ಕುಂದಾಪುರ: ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನ ನೀಡುವ ಚಿಕ್ಕಿ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಮಗುವಿನ ಪಾಲಕರು ಅಂಗನವಾಡಿ ಶಿಕ್ಷಕಿಗೆ ಪೊರಕೆಯಿಂದ ಹಲ್ಲೆ ಮಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಘಟನೆ ಕಾಲ್ತೋಡು ಗ್ರಾಮದ ಯಡೇರಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ. ಸುಚಿತ್ರ ಶೆಟ್ಟಿ ಹಲ್ಲೆಗೊಳಗಾದ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ.
ಸುಚಿತ್ರಾ ಶೆಟ್ಟಿ( ಹಲ್ಲೆಗೊಳಗಾದ ಅಂಗನವಾಡಿ ಶಿಕ್ಷಕಿ)
ಘಟನೆಯ ವಿವರ: ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನ ಸಮಯದಲ್ಲಿ ಕೊಡಮಾಡುವ ಚಿಕ್ಕಿ (ಸ್ವೀಟ್ ) ವಿತರಣೆಯಲ್ಲಿ ತಮ್ಮ ಮಗುವಿಗೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಹಳೆ ಕಾಲ್ತೋಡಿನ ನಿವಾಸಿಗಳಾದ ಜಲಜಾಕ್ಷಿ ಶೆಡ್ತಿ ಹಾಗೂ ದೀಪಿಕಾ ಶೆಟ್ಟಿ ಎಂಬುವವರು ಶುಕ್ರವಾರ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಕರ್ತವ್ಯದಲ್ಲಿರುವಾಗಲೇ ಶಿಕ್ಷಕಿ ಸುಚಿತ್ರ ಶೆಟ್ಟಿಯವರಿಗೆ ಪೊರಕೆಯಿಂದ ಹಿಗ್ಗಾಮುಗ್ಗ ತಳಿಸಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಅಂಗನವಾಡಿ ಸಹಾಯಕಿ ಮಧ್ಯ ಪ್ರವೇಶಿಸಿ ಹೆಚ್ಚಿನ ಅನಾಹುತ ಸಂಭವಿಸದಂತೆ ತಡೆದರು ಎನ್ನಲಾಗಿದೆ. ಗಾಯಗೊಂಡ ಶಿಕ್ಷಕಿಯನ್ನು ಕುಂದಾಪುರದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅಂಗನವಾಡಿಯಲ್ಲಿ 14 ಮಕ್ಕಳು ಇದ್ದಾರೆ, ಇಲಾಖೆಯ ನಿಯಮದಂತೆ ಮಧ್ಯಾಹ್ನ ತಿನ್ನಲು ಪ್ರತಿ ಮಗುವಿಗೆ 10 ಗ್ರಾಂ ಚಿಕ್ಕಿ ನೀಡಬೇಕಾಗುತ್ತದೆ, ಆದರೆ ಚಿಕ್ಕಿ ಬರುವುದು 15 ಗ್ರಾಂ ಪ್ಯಾಕ್‌ನಲ್ಲಿ ಆದ್ದರಿಂದ ನಾವು ವಿದ್ಯಾರ್ಥಿಗಳಿಗೆ 10 ಗ್ರಾಂ ಭಾಗ ಮಾಡಿ ಉಳಿದ ಚಿಕ್ಕಿಯನ್ನು ಇನ್ನೊಬ್ಬ ವಿದ್ಯಾರ್ಥಿಗಳಿಗೆ ಕೊಡುತ್ತೇವೆ. ಆದರೆ ಕೆಲವೊಮ್ಮೆ ಅದು ಭಾಗ ಮಾಡುವಾಗ ಪುಡಿಯಾಗುವ ಸಾಧ್ಯತೆಯಿದೆ. ನಾವು ಖಂಡಿತವಾಗಿಯೂ ಉದ್ದೇಶ ಪೂರ್ವಕವಾಗಿ ಚಿಕ್ಕಿ ವಿತರಿಸುವಾಗ ತಾರತಮ್ಯ ಮಾಡಿಲ್ಲ. ಎಲ್ಲಾ ಮಕ್ಕಳನ್ನು ನಾವು ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತೇವೆ. -ಸುಚಿತ್ರಾ ಶೆಟ್ಟಿ, ಹಲ್ಲೆಗೊಳಗಾದ ಅಂಗನವಾಡಿ ಶಿಕ್ಷಕಿ
ಠಾಣೆಗೆ ಅಂಗನವಾಡಿ ಕಾರ್ಯಕರ್ತೆಯರ ಭೇಟಿ : ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಬೈಂದೂರು ಠಾಣೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಇಂದು ರಕ್ಷಣೆ ಇಲ್ಲದಂತಾಗಿದೆ. ಕರ್ತವ್ಯದಲ್ಲಿರುವಾಗಲೇ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಆರೋಪಿಗೆ ಕಠಿಣ ಶಿಕ್ಷೆಯಾಗಲೇಬೇಕು, ಇಲ್ಲದಿದ್ದರೆ ಜಿಲ್ಲಾ ಸಂಘದ ನೇತ್ರತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ವಲಯ ಮೇಲ್ವಿಚಾರಕಿ ಶಶಿಕಲಾ, ಲಕ್ಷ್ಮೀ ನಾಯಕ್ ಸೇರಿದಂತೆ ಬೈಂದೂರು ವ್ಯಾಪ್ತಿಯ ಹಲವು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

