ಕರಾವಳಿ

ಭಾರತ ತಂಡವನ್ನು ಪ್ರತಿನಿಧಿಸುವ ಆಸೆಯಿದೆ : ಕಬ್ಬಡಿಪಟು ರಿಶಾಂಕ್ ದೇವಾಡಿಗ

Pinterest LinkedIn Tumblr

ಕುಂದಾಪುರ: ಕಬ್ಬಡಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಸೆ ಹೊಂದಿದ್ದು, ಇದಕ್ಕಾಗಿ ಕಠಿಣ ಪರಿಶ್ರಮ ನಡೆಸುತ್ತೇನೆ ಎಂದು ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಿಂಚಿದ ಯು ಮುಂಬಾ ತಂಡದ ಆಟಗಾರ ರಿಶಾಂಕ್ ದೇವಾಡಿಗ ಗಂಗೊಳ್ಳಿ ಹೇಳಿದ್ದಾರೆ.

Rishank Devadiga

ಗಂಗೊಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 7-8 ವರ್ಷ ಪ್ರಾಯದಿಂದಲೇ ಕಬ್ಬಡಿ ಆಟವನ್ನು ಆಡಲು ಪ್ರಾರಂಭಿಸಿ ಬಳಿಕ ಶಾಲಾ ಕಾಲೇಜು ತಂಡಗಳನ್ನು ಪ್ರತಿನಿಧಿಸಿದ್ದೆ. ಬಳಿಕ ದೇನಾ ಬ್ಯಾಂಕ್‌ನಿಂದ ಗುತ್ತಿಗೆ ಆಧಾರದಲ್ಲಿ ಕಬ್ಬಡಿ ತಂಡದ ಆಟಗಾರನಾಗಿ ನನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದ್ದು, ಮಹಾರಾಷ್ಟ್ರ ತಂಡದ ಆಟಗಾರನಾಗಿ ನಾನು ಆ ರಾಜ್ಯದ ಪರ ಆಟವಾಡಿದೆ. ಬಳಿಕ ಏಷ್ಯನ್ ಗೇಮ್ಸ್‌ಗಾಗಿ ಇಂಡಿಯನ್ ಕ್ಯಾಂಪ್‌ನಲ್ಲಿ ಆಯ್ಕೆಗೊಂಡು ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯು ಮುಂಬಾ ತಂಡದವರು ನನ್ನನ್ನು ಆಯ್ಕೆ ಮಾಡಿಕೊಂಡರು. ಕಳೆದ ನಾಲ್ಕು ವರ್ಷಗಳಿಂದ ಕಬ್ಬಡಿಯನ್ನು ನನ್ನ ವೃತ್ತಿಯನ್ನಾಗಿ ಮಾಡಿಕೊಂಡಿದ್ದೇನೆ.

ಪ್ರಸ್ತುತ ಭಾರತ್ ಪೆಟ್ರೋಲಿಯಂ ಸಂಸ್ಥೆಯಲ್ಲಿ ಕ್ರೀಡಾಪಟುವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ ಈ ಸಾಧನೆಗೆ ತಾಯಿ ಪಾರ್ವತಿ ದೇವಾಡಿಗ ಹಾಗೂ ಕುಟುಂಬದ ಎಲ್ಲಾ ಸದಸ್ಯರು ಎಲ್ಲಾ ರೀತಿಯ ಸಹಕಾರ ಮಾಡಿ ನನ್ನನ್ನು ಪ್ರೋತ್ಸಾಹಿಸಿದರ ಪರಿಣಾಮ ಈ ಮಟ್ಟಕ್ಕೆ ಏರಲು ಎಲ್ಲರೂ ನನ್ನನ್ನು ಗುರುತಿಸಲು ಸಾಧ್ಯವಾಗಿದೆ ಎಂದು ತನ್ನ ಸಾಧನೆಯನ್ನು ಹೇಳಿದರು.

ಯು ಮುಂಬಾ ತಂಡದಲ್ಲಿ ಎರಡು ವರ್ಷ ಗುತ್ತಿಗೆ ಆಧಾರದಲ್ಲಿ ಆಡಬೇಕಾಗಿದ್ದು, ಮುಂದಿನ ಋತುವಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಆಸೆ ಹೊಂದಿದ್ದೇನೆ. ಯು ಮುಂಬಾ ತಂಡದ ತರಬೇತುದಾರ ರವಿ ಶೆಟ್ಟಿ ಓರ್ವ ಉತ್ತಮ ಕೋಚ್ ಆಗಿದ್ದು, ಅವರಿಂದ ಕಲಿಯಬೇಕಾದುದು ಇನ್ನೂ ಬಹಳಷ್ಟಿದೆ. ಪ್ರಸ್ತುತ ಸಾಲಿನ ಪ್ರೊ ಕಬ್ಬಡಿಯಲ್ಲಿ ಅನೇಕ ಉತ್ತಮ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದು, ಜೈಪುರ ತಂಡ ಟೂರ್ನಿಯಲ್ಲಿ ಬಹಳ ಬಲಿಷ್ಠ ತಂಡವಾಗಿತ್ತು. ನಿರಂತರ 14 ಪಂದ್ಯಗಳನ್ನು ಆಟುವುದು ಬಹಳಷ್ಟು ಕಷ್ಟಕರ. ಹೀಗಾಗಿ ಯು ಮುಂಬಾ ತಂಡದ ಬಹಳಷ್ಟು ಆಟಗಾರರು ಗಾಯದಿಂದ ಬಳಲುತ್ತಿದ್ದರು. ಇದರ ಪರಿಣಾಮವಾಗಿ ಕೆಲವೊಂದು ಪಂದ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲು ಸಾಧ್ಯವಾಗಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಆಟ ಆಡುವಾಗ ಗಾಯಗೊಳ್ಳುವುದು ಸಹಜ. ಇದನ್ನೇ ಗಂಭೀರವಾಗಿ ಪರಿಗಣಿಸದೆ ಆಟದ ಕಡೆ ಗಮನ ಕೇಂದ್ರೀಕರಿಸಿದಾಗ ಮಾತ್ರ ಉತ್ತಮ ಆಟ ಹೊರಬರಲು ಸಾಧ್ಯವಿದೆ ಎಂದರು.

ಕಿಕ್ರೆಟ್‌ನಂತೆ ಕಬ್ಬಡಿ ಕೂಡ ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆ ಕಾಣಲಿದ್ದು, ಕ್ರಿಕೆಟ್‌ನಂತೆ ಗಲ್ಲಿಗಲ್ಲಿಗಳಲ್ಲಿ ಕಬ್ಬಡಿ ಆಟ ಪ್ರಾರಂಭವಾಗಿದೆ. ಕಬ್ಬಡಿ ಆಟ ಆಡುವ ಆಟಗಾರರ ಸಂಖ್ಯೆ ಬಹಳಷ್ಟು ಕಡಿಮೆಯಿದ್ದು, ಕಬ್ಬಡಿ ಆಟಗಾರರಿಗೆ ದೇಶದಲ್ಲಿ ಉತ್ತಮ ಭವಿಷ್ಯವಿದೆ. ದೇಶಿಯ ಕ್ರೀಡೆಯೊಂದಕ್ಕೆ ವಿಶಿಷ್ಠ ರೂಪು ನೀಡಿ ಕ್ರಿಕೆಟ್ ಒಂದೇ ಕ್ರೀಡೆ ಎನ್ನುವ ಮನೋಭಾವವನ್ನು ತೊಡೆದು ಹಾಕಿದ ಪ್ರೊ ಕಬಡ್ಡಿ ಲೀಗ್‌ನ ಪ್ರಾರಂಭದಿಂದ ರೋಚಕ ಕುತೂಹಲ ಮೂಡಿಸುತ್ತ ಮನೆ ಮಂದಿಯೆಲ್ಲಾ ಕುಳಿತು ನೋಡುವ ಕ್ರೀಡೆಯಾಗಿ ಜನಪ್ರಿಯಗೊಂಡಿತು.

ಯುವ ಕ್ರೀಡಾಪಟುಗಳು ಕಬ್ಬಡಿಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿ ಹೆಚ್ಚು ಹೆಚ್ಚು ಕಬ್ಬಡಿ ಆಟ ಆಡಬೇಕು. ನಮ್ಮ ದೇಶದಲ್ಲಿ ಈ ಕ್ರೀಡೆಗೆ ಉಜ್ವಲ ಅವಕಾಶ ಇದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು.

 

Write A Comment