಮಂಗಳೂರು / ಉಡುಪಿ, ಸೆ.23: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸೆ.27ರಂದು ಅವರು ಉಡುಪಿ ಹಾಗೂ ದ.ಕ. ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸ ಲಿದ್ದಾರೆ.  ಸೆ.27ರಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿ ಬಳಿಕ ರಸ್ತೆಯ ಮೂಲಕ ಉಡುಪಿಗೆ ಆಗಮಿಸುವರು.

ಪೂರ್ವಾಹ್ನ 11 ಗಂಟೆಗೆ ಬಾರಕೂರು ಸಮೀಪದ ಬೆಣ್ಣೆಕುದ್ರುನಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಇವರ ವತಿಯಿಂದ ಆಯೋಜಿಸಿರುವ ಸಮಸ್ತ ಮೊಗವೀರ ಸಮುದಾಯದ ಕುಲದೇವರಾದ ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ನವೀಕರಿಸಿದ ‘ಗುರುಪೀಠ’ದ ಉದ್ಘಾಟನೆ ನೆರವೇರಿಸುವರು. ಬಳಿಕ ಅವರು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಹಾಗೂ ಮಣಿಪಾಲ ವಿವಿ ಸಹಯೋಗದಲ್ಲಿ ಎಲ್ಲಾ ಸಮಾಜದ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣಾ ಸಮಾರಂಭದಲ್ಲಿ ಭಾಗವಹಿಸುವರು.

ಆ ಬಳಿಕ ಅಪರಾಹ್ನ 2 ಗಂಟೆಯಿಂದ ಸಂಜೆ 4ರವರೆಗೆ ಮಣಿಪಾಲದ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. 4:30ಕ್ಕೆ ಕಾಪು ವಿಧಾನ ಸಭಾಕ್ಷೇತ್ರದ ಪಕ್ಷದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿಗೆ ತೆರಳುವರು.

ಸಂಜೆ 6:30ಕ್ಕೆ ಮಂಗಳೂರಿನ ಕುದ್ರೋಳಿಯ ಶ್ರೀಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಯೋಜಿಸಿರುವ ಮಂಗಳೂರು ದಸರಾ-2014 ನವರಾತ್ರಿ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 8:40ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.

Write A Comment