ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ವಿ.ರಶ್ಮಿ ಅವರು ಭೇಟಿ ನೀಡಿ ರಜಾ ದಿನದ ಕಡತಗಳ ವಿಲೇವಾರಿ ಕಾರ್ಯಕ್ರಮವನ್ನು ಪರಿಶೀಲಿಸಿದರು.
ಮಂಗಳೂರು: ರಾಜ್ಯ ಸರಕಾರದ ಸೂಚನೆಯ ಮೇರೆಗೆ ರಜಾ ದಿನದಂದು ದ.ಕ. ಜಿಲ್ಲೆಯಲ್ಲಿ ನಡೆದ ಕಡತ ಯಜ್ಞದಲ್ಲಿ ಎರಡು ದಿನಗಳಲ್ಲಿ ಸುಮಾರು 23,000 ಕಡತಗಳ ವಿಲೇವಾರಿವಾಗಿದೆ. ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಲ್ಲಿ ಎರಡು ದಿನಗಳ ಕಡತ ವಿಲೇವಾರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.ಬಾನುವಾರವೂ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡತ ಯಜ್ಞ ಬಿರುಸಿನಿಂದ ನಡೆಯಿತು.
ಎರಡು ದಿನಗಳ ಕಾಲ ಕಂದಾಯ ಇಲಾಖೆಗೆ ಸಂಬಂಧಿಸಿ 10,890, ಜಿ.ಪಂ.ಗೆ ಸಂಬಂಧಿಸಿ 1,283, ಪುರಸಭೆ-ನಗರಪಂಚಾಯತ್‌ನ 1,121, ಮನಪಾದಲ್ಲಿ 3,052, ಜಿ.ಪಂ.ನ ಎಂಜಿನಿಯರಿಂಗ್ ವಿಭಾಗದಲ್ಲಿ 1,190, ಸಾರಿಗೆ ಇಲಾಖೆಯ 269, ಸಮಾಜ ಕಲ್ಯಾಣ ಇಲಾಖೆಯ 737, ಮೂಡದಲ್ಲಿ 652 ಕಡತಗಳು ವಿಲೇವಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ನಡೆಯುತ್ತಿದ್ದ ಕಡತ ವಿಲೇವಾರಿ ಸಂದರ್ಭ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ವಿ.ರಶ್ಮಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಉಪಸ್ಥಿತರಿದ್ದರು.
ಸರಕಾರಿ ಇಲಾಖೆಗಳಿಗೆ ವಾರದ ರಜೆ ಎಂದು ಗೊತ್ತು ಮಾಡಲಾದ ರವಿವಾರ ದ.ಕ. ಜಿಲ್ಲೆಯ ಸರಕಾರಿ ಕಚೇರಿಗಳೆಲ್ಲ ಕಡತ ವಿಲೇವಾರಿಗಾಗಿ ತೆರೆದಿತ್ತು. ಗ್ರಾ.ಪಂ.ನಿಂದ ಆರಂಭವಾಗಿ ದ.ಕ. ಜಿಲ್ಲಾಡಳಿತದವರೆಗೂ ವಿವಿಧ ಸ್ತರದ ಅಧಿಕಾರಿಗಳು ರವಿವಾರ ಕಚೇರಿಗೆ ಬಂದು ಕಡತ ವಿಲೇವಾರಿಯಲ್ಲಿ ಭಾಗವಹಿಸಿದ್ದು ವಿಶೇಷ.
ದ.ಕ. ಜಿಲ್ಲೆಯಲ್ಲಿ ಕಂದಾಯ ಇಲಾಖೆಯ 29,069 ಕಡತಗಳು ವಿಲೇವಾರಿಗೆ ಬಾಕಿ ಇದ್ದು, ಉಳಿದಂತೆ ಇನ್ನೂ ಸಾವಿರಾರು ಕಡತಗಳು ಇತರ ಇಲಾಖೆಯಿಂದ ಬಾಕಿ ಇದ್ದು, ಎರಡು ದಿನದಲ್ಲಿ ಸಾಧ್ಯವಿದ್ದಷ್ಟು ಕಡತ ವಿಲೇವಾರಿ ಮಾಡಲು ದ.ಕ. ಜಿಲ್ಲಾಡಳಿತ ನಿರ್ಧರಿಸಿತ್ತು. ಇದರಂತೆ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಸರಕಾರಿ ಕಚೇರಿಗಳಲ್ಲಿ ಸುಮಾರು 10,000ದಷ್ಟು ಕಡತ ವಿಲೇವಾರಿ ಮಾಡುವಲ್ಲಿ ಯಶಸ್ವಿಯಾಗಿದೆ.
ಬಾನುವಾರವೂ ತೆರೆದ ಕಚೇರಿ – ಸಾರ್ವಜನಿಕರಲ್ಲಿ ಕುತೂಹಲ.!
ಕಡತ ವಿಲೇವಾರಿ ಹಿನ್ನೆಲೆಯಲ್ಲಿ ಶನಿವಾರ ಸರಕಾರಿ ಕಚೇರಿಗಳಲ್ಲಿ ತುರ್ತು ಸೇವೆಯನ್ನು ಮಾತ್ರ ಸಾರ್ವಜನಿಕರಿಗೆ ಒದಗಿಸಲಾಗಿತ್ತು. ಈ ಕುರಿತಂತೆ ಮಾಧ್ಯಮಗಳಲ್ಲಿ ಸೂಚನೆ ನೀಡಿದ್ದರೂ ಕೆಲವರು ಕಚೇರಿಗಳಿಗೆ ಬಂದು ಕೆಲವೆಡೆ ವಾಪಾಸ್ ಹೋಗಿದ್ದರು. ಆದರೆ ರವಿವಾರ ರಜಾದಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಚೇರಿಯತ್ತ ಸುಳಿಯಲಿಲ್ಲ. ವಿಶೇಷ ಅಂದರೆ, ಕೆಲವು ಗ್ರಾ.ಪಂ ಹಾಗೂ ತಹಶೀಲ್ದಾರ್ ಕಚೇರಿಗಳು ರವಿವಾರ ತೆರೆದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕುತೂಹಲದಿಂದ ಕಚೇರಿಗೆ ಆಗಮಿಸಿ, ವಿಚಾರಿಸುವುದು ಕಂಡು ಬಂತು.
ರವಿವಾರ ಬೆಳಿಗ್ಗೆ 10 ಗಂಟೆಗೆ ಆಗಮಿಸಿದ ಅಧಿಕಾರಿಗಳು, ಸಿಬಂದಿ ಕಡತ ಪರಿಶೀಲನೆಯಲ್ಲಿ ನಿರತರಾದರು. ಹಿರಿಯ ಅಧಿಕಾರಿಗಳು ಕಡತ ವಿಲೇವಾರಿಗೆ ಮಾರ್ಗದರ್ಶನ ಮಾಡಿದರು. ಬಹುತೇಕ ಫೈಲ್‌ಗಳು ಕಂಪ್ಯೂಟರ್‌ನಲ್ಲೇ ‘ಫೀಡ್’ ಆಗಿರುವ ಕಾರಣದಿಂದ ಕಂಪ್ಯೂಟರ್ ಕೆಲಸವೇ ಜಾಸ್ತಿಯಾಗಿತ್ತು.
ಮನಪಾ : ಒಟ್ಟು 3052 ಕಡತಗಳು ವಿಲೇವಾರಿ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಶನಿವಾರ 1903 ಹಾಗೂ ರವಿವಾರ 1149 ಕಡತಗಳು ಸೇರಿ ಒಟ್ಟು 3052 ಕಡತಗಳು ವಿಲೇವಾರಿಯಾಗಿದೆ. 647 ಕಡತಗಳು ಮಾತ್ರ ವಿಲೇವಾರಿಗೆ ಬಾಕಿ ಇದ್ದು, ಇದರಲ್ಲಿ ಬಹುತೇಕ ಕಡತಗಳ ಮರು ಸಮೀಕ್ಷೆ, ಪುನರಾವಲೋಕನ ಹಾಗೂ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವಂತಹುದು ಎಂದು ಪಾಲಿಕೆ ಪ್ರಭಾರ ಆಯುಕ್ತ ಗೋಕುಲ್‌ದಾಸ್ ನಾಯಕ್ ತಿಳಿಸಿದ್ದಾರೆ.