ಮಂಗಳೂರು, ಸೆ.23: ಮಹಾನಗರ ಪಾಲಿಕೆಯ ಶೆ.22.75 ಯೋಜನೆಯ ಸೌಲಭ್ಯ ಪಡೆಯುವಂತಾಗಲು ಪೌರ ಕಾರ್ಮಿಕರ ಆದಾಯ ಮಿತಿಯನ್ನು ಮೂರು ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು.
ನಗರದ ಪುರಭವನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆದಾಯ ಮಿತಿ ಹೆಚ್ಚಳ ಪ್ರಸ್ತಾಪ ವನ್ನು ಪಾಲಿಕೆ ಪರಿಷತ್‌ನಲ್ಲಿ ಮಂಡಿಸಿದ್ದು, ಇದಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದರೆ, ಮುಂದಿನ ದಿನಗಳಲ್ಲಿ ಪೌರಕಾರ್ಮಿಕರಿಗೆ ಹಲವು ಸೌಲಭ್ಯಗಳ ಸಹಿತ, ಅವರ ಮಕ್ಕಳ ಶಿಕ್ಷಣಕ್ಕೆ ನೆರವು ಸಿಗಲಿದೆ ಎಂದು ಮೇಯರ್ ಮಹಾಬರ್ಲ ಮಾರ್ಲ ತಿಳಿಸಿದರು.
ಮಂಗಳೂರು ಮಹಾನಗರದ ಶುಚಿತ್ವಕ್ಕೆ ಹಲವು ಬಾರಿ ಪ್ರಶಸ್ತಿಗಳು ಲಭಿಸಿದ್ದು, ಇದಕ್ಕೆ ಪೌರಕಾರ್ಮಿಕರು ಪ್ರಮುಖ ಕಾರಣ. ನಗರ ನೈರ್ಮಲ್ಯ ದಲ್ಲಿ ಅವರ ಕೊಡುಗೆ ಅಪೂರ್ವ. ಕಾರ್ಮಿಕರು ತಮ್ಮ ವೃತ್ತಿಯನ್ನು ಶ್ರೇಷ್ಠ ಎಂದು ಭಾವಿಸಿ ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕು. ಇದಕ್ಕೆ ಪೂರಕ ಸೌಲಭ್ಯ ನೀಡಲು ಪಾಲಿಕೆ ಸದಾ ಸಿದ್ಧವಾಗಿದೆ ಎಂದು ಮೇಯರ್ ಹೇಳಿದರು.
ಮನಪಾ ಸಚೇತಕ ಶಶಿಧರ ಹೆಗ್ಡೆ ಮಾತನಾಡಿ, 2002-03ರಲ್ಲಿ ಜೆ.ಆರ್. ಲೋಬೊ ಆಯುಕ್ತರಾಗಿದ್ದಾಗ 70 ಪೌರಕಾರ್ಮಿಕರನ್ನು ಖಾಯಂ ಮಾಡ ಲಾಗಿತ್ತು. ಇದೀಗ ಮತ್ತೆ ಖಾಯಂ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಗಿತ ವ್ಯಕ್ತಪಡಿಸಿದ್ದು, ಮಂಗಳೂರಿನ ಉಳಿದ ಎಲ್ಲರನ್ನೂ ಖಾಯಂಗೊಳಿಸಿ, ಸರಕಾರದ ಎಲ್ಲ ಸೌಲಭ್ಯ ಸಿಗುವಂತೆ ಆಗಬೇಕು ಎಂದರು.
ಮನಪಾ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ವಲಯ ಆಯುಕ್ತೆ ಪ್ರಮೀಳಾ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆರೋಗ್ಯ ಕುರಿತು ಕೆಎಂಸಿ ವೈದ್ಯ ಡಾ.ಪ್ರಸನ್ನ ಮತ್ತು ಕಾನೂನುಗಳ ಬಗ್ಗೆ ವಕೀಲ ಎಸ್.ಪಿ.ಚೆಂಗಪ್ಪ ಪೌರಕಾರ್ಮಿಕರಿಗೆ ಮಾಹಿತಿ ನೀಡಿದರು.
ಉಪಮೇಯರ್ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಡಿ.ಕೆ.ಅಶೋಕ್ ಕುಮಾರ್, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ಅಪ್ಪಿ, ರಮೀಝಾ ನಾಸಿರ್, ಪೌರ ಕಾರ್ಮಿಕರ ಸಂಘದ ಉಪಾಧ್ಯಕ್ಷೆ ಚಂದ್ರಾವತಿ, ಉಪ ಆಯುಕ್ತ ಕಾಂತರಾಜು, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಕೆಎಂಸಿ ವೈದ್ಯ ಡಾ.ಪ್ರಸನ್ನ ಉಪಸ್ಥಿತರಿದ್ದರು. ಮನಪಾ ಸಿಬ್ಬಂದಿ ಬಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ಅಧಿಕಾರಿ ಚಿತ್ತರಂಜನ್ ವಂದಿಸಿದರು.







