ಕರಾವಳಿ

ಮಂಗಳೂರು ‘ಸ್ಮಾರ್ಟ್ ಸಿಟಿ’ಯೋಜನೆಗೆ ಅಗತ್ಯ ಕ್ರಮ : ಮೇಯರ್

Pinterest LinkedIn Tumblr

mcc_smart_city_1

ಮಂಗಳೂರು, ಸೆ.17: ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರು ಮಹಾನಗರವನ್ನು ಸೇರ್ಪಡೆಗೊಳಿ ಸುವಂತಾಗಲು ಮೂಡುಶೆಡ್ಡೆ ಹಾಗೂ ಬಾಳ ಪಂಚಾಯತನ್ನು ನಗರ ಪಾಲಿಕೆಗೆ ಸೇರಿಸಿ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ.

ಮನಪಾ ಪರಿಷತ್ತು ಸಭಾಂಗಣ ದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮನಪಾ ವ್ಯಾಪ್ತಿ ಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರ ನೀಡುತ್ತಾ ಅವರು ಈ ವಿಷಯ ತಿಳಿಸಿದರು. ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯು ದೇಶದ 5ರಿಂದ 10 ಲಕ್ಷ ಜನಸಂಖ್ಯೆಯುಳ್ಳ ತೀವ್ರ ಬೆಳವಣಿಗೆ ಹೊಂದುತ್ತಿರುವ 20 ನಗರಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ. ಸ್ಮಾರ್ಟ್ ಸಿಟಿಗೆ ಅಗತ್ಯವಾದ ಇತರ ಎಲ್ಲಾ ಅರ್ಹತೆಗಳನ್ನು ಮಂಗಳೂರು ನಗರ ಹೊಂದಿದ್ದರೂ 2011ರ ಜನಗಣತಿಯ ಪ್ರಕಾರ 4,99,487 ಜನಸಂಖ್ಯೆಯನ್ನು ಮಾತ್ರ ಹೊಂದಿರುವುದು ಇದಕ್ಕೆ ಸೇರ್ಪಡೆಗೊಳ್ಳಲು ತೊಡಕಾಗಿ ಪರಿಣಮಿಸಿದೆ. ಇದಕ್ಕೆ ಒಟ್ಟು 81,031 ಜನಸಂಖ್ಯೆ ಹೊಂದಿರುವ ಮೂಡುಶೆಡ್ಡೆ ಹಾಗೂ ಬಾಳ ಪಂಚಾಯತನ್ನು ಸೇರ್ಪಡೆಗೊಳಿಸಿದರೆ ಮಂಗಳೂರು ಸ್ಮಾರ್ಟ್ ಸಿಟಿಗೆ ಸೇರ್ಪಡೆಗೊಳ್ಳುವ ಅರ್ಹತೆ ಪಡೆಯ ಲಿದೆ. ಈ ಬಗ್ಗೆ ಮೂರು ವರ್ಷಗಳ ಹಿಂದೆಯೇ ರಾಜ್ಯ ಸರಕಾರಕ್ಕೆ ಪ್ರಸಾವನೆ ಸಲ್ಲಿಸಲಾಗಿದ್ದರೂ ಮಂಜೂರಾತಿ ದೊರಕಿಲ್ಲ. ಇದೀಗ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾವನೆಗೆ ಅಂಗೀಕಾರ ದೊರಕಿಸುವ ನಿಟ್ಟಿನಲ್ಲಿ ಮನಪಾ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು.

ಎಂಸಿ‌ಎಫ್ ಮುಚ್ಚದಿರಲು ಕೇಂದ್ರಕ್ಕೆ ಮನವಿ
ಎಂಸಿ‌ಎಫ್ ಮಹಾನಗರ ಪಾಲಿಕೆಯ ಆದಾಯದ ಪ್ರಮುಖ ಮೂಲವಾಗಿದೆ. ವಾರ್ಷಿಕ 17ರಿಂದ 20 ಕೋಟಿ ರೂ. ಆದಾಯ ನೀಡುವ ಸಂಸ್ಥೆ ಇದಾಗಿದೆ. ಮಾತ್ರವಲ್ಲದೆ ಇದು ಮುಚ್ಚುವುದರಿಂದ ಸುಮಾರು ಎರಡು ಸಾವಿರ ಮಂದಿ ಉದ್ಯೋಗ ಕಳೆದುಕೊಂಡು ಕುಟುಂಬಗಳು ಹತಾಶರಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಮನಪಾ ಸಾಮಾನ್ಯ ಸಭೆಯಲ್ಲಿ ಮುಚ್ಚದಿರುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಕೋರಲು ನಿರ್ಣಯಿಸಲಾಗಿತ್ತು. ಇದರೊಂದಿಗೆ ಕುದುರೆ ಮುಖ ಕಂಪೆನಿಯನ್ನು ಉಳಿಸಿಕೊಳ್ಳುವ ಕುರಿತಂತೆಯೂ ಕೋರಿಕೆ ಸಲ್ಲಿಸಲಾಗಿದೆ ಎಂದ ವರು ಹೇಳಿದರು. ವಿಶೇಷ ಅನುದಾನ ಮನಪಾ ಅಭಿವೃದ್ಧಿ ಕೋಶದ ಪ್ರೀಮಿಯಂ ಎಫ್.ಎ.ಆರ್.ನಡಿ ಪ್ರಥಮ ಹಂತದಲ್ಲಿ 385.75 ಲಕ್ಷ ರೂ.ಗಳ ಕಾಮಗಾರಿ ಕೈಗೆತ್ತಿಕೊಳ್ಳ ಲಾಗಿದ್ದು, ದ್ವಿತೀಯ ಹಂತದಲ್ಲಿ 983.75 ಲಕ್ಷ ರೂ.ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ನಗರವನ್ನು ಪ್ರವೇಶಿಸುವ ಮುಖ್ಯ ರಸ್ತೆಗಳಲ್ಲಿ ಸೂಚನಾ ಫಲಕ ಮತ್ತು ಮಾಹಿತಿ ಫಲಕಗಳ ಅಳವಡಿಕೆಗಾಗಿ ೧೦೦ ಕೋಟಿ ರೂ. ವಿಶೇಷ ಅನುದಾನದಲ್ಲಿ 1.50 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮೇಯರ್ ತಿಳಿಸಿದರು. ಶೇ.22.75 ನಿಧಿ: 2013-14ನೆ ಸಾಲಿನಲ್ಲಿ ಶೇ.22.75 ನಿಧಿ ಯಡಿ ಮನೆ ನಿರ್ಮಾಣಕ್ಕಾಗಿ 37 ಫಲಾ ನುಭವಿಗಳಿಗೆ 32.85 ಲಕ್ಷ ರೂ. ಖರ್ಚು ಮಾಡಲಾಗಿದೆ. ಸ್ವಯಂ ಉದ್ಯೋಗದಡಿ 54 ಫಲಾ ನುಭವಿಗಳಿಗೆ 26,50,000 ರೂ., 22 ಫಲಾನುಭವಿಗಳಿಗೆ 2.70 ಲಕ್ಷ ರೂ. ವೆಚ್ಚದಲ್ಲಿ ವೈಯಕ್ತಿಕ ಕುಡಿಯುವ ನೀರಿನ ಸಂಪರ್ಕ ಅಳವಡಿಕೆ, 9 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆಗಾಗಿ 1.54 ಲಕ್ಷ ರೂ. ಪಾವತಿ, 60 ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ 10.45 ಲಕ್ಷ ರೂ. ವೆಚ್ಚ, 122 ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕಕ್ಕಾಗಿ 5.91 ಲಕ್ಷ ರೂ. ವೆಚ್ಚ ಹಾಗೂ ವಿವಿಧ ರೀತಿಯ ಶೈಕ್ಷಣಿಕ ನೆರವು ಒದಗಿಸಲಾಗಿದೆ ಎಂದು ಮೇಯರ್ ವಿವರಿಸಿದರು.

mcc_smart_city_2

13ನೆ ಹಣಕಾಸು ಯೋಜನೆ: 2013-14ನೆ ಸಾಲಿನ 13ನೆ ಹಣಕಾಸು ಯೋಜನೆಯಲ್ಲಿ ನಿಗದಿಯಾದ 1,333.51 ಲಕ್ಷ ರೂ.ನಲ್ಲಿ ಕ್ರಿಯಾ ಯೋಜನೆ ರೂಪಿಸಿದ 77 ಕಾಮಗಾರಿಗಳಲ್ಲಿ 50 ಕಾಮಗಾರಿಯನ್ನು 240 ಲಕ್ಷ ರೂ.ಗಳಲ್ಲಿ ಪೂರ್ಣಗೊಳಿಸಲಾಗಿದೆ. 2014-15ನೆ ಸಾಲಿನಲ್ಲಿ ನಿಗದಿಯಾದ 3,939.85 ಲಕ್ಷ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯ ಹಣಕಾಸು ಆಯೋಗದ ಅನುದಾನ
ರಾಜ್ಯ ಹಣಕಾಸು ಆಯೋಗದ ಲೆಕ್ಕ ಶೀರ್ಷಿಕೆ ಯಲ್ಲಿ 2013-14ನೆ ಸಾಲಿನಲ್ಲಿ ನಿಗದಿಯಾದ 2110.74 ಲಕ್ಷ ರೂ.ವಿನಲ್ಲಿ ಮಂಜೂರಾದ 1,414.20 ಲಕ್ಷ ರೂ.ವಿನ 73 ಕಾಮಗಾರಿಗಳ ಪೈಕಿ 761.46 ಲಕ್ಷ ರೂ. ವೆಚ್ಚದ 63 ಕಾಮಗಾರಿ ಪೂರ್ಣಗೊಂಡಿದೆ. 2014-15ನೆ ಸಾಲಿನಲ್ಲಿ ಮಂಜೂರಾದ 2,233.87 ಲಕ್ಷ ರೂ.ನಲ್ಲಿ 1,496.69 ಲಕ್ಷ ರೂ.ನ 123 ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಹಾಬಲ ಮಾರ್ಲ ವಿವರಿಸಿದರು. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಮೇಯರ್ ಕಪ್ ಎಂಬ ವಿವಿಧ ಕ್ರೀಡಾ ಕೂಟಗಳನ್ನು ಸಂಬಂಧಪಟ್ಟ ಕ್ರೀಡಾ ಅಸೋ ಸಿಯೇಶನ್‌ಗಳ ಮೂಲಕ ಹಾಗೂ ಈಜುಕೊಳ ಸಮಿತಿ ವತಿಯಿಂದ ಈಜು ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಿರುವುದಾಗಿ ಅವರು ಹೇಳಿದರು. ಇದೇ ವೇಳೆ ಕೋಡಿಕಲ್‌ನಲ್ಲಿರುವ ಪಾಲಿ ಕೆಯ ಜಾಗಕ್ಕೆ ಆವರಣಗೋಡೆ ರಚಿಸಿ, ಮೈದಾನ ಹಾಗೂ ಪಾಕ್ ಅಭಿವೃದ್ಧಿಗೆ 1 ಕೋಟಿ ರೂ. ಮೀಸಲಿಡಲಾಗಿದೆ. 70 ಲಕ್ಷ ರೂ. ವೆಚ್ಚದಲ್ಲಿ ಕದ್ರಿ ಶ್ಮಶಾನವನ್ನು ಸುಸಜ್ಜಿತಗೊಳಿಸಲಾಗುವುದು. ಕಂಕನಾಡಿ ಗ್ರಾಮದ ಗೃಹ ಮಂಡಳಿ ಕಾಲನಿಯ 30 ಸೆಂಟ್ಸ್ ಜಾಗದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಆಟದ ಮೈದಾನ ರಚನೆಗೆ ಅನುದಾನ ಇರಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಕವಿತಾ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಚಿತ್ರಾಪುರ, ಅಶೋಕ್ ಶೆಟ್ಟಿ, ಡಿ.ಕೆ. ಅಶೋಕ್, ಜೆಸಿಂತಾ ಆಲ್ಫ್ರೆಡ್, ಪ್ರಭಾರ ಆಯುಕ್ತ ಗೋಕುಲ್‌ದಾಸ್ ನಾಯಕ್ ಉಪಸ್ಥಿತರಿದ್ದರು.

ಸ್ವಯಂಘೋಷಿತ ಆಸ್ತಿ ತೆರಿಗೆ: ನಮ್ಮ ಕರ್ತವ್ಯ ನಿರ್ವಹಿಸಲಾಗಿದೆ
ಸ್ವಯಂಘೋಘಿತ ಆಸ್ತಿ ತೆರಿಗೆ ಜನರಲ್ಲಿ ಗೊಂದಲ ನಿವಾರಣೆಯಾಗಿಲ್ಲ ಎಂಬ ಪತ್ರಕರ್ತರ ಪಶ್ನೆಗೆ ಪ್ರತಿಕ್ರಿಯಿಸಿದ ಮೇಯರ್ ಮಹಾಬಲ ಮಾರ್ಲ, ಸ್ಥಳೀಯ ಸಂಸ್ಥೆಗೆ ತನ್ನದೇ ಆದ ನಿರ್ಣಯ ಕೈಗೊಳ್ಳುವ ಅಧಿಕಾರವಿದೆ. ಅದರಂತೆ ಹೆಚ್ಚಳವಾದ ಶೇ.15ರಷ್ಟು ಆಸ್ತಿ ತೆರಿಗೆ ರದ್ದು ಮಾಡಿ ಮನಪಾ ಪರಿಷತ್ತು ನಿರ್ಣಯ ಕೈಗೊಂಡಿದೆ. ನಿರ್ಣಯದ ಕುರಿತಂತೆ ಸರಕಾರಕ್ಕೆ ಪತ್ರದ ಮೂಲಕ ತಿಳಿಸಲಾಗಿದೆ. ಪರಿಷತ್ತಿನಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಸರಕಾರದಿಂದ ಅಧಿಕೃತ ಆದೇಶ ಬರಬೇಕಾಗಿದೆ ಎಂದು ಹೇಳಿದರು. ಆಯುಕ್ತರ ನೇಮಕದ ಕುರಿತಂತೆ ಭಿನ್ನಾಭಿಪ್ರಾಯದ ಬಗ್ಗೆ ವೈಯಕ್ತಿಕವಾಗಿ ಬೇಸರವಿದೆ. ಆಯುಕ್ತರಿಲ್ಲದೆ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿಲ್ಲ. ಶಾಸಕರು, ಸಚಿವರಿಗೆ ಈ ಸಂಬಂಧ ಜವಾಬ್ದಾರಿ ಇದೆ. ಅದನ್ನವರು ನಿರ್ವಹಿಸುತ್ತಾರೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಶ್ವದರ್ಜೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣವನ್ನು ವಿಶ್ವ ದರ್ಜೆ ನಿಲ್ದಾಣವನ್ನಾಗಿ ಏರ್‌ಪೋರ್ಟ್ ಮಾದರಿಯಲ್ಲಿ ಉನ್ನತೀರಕರಣಗೊಳಿಸಲು ಪಿಪಿಪಿ ಯೋಜನೆಯಲ್ಲಿ ಮಂಜೂರಾಗಿದ್ದು, ಇದಕ್ಕೆ ಬೇಕಾದ ಸಮಗ್ರ ರಸ್ತೆ ಹಾಗೂ ಸಂಚಾರಿ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಕೇಂದ್ರ ರೈಲ್ವೆ ಇಲಾಖೆಯ ನಿಯೋಗದೊಂದಿಗೆ ಚರ್ಚಿಸಲಾಗಿದೆ. ಮನಪಾದಿಂದ ಸಹಕಾರ ಇದಕ್ಕೆ ನೀಡಲಾಗುವುದು ಎಂದು ಮೇಯರ್ ತಿಳಿಸಿದರು.

Write A Comment