(ಸಾಂದರ್ಭಿಕ ಚಿತ್ರ)
ಕುಂದಾಪುರ: ಬಹುಬೇಡಿಕೆಯ ಮಣಿಪಾಲ – ಮಂತ್ರಾಲಯ ಸರ್ಕಾರಿ ಬಸ್ ಪುನರಾರಂಭಗೊಂಡು, ಇಲಾಖೆ ಒಳ್ಳೆಯ ಆದಾಯ ಗಳಿಸುತ್ತಾ ಒಂದು ತಿಂಗಳಾಗುತ್ತಿದ್ದಂತೆಯೇ ಈ ಮಾರ್ಗಸೂಚಿಯನ್ನು ಹೇಗಾದರೂ ಬಂದ್ ಮಾಡಬೇಕು ಎಂಬ ವಿಚಿತ್ರ ವೈರಾಗ್ಯ ಉಡುಪಿ ಡಿಪೋದವರನ್ನು ಕಾಡಲಾರಂಭಿಸಿದೆ ! ಇದಕ್ಕಾಗಿ ಅವರು ನಾನಾ ನಮೂನೆಯ ಕಾರಣಗಳನ್ನು ಹುಡುಕುತ್ತಿದ್ದಾರೆ. ಇದಕ್ಕೆ ಸರಿಯಾಗಿ ಖಾಸಗಿ ಸಾರಿಗೆ ಸಂಸ್ಥೆಯವರೂ ನಾನಾಬಗೆಯ ‘ತಂತ್ರ’ಗಳಿಂದ ಅಧಿಕಾರಿಗಳ ವೈರಾಗ್ಯ ಹೆಚ್ಚಿಸುವಲ್ಲಿ ಸಹಕರಿಸುತ್ತಿದ್ದಾರೆ.
ಯಾವುದೇ ಸರ್ಕಾರಿ ಬಸ್ ನ ಸಂಚಾರ ನಿಲ್ಲಿಸಬೇಕಾದರೆ ಡಿಪೋ ಮ್ಯಾನೇಜರ್ ನೀಡುವ ಕಾರಣ ‘ಕಲೆಕ್ಷನ್ ಇಲ್ಲ’ ಎಂಬುದು. ಕರಾವಳಿ ಜನರ ಬಹುಕಾಲದ ಬೇಡಿಕೆಯ ಫಲವಾಗಿ ಪ್ರಾರಂಭಗೊಂಡ ಉಡುಪಿ – ಮಂತ್ರಾಲಯ ವೇಗದೂತ ಬಸ್ನ ಯಾನವನ್ನೂ ಇದೇ ವಿಚಿತ್ರ ಮತ್ತು ಸುಳ್ಳು ಕಾರಣ ಮುಂದೊಡ್ಡಿ ಎರಡು ಬಾರಿ ನಿಲ್ಲಿಸಲಾಯಿತು. ಆದರೆ ಜನರ ಆಕ್ರೋಶದಿಂದ ಕಣ್ತೆರೆದ ಇಲಾಖೆ ಮೂರನೇ ಬಾರಿ ಪುನಃ ಯಾನ ಆರಂಭಿಸಿತು. ಇದೀಗ ಒಂದು ತಿಂಗಳಾಗುತ್ತಿದ್ದಂತೆಯೇ ಮತ್ತೆ ಹಳೇ ಚಾಳಿ ಶುರುವಿಟ್ಟುಕೊಂಡು ‘ಕಲೆಕ್ಷನ್ ಇಲ್ಲ’ ಎಂಬ ಗೊಣಗಾಟ ಪ್ರಾರಂಭವಾಗಿದೆ.
ಉಡುಪಿಯ ಕೆ.ಎಸ್.ಆರ್.ಟಿ.ಸಿ. ಡಿಪೋ ಪ್ರಾರಂಭಗೊಂಡು ಒಂದು ವರ್ಷಾಚರಣೆಯ ಅಂಗವಾಗಿ 2013 ರ ನವೆಂಬರ್ನಲ್ಲಿ ಉಡುಪಿ – ಮಂತ್ರಾಲಯ ಬಸ್ಸನ್ನು ಪ್ರಾರಂಭಿಸಲಾಗಿತ್ತು. ಇದೇ ಮಾರ್ಗದಲ್ಲಿ ಬಳ್ಳಾರಿವರೆಗೆ ಸಂಚರಿಸುವ ಖಾಸಗಿ ಬಸ್ಗಳವರ ಲಾಬಿಯಿಂದಾಗಿ ಈ ಸರ್ಕಾರಿ ಬಸ್ 2013 ರ ಡಿಸೆಂಬರ್ 22 ರಂದು ಸಂಚಾರ ನಿಲ್ಲಿಸಿತು. ತುಂಬಾ ಅನುಕೂಲಕರ ಸಮಯದಲ್ಲಿ ಸಂಚರಿಸುತ್ತಿದ್ದ ಈ ಸರ್ಕಾರಿ ಬಸ್ನ ಬಂದ್ನಿಂದಾಗಿ ಮಂತ್ರಾಲಯ ಪ್ರವಾಸಿಗರಿಗೆ ಬಹು ತೊಂದರೆಯುಂಟಾಯಿತು. ಮಾರ್ಗದುದ್ದಕ್ಕೂ ಜನ ಆಕ್ರೋಶ ವ್ಯಕ್ತಪಡಿಸಿ ಒತ್ತಡ ತಂದಿದ್ದರಿಂದ 2014ರ ಮೇ 7 ರಂದು ಮತ್ತೆ ಪ್ರಾರಂಭಗೊಂಡಿತು. ದುರಾದೃಷ್ಟದಿಂದ ಜೂನ್ 9 ರಂದು ಪುನಃ ಬಂದ್ ಆಯಿತು. ಆದರೆ ನಾಗರಿಕರ ಆಕ್ರೋಷದಿಂದಾಗಿ ಕಳೆದ ಆಗಸ್ಟ್ 6 ರಿಂದ ಮಣಿಪಾಲ – ಮಂತ್ರಾಲಯ ಎಂದು ಪುನಃ ಓಡಾಟ ಆರಂಭಿಸಿತು.
ಈ ಎಲ್ಲ ಅವಧಿಯಲ್ಲೂ ಈ ಬಸ್ ಇಲಾಖೆಗೆ ಒಳ್ಳೆಯ ಆದಾಯ ತಂದಿದೆ. ಆದರೆ ಜನರ, ಇಲಾಖೆಯ ಹಿತಕ್ಕಿಂತ ಅಧಿಕಾರಿಗಳಿಗೆ ಸ್ವಹಿತವೇ ಮುಖ್ಯ. ಖಾಸಗಿಯವರ ಆಮಿಷ ಇನ್ನೂ ಆಕರ್ಷಕ. ಆದ್ದರಿಂದ ಈ ಬಾರಿ ಮಂತ್ರಾಲಯ ಬಸ್ನ ಸಮಯ ಬದಲಾಯಿಸುವ ಹುನ್ನಾರ ನಡೆದಿದೆ. ಈಗ ಪ್ರತಿದಿನ ಸಂಜೆ ೫ ಗಂಟೆಗೆ ಮಣಿಪಾಲದಿಂದ ಹೊರಟು ಬೆಳಿಗ್ಗೆ 8 ಕ್ಕೆ ಮಂತ್ರಾಲಯ ತಲುಪುತ್ತದೆ. ಅಂದೇ ಮದ್ಯಾಹ್ನ 2.30 ಕ್ಕೆ ಅಲ್ಲಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಮಣಿಪಾಲ ಸೇರುತ್ತಿದೆ. ಇದರಿಂದಾಗಿ ಎರಡೇ ದಿನದಲ್ಲಿ ಈ ಭಾಗದ ಜನರು ಮಂತ್ರಾಲಯ ಯಾತ್ರೆ ಮುಗಿಸಬಹುದಾಗಿದೆ.
ಆದರೆ ಈಗ ಮದ್ಯಾಹ್ನ 2.30 ಕ್ಕೆ ಮಣಿಪಾಲದಿಂದ ಹೊರಡುವಂತೆ ಮಾಡುವ ಯತ್ನಗಳು ಡಿಪೋದಿಂದ ನಡೆದಿವೆ. ಹೀಗಾದರೆ ಬಸ್ ಮಂತ್ರಾಲಯ ತಲುಪುವಾಗ ಬೆಳಗಿನ ಜಾವ ೩ಗಂಟೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಆಗ ಸಹಜವಾಗಿಯೇ ಜನರು ಸರ್ಕಾರಿ ಬಸ್ಸಿಗೆ ಕಡಿಮೆಯಾಗುತ್ತಾರೆ. ಕಲೆಕ್ಷನ್ ಇಲ್ಲ ಎಂಬ ಡಿಪೋದವರ ವಾದ ಸತ್ಯವಾಗುತ್ತದೆ. ಪರಿಣಾಮವಾಗಿ ಬಸ್ ಯಾನ ಸ್ಥಗಿತಗೊಳ್ಳುತ್ತದೆ. ಈ ಯೋಜನೆ ಕಾರ್ಯಗತಗೊಳಿಸಲು ಖಾಸಗಿ ಏಜೆಂಟರೂ ಮಾರ್ಗದುದ್ದಕ್ಕೂ ಇರುವ ಸರ್ಕಾರಿ ಬಸ್ ಏಜೆಂಟರನ್ನು ಸಂಪರ್ಕಿಸಿದ್ದಾರೆ. ಏಕಾಏಕಿ ಸರ್ಕಾರಿ ಬಸ್ ನಿಲ್ಲಿಸಿದರೆ ಜನ ರೊಚ್ಚಿಗೇಳಬಹುದು ಎಂದು ಉಡುಪಿ ಡಿಪೋದವರು ತಳಮಳಗೊಂಡಿದ್ದಾರೆ. ಇತ್ತ ಖಾಸಗೀಯವರ ಒತ್ತಡವೂ ಜಾಸ್ತಿಯಾಗುತ್ತಿದೆ. ಮುಂದೇನಾಗುವುದೋ ಗುರುರಾಯರೇ ಬಲ್ಲರು.
ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಮಣಿಪಾಲ – ಮಂತ್ರಾಲಯ ಬಸ್ ಯಾನದಿಂದ 12 ಸಾವಿರದಿಂದ 32 ಸಾವಿರ ರೂ. ವರೆಗೂ ಕಲೆಕ್ಷನ್ ಬಂದಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜನರು ಮನೆಯಲ್ಲೇ ಹಬ್ಬ ಆಚರಿಸುವುದರಿಂದ ಈ ಅವಧಿಯ ರಜಾ ದಿನಗಳಲ್ಲಿ ಸ್ವಲ್ಪ ಕಲೆಕ್ಷನ್ ಕಡಿಮೆ ಬಂದಿತ್ತು. ಈಗ ಪಿತ್ರಪಕ್ಷ ನಡೆಯುತ್ತಿರುವುದರಿಂದ ಕಲೆಕ್ಷನ್ ಹೇಗೂ ಕಡಿಮೆಯಾಗಿದೆ. ಎಲ್ಲಾ ರೂಟುಗಳಲ್ಲೂ ಇದು ಮಾಮೂಲಿ. ಸೆ. 15ರಂದು 4೦ ಸಾವಿರ ರೂ. ಕಲೆಕ್ಷನ್ ಬಂದಿದೆ.
ಮುಂದಿನ ನವರಾತ್ರಿ ಮತ್ತು ದೀಪಾವಳಿ ಸಮಯ ಸಾಲಾಗಿ 9-10 ದಿನ ರಜೆ ಬರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ಇದೆ. ಆ ವೇಳೆ ಸ್ವಾಭಾವಿಕವಾಗಿಯೇ ಕಲೆಕ್ಷನ್ ಹೆಚ್ಚುತ್ತದೆ. ಆದರೆ ಪಿತ್ರಪಕ್ಷದ ಅವಧಿಯಲ್ಲೇ ಕಲೆಕ್ಷನ್ ಇಲ್ಲ ಎಂಬ ಕಾರಣ ಮುಂದೊಡ್ಡಿ ಮಂತ್ರಾಲಯ ಬಸ್ ನಿಲ್ಲಿಸುವ ತಯಾರಿ ನಡೆದಿದೆ.
ಉಡುಪಿಯಿಂದ ಮೈಸೂರು, ಬೆಂಗಳೂರಿಗೆ ತೆರಳುವ ಸರ್ಕಾರಿ ಬಸ್ಗಳು ಕೆಲವು ದಿನ 8-10 ಸಾವಿರ ರೂ. ಕಲೆಕ್ಷನ್ ಸಂಗ್ರಹಿಸಿ ಡೀಸೆಲ್ ಖರ್ಚೂ ಹುಟ್ಟದಿರುವ ಪ್ರಸಂಗವಿದೆ. ಆದರೆ ಈ ಯಾವ ಬಸ್ ಸಂಚಾರಗಳೂ ಬಂದ್ ಆಗಿಲ್ಲ. ದಾವಣಗೆರೆ ವಿಭಾಗದಿಂದ ಉಡುಪಿ, ಮಣಿಪಾಲಗಳಿಗೆ ಆರೇಳು ಬಸ್ಗಳಿವೆ. ಆದರೆ ಮಂಗಳೂರು ವಿಭಾಗದಿಂದದಾವಣಗೆರೆಗೆ ಒಂದೇ ಸರ್ಕಾರಿ ಬಸ್ ಬರುತ್ತಿದೆ. ಪರಿಸ್ಥಿತಿ ಹೀಗೆಲ್ಲಾ ಇರುವಾಗ ಲಾಭದಾಯಕ, ಅನುಕೂಲಕರವಾದ ಮಣಿಪಾಲ – ಮಂತ್ರಾಲಯ ರೂಟಿನ ಮೇಲೆ ಉಡುಪಿ ಡಿಪೋದವರಿಗೆ ಮಲತಾಯಿ ಧೋರಣೆ ಯಾಕೆ?
ಲಾಭದಾಯಕ ರೂಟಿನಲ್ಲಿ ಡಿಪೋದವರು ಈ ರೀತಿಯ ಆಟ ಆಡುತ್ತಿದ್ದರೂ ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗಾಧಿಕಾರಿಗಳಿಗೆ ಜಾಣಕುರುಡೇ? ಪೃಕೃತಿವಿಕೋಪ ಸಂದರ್ಭಗಳಲ್ಲಿ ಮಂತ್ರಾಲಯ, ಕೇದಾರನಾಥಗಳಲ್ಲಿ ಕರಸೇವೆ ನಡೆಸಿದ ಸಂಸದರಿಗೆ ರಾಯರ ಭಕ್ತರ ತೊಂದರೆಗಳ ಅರಿವಿಲ್ಲವೇ? ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಗೆ ಜನರ ಹಿತರಕ್ಷಣೆ ಬೇಡವೇ? ಜನರ ಹಿತವನ್ನು ಅಧಿಕಾರಿಗಳು ಬಲಿಗೊಡಬಾರದು, ಸಾರಿಗೆ ಇಲಾಖೆಗೆ ಸೋರಿಗೆಯಾಗಬಾರದು ಎಂಬ ಕಳಕಳಿಸಾರಿಗೆ ಸಚಿವರಿಗೆ, ಉಸ್ತುವಾರಿ ಸಚಿವರಿಗೆ ಇಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹೇಳುವವರು ಯಾರು?