ಕರಾವಳಿ

ಕುಂದಾಪುರ ತಾಲೂಕು 14 ನೇ ಕ.ಸಾ. ಸಮ್ಮೇಳನ ಅಧ್ಯಕ್ಷರಾಗಿ ಡಾ| ಕನರಾಡಿ ಆಯ್ಕೆ

Pinterest LinkedIn Tumblr

ಕುಂದಾಪುರ: ಮುಂಬರುವ ನವೆಂಬರ್ 29 ಮತ್ತು 30 ರಂದು ಕೊಲ್ಲೂರಿನಲ್ಲಿ ನಡೆಯಲಿರುವ ಕುಂದಾಪುರ ತಾಲೂಕು 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಹಿರಿಯ ಸಾಹಿತಿ, ಭಾಷಾ ವಿಜ್ಞಾನಿ, ಸಂಶೋಧಕ, ಜ್ಞಾನಪದತಜ್ಞ, ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಕನರಾಡಿ ವಾದಿರಾಜ ಭಟ್ಟ ಆಯ್ಕೆಯಾಗಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಈ ವಿಷಯ ತಿಳಿಸಿದರು.

Kanaradi Vadhiraj Bhat

ಸಮ್ಮೇಳನದ ಪೂರ್ವ ತಯಾರಿಗಳ ಬಗ್ಗೆ ಕೊಲ್ಲೂರಿನಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು, ಸಾಹಿತಿಗಳು, ಸಾಹಿತ್ಯಾಸಕ್ತರ ಸರ್ವಾನುಮತದ ಆಯ್ಕೆಯ ಮೂಲಕ ಡಾ| ಕನರಾಡಿ ಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ ಎಂದವರು ವಿವರಿಸಿದರು.

ತಾಲೂಕು ಕ.ಸಾ.ಪ. ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಸಮ್ಮೇಳನದ ಪೂರ್ವ ತಯಾರಿಗಳು ಹಾಗೂ ಸಮ್ಮೇಳನ ಗೋಷ್ಠಿಗಳ ಬಗ್ಗೆ ವಿವರ ನೀಡಿದರು. ಕಾರ್ಯದರ್ಶಿ ಕೆ.ಜಿ. ವೈದ್ಯ ಸ್ವಾಗತಿಸಿದರು.

ನಿಯೋಜಿತ ಸಮ್ಮೇಳನಾಧ್ಯಕ್ಷರ ಪರಿಚಯ: ಉಡುಪಿ ತಾಲೂಕು ಮಣಿಪುರ ಗ್ರಾಮದ ಕನರಾಡಿ ಎಂಬಲ್ಲಿ 1951 ರ ಜುಲೈ 20 ರಂದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಕೆ. ಲಕ್ಷ್ಮೀನಾರಾಯಣ ಭಟ್ಟ-ಕಮಲಮ್ಮ ದಂಪತಿಯ ಮಗನಾಗಿ ಜನಿಸಿದ ವಾದಿರಾಜ ಭಟ್ಟರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ 1971 ರಲ್ಲಿ ಬಿ.ಎ. ಪದವಿ ಶಿಕ್ಷಣ ಮುಗಿಸಿದರು. 1973 ರಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿ 2008 ರಲ್ಲಿ ಮೈಸೂರು ವಿ.ವಿ. ಯಿಂದ ಪಿ.ಎಚ್.ಡಿ. ಪದವಿ ಗಳಿಸಿದರು. ಸಂಸ್ಕೃತ ಭಾಷಾ ಕೋವಿದ, ಹಿಂದಿ ಭಾಷಾ ಪ್ರವೀಣ್ ಪದವಿಗಳನ್ನೂ ಪಡೆದ ಭಟ್ಟರು ಮೈಸೂರು ಆರ್.ಐ.ಎಂ.ಎಸ್. ನಲ್ಲಿ ನೈತಿಕ-ಆಧ್ಯಾತ್ಮಿಕ ತರಬೇತಿ, ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮ, ಮೈಸೂರು ವಿ.ವಿ. ರಾ.ಸೇ.ಯೋ. ತರಬೇತಿ, ಅಧ್ಯಾಪಕರ ಪುನಶ್ಚೇತನ ಶಿಬಿರ, ಐ.ಎಂ.ಎ. ಬೆಂಗಳೂರು ಮೊದಲಾದೆಡೆ ಹಲವು ತರಬೇತಿಗಳನ್ನು ನಡೆಸಿದ್ದಾರೆ. ಕೊಡಗಿನ ಚೆನ್ನಮ್ಮ ಪ.ಪೂ. ಕಾಲೇಜು, ಬಸ್ರೂರು ಶ್ರೀ ಶಾರದಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ವಿಭಾಗ ಮುಖ್ಯಸ್ಥರಾಗಿ, ಬಸ್ರೂರು ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

ಮಂಗಳೂರು ವಿ.ವಿ. ಪರೀಕ್ಷಾ ಮಂಡಳಿ ಅಧ್ಯಕ್ಷ, ಕನ್ನಡ ಮತ್ತು ತುಳು ಸಾಹಿತ್ಯ, ಸಂಸ್ಕೃತಿ ಜನಪದ ಅಧ್ಯಯನ ವಿಮರ್ಷೆ-ಸಂಶೋಧನೆ, ಅಬು ಪರ್ವತ ಈಶ್ವರೀಯ ವಿ.ವಿ. ಯ ಶಿಬಿರ ಸಂಪನ್ಮೂಲ ವ್ಯಕ್ತಿ, ರಾಜಯೋಗ ಮತ್ತು ಯೋಗಾಸನ ವಿಷಯಗಳ ಸಂಪನ್ಮೂಲ ತರಬೇತುದಾರ ಹೀಗೆ ಹತ್ತು ಹಲವು ಸಂಶೋಧನೆ, ಸೇವಾ ಕಾರ್ಯಗಳ ಮೂಲಕ ವಿಭಿನ್ನ ಕ್ಷೇತ್ರಗಳಿಗೆ ಒಡ್ಡಿಕೊಂಡ ವಾದಿರಾಜ ಭಟ್ಟರು ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಂಡದ್ದಲ್ಲದೆ ವಿಭಿನ್ನ ಕ್ಷೇತ್ರಗಳಿಗೆ ವಿಸ್ತಾರ ಸೇವೆಗಳನ್ನು ಒದಗಿಸಿದ್ದಾರೆ. ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ, ಸ್ಥಾಪಕರಾಗಿ ಜನಾನುರಾಗಿಗಳಾಗಿದ್ದಾರೆ. ಕುಂದಾಪುರ ತಾ.ಕ.ಸಾ.ಪ. ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಭಟ್ಟರು, ವಿಭಿನ್ನ ಕ್ಷೇತ್ರಗಳನ್ನು ಪ್ರತಿನಿಧಿಸಿ ಉಡುಪಿ, ಅಬು ಪರ್ವತ, ಯಲ್ಲಾಪುರ, ಹೊನ್ನಾವರ, ಮೈಸೂರು, ಧಾರವಾಡ, ಪಶ್ಚಿಮ ಬಂಗಾಳ ಮೊದಲಾದೆಡೆ ಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ್ದಾರೆ.

ಕೃತಿಗಳು : ಕುಂದಾಪುರ ತಾಲೂಕು ದರ್ಶನ, ಗಣೇಶ ಚತುರ್ಥಿ, ದೇವದಾಸಿಯರ ಹಾಡುಗಳು, ಬರಹಗಾರರ ಬಳಗ, ಮೂಕಜ್ಜಿ, ಮೂಕಜ್ಜಿಯ ಹಾಡುಗಳು, ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ದರ್ಶನ (ಕನ್ನಡ ಮತ್ತು ಇಂಗ್ಲೀಷ್ ಅನುವಾದ) ಹಾಗೂ ತುಳು ಭಾಷೆಯಲ್ಲಿ ಪಾಡ್ದನಗಳು, ಜೋಕ್ಲೆ ಪದೊಕ್ಲು (ಎರಡು ಸಂಪುಟಗಳು), ತುಳು ಜಾನಪದ ಕಥೆಗಳು (ನಾಲ್ಕು ಸಂಪುಟಗಳು) ಮೊದಲಾದ ಮೌಲಿಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ಹಲವಾರು ಸಂಪಾದಿತ ಕೃತಿಗಳು, ಸಂಚಾಲಕರಾಗಿ ಪ್ರಕಟಿತ ಕೃತಿಗಳೂ ಇವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ 200 ಕ್ಕೂ ಹೆಚ್ಚು ಲೇಖನಗಳು ಪ್ರಕಟಣೆಯಾಗಿವೆ. 50  ಕ್ಕೂ ಹೆಚ್ಚು ಆಕಾಶವಾಣಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. 10 ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಬೆಳಕು ಕಂಡಿವೆ. ಬೆಂಗಳೂರು ದೂರದರ್ಶನ, ಈಟೀವಿ ಗಳಲ್ಲಿ ಸಾಂಸ್ಕೃತಿಕ, ಸಾಹಿತ್ಯ, ಜಾನಪದ ಕಾರ್ಯಕ್ರಮಗಳನ್ನೂ, ಪ್ರವಚನಗಳನ್ನೂ ನಡೆಸಿಕೊಟ್ಟಿದ್ದಾರೆ. ಹಲವಾರು ಜಾನಪದ ಕಲಾವಿದರನ್ನು ಸನ್ಮಾನಿಸಿರುವ ವಾದಿರಾಜ ಭಟ್ಟರು ಅವರಿಗೆ ಮಾಸಾಶನ ನೀಡಿಕೆಗೂ ಕಾರಣರಾಗಿದ್ದಾರೆ.

ಇಂತಹ ಹಿರಿಯ ಸಾಧಕನಿಗೆ ಯುವ ಜೇಸಿ ಪ್ರಶಸ್ತಿ, ಭಾರತ ಭೂಷಣ ಪ್ರಶಸ್ತಿ, ಕಾರಂತ ಸದ್ಭಾವನಾ ಪ್ರಶಸ್ತಿ, ಜಾನಪದ ಲೋಕ ವಿಶೇಷ ಪುರಸ್ಕಾರ ಇತ್ಯಾದಿ ಹತ್ತಾರು ಪ್ರಶಸ್ತಿ ಸನ್ಮಾನಗಳೂ ಒಲಿದು ಬಂದಿವೆ. ಕಿರಿಯ ಸಂಶೋಧಕರಿಗೆ ಮಾರ್ಗದರ್ಶನ, ಹಿರಿಯರಿಗೆ ಸಲಹೆ, ಅಭಿನಂದನಾ ಗ್ರಂಥಗಳ ರಚನೆ ಹೀಗೆ ವಿಭಿನ್ನ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಾ 63 ರ ಹರಯದಲ್ಲೂ ಉತ್ಸಾಹಿಗಳಾಗಿ ದುಡಿಯುತ್ತಿರುವ ಡಾ| ಕನರಾಡಿ ವಾದಿರಾಜ ಭಟ್ಟರಿಗೆ ಸ್ವಾಭಾವಿಕವಾಗಿಯೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ಒಲಿದು ಬಂದಿದೆ.

Write A Comment