ಉಡುಪಿ: ಇದೊಂದು ವಿಶಿಷ್ಟ ರೀತಿಯ ಸಹಾಯ, ನವಜಾತ ಮಗುವಿನ ನಿಷ್ಕ್ರಿಯ ಕೈಯ ಚಿಕಿತ್ಸೆಗೆ ಯುವಕನೊಬ್ಬ ಮಿಡಿದ ಅಪೂರ್ವ ನಿದರ್ಶನ ಇದು. ಕೊನೆಗೂ ಮಗುವಿನ ಆಪರೇಷನ್ಗೆ ಬರೋಬ್ಬರಿ ಒಂದು ಲಕ್ಷ ರೂ ಸಹಾಯ ಧನ ನೀಡಿದ ಕತೆ ಇದು.
ಮಾನವೀಯತೆಗೆ ಹಲವು ಮುಖ, ನಾವು ಇನ್ನೊಬ್ಬರಿಗೆ ಸಹಾಯ ಮಾಡಲು ಮನಸು ಮಾಡಿದರೆ ಅದಕ್ಕೆ ನೂರು ದಾರಿಗಳು. ಯುವಕನೋರ್ವ ಒಂದು ಒಳ್ಳೆಯ ಉದ್ದೇಶಕ್ಕಾಗಿ ಈ ರೀತಿ ವೇಷ ಹಾಕಿ ಕುಣಿಯುತ್ತಿದ್ದಾನೆ. ಈತನ ಹೆಸರು ರವಿ. ಉಡುಪಿಯ ಕಟಪಾಡಿಯ ಯುವಕ. ವೃತ್ತಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಾನೆ. ಅಂದರೆ ಹೆಚ್ಚುಕಮ್ಮಿ ಕೂಲಿ ಕೆಲಸ ಅಂತ ಹೇಳಬಹುದು. ಆದರೆ ಈತನ ಮನಸ್ಸು ದೊಡ್ಡದು.
ಇತ್ತೀಚೆಗೆ ಉಡುಪಿಯಲ್ಲಿ ಹುಟ್ಟುತ್ತಲೇ ಒಂದು ಹೆಣ್ಣು ಮಗುವಿನ ಬಲ ಕೈ ನಿಷ್ಕ್ರಿಯಗೊಂಡಿತ್ತು. ಆ ಮಗುವಿನ ಕೈ ಸರಿ ಆಗಬೇಕಾದರೆ ಲಕ್ಷಾಂತರ ರೂಗಳ ಆಪರೇಷನ್ ಮಾಡಬೇಕಿತ್ತು. ಈ ವಿಷಯ ತಿಳಿದ ಯುವಕ ಮೊನ್ನೆ ಅಷ್ಠಮಿ ದಿವಸ ಫ್ಯಾನ್ಸ್ ಲ್ಯಾಂಬರೆಂಟ್ ವೇಷ ಹಾಕಿ ಕುಣಿದು ದೇಣಿಗೆ ಸಂಗ್ರಹಿಸುವ ಮೂಲಕ ಮಗುವಿನ ಚಿಕಿತ್ಸೆಗೆ ಸ್ಪಂಧಿಸಿದ. ಬರೋಬ್ಬರಿ ಒಂದು ಲಕ್ಷದ ೫ ಸಾವಿರ ರೂ ಸಂಗ್ರಹಿಸಿ ಈ ಮಗುವಿನ ಚಿಕಿತ್ಸೆಗೆ ನೀಡಿ ಮಾನವೀಯತೆ ಮೆರೆದಿದ್ದಾನೆ.
ಉಡುಪಿಯ ಮೂಕಾಂಬಿಕಾ ಎಂಬ ಮಹಿಳೆ ೩ ತಿಂಗಳ ಹಿಂದೆ ಅನ್ವಿತಾ ಎಂಬ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಇದಕ್ಕು ಮುನ್ನ ಹೆರಿಗೆಗೆಂದು ಸರಕಾರಿ ಆಸ್ಪತ್ರೆಗೆ ಸೇರಿದ್ದರು.ಆದರೆ ಅಲ್ಲಿ ಸಕಾಲದಲ್ಲಿ ಹೆರಿಗೆ ಆಗದ ಕಾರಣ ಮತ್ತು ಸರಕಾರಿ ಸಹಜ ನಿರ್ಲಕ್ಷ್ಯದಿಂದ ಈ ಹೆಣ್ಣು ಮಗುವಿನ ಬಲ ಕೈ ನಿಷ್ಕ್ರಿಯಗೊಂಡಿತ್ತು.ನಿಷ್ಕ್ರಿಯಗೊಂಡ ಕಾರಣ ಮಗುವಿಗೆ ಈಗ ಸ್ಪರ್ಶ ಜ್ನಾನವೂ ಇಲ್ಲ. ಇದನ್ನು ಪತ್ರಿಕೆಯಲ್ಲಿ ನೋಡಿದ ರವಿ ಮತ್ತು ಅವರ ೧೮ ಮಂದಿ ಸ್ನೇಹಿತತರು ಅಷ್ಠಮಿ ಮತ್ತು ಮರುದಿನ ಉಡುಪಿಯ ಹಲವೆಡೆ ಸಂಚರಿಸಿ ,ಫ್ಯಾನ್ಸ್ ಲ್ಯಾಂಬರೆಂಟ್ ವೇಷ ಹಾಕಿ ಒಂದು ಲಕ್ಷ ರೂ. ಹಣ ಸಂಗ್ರಹಿಸಿದ್ದಾರೆ.ಇದನ್ನು ಇವತ್ತು ಮಗುವಿನ ತಾಯಿಗೆ ಹಸ್ತಾಂತರಿಸಿದಾಗ ಆಕೆಯ ಕಣ್ಣಲ್ಲಿ ಆನಂದಭಾಷ್ಪ ಇತ್ತು.
ಕಟಪಾಡಿಯ ರವಿ ಕೂಲಿ ಮಾಡಿ ಬದುಕುವ ಯುವಕ. ಕಳೆದ ಏಳೆಂಟು ವರ್ಷಗಳಿಂದ ಅಷ್ಠಮಿ ಮತ್ತಿತರ ಸಂದರ್ಭ ವೇಷ ಹಾಕುವುದು ರೂಢಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಒಂದು ಅಪೂರ್ವ ಉದ್ದೇಶಕ್ಕಾಗಿ ವೇಷ ಹಾಕಿ, ಒಬ್ಬ ನವಜಾತ ಶಿಶುವಿನ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ. ರವಿ ಮತ್ತು ಅವರ ಸ್ನೇಹಿತರು ನಿಜಕ್ಕೂ ಗ್ರೇಟ್ ಅಲ್ಲವೇ?



