ಕರಾವಳಿ

ವಿಶ್ವ ಕರ್ಮ ಪೂಜಾ ಮಹೋತ್ಸವ ಕ್ಕೆ ಮೈಸೂರು ದಸರಾ ಸಂಭ್ರಮ

Pinterest LinkedIn Tumblr

viswa_karma_mahotsava_1a

ಬಂಟ್ವಾಳ; ಪ್ರಸ್ತುತ ಸಾಲಿನ ದಸರಾ ಮಹೋತ್ಸವ ಬೆರಳೆಣಿಕೆಯ ದಿನಗಳು ಬಾಕಿ ಉಳಿದಿದ್ದು ಈ ನಡುವೆ ಮೈಸೂರಿನ ಐತಿಹಾಸಿಕ ಹಿನ್ನಲೆಯ ದಸರಾ ಸಂಭ್ರಮ ಸದ್ಯ ವಿವಾದದಿಂದ ಸುದ್ದಿಯಾಗುತ್ತಿದ್ದರೆ ಇತ್ತ ಮಂಗಳವಾರ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿ ಮೈಸೂರು ದಸರಾದ ಸಂಭ್ರಮ ನೆರೆದ ಜನರ ಮನಸೂರೆ ಗೊಂಡಿತು.

viswa_karma_mahotsava_2a

ಬಿ.ಸಿರೋಡಿನ ವಿಶ್ವ ಕರ್ಮ ಸಮಾಜ ಸೇವಾ ಸಂಘ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ವಿಶ್ವಜ್ಯೋತಿ ಮಹಿಳಾಮಂಡಳಿಯ ಸದಸ್ಯರು ನಡೆಸಿಕೊಟ್ಟ ಮೈಸೂರು ದಸರಾ ದರ್ಶನ ವಿಶೇಷ ಕಾರ್ಯಕ್ರಮ ಈ ಬಗೆಯ ಅನುಭವ ನೀಡಿತು. ಈ ದಸರಾ ಕಾರ್ಯಕ್ರಮದಲ್ಲಿ ಮೈಸೂರಿನ ಒಡೆಯರು, ರಾಜ್ಯದ ಮುಖ್ಯಮಂತ್ರಿಯಾದಿಯಾಗಿ ಸಕಲಗಣ್ಯರು ಭಾಗವಹಿಸಿದ್ದರು ಎಂದರೆ ನೀವು ನಂಬುತ್ತೀರಾ..?

viswa_karma_mahotsava_3a viswa_karma_mahotsava_4a viswa_karma_mahotsava_5a

ಮೈಸೂರು ಒಡೆಯರು ಮೈಸೂರು ಬ್ಯಾಂಡ್ ನ ಹಿಮ್ಮೇಳದೊಂದಿಗೆ ಅರಮನೆಗೆ ಆಗಮಿಸುವುದು, ಆ ಬಳಿಕ ಅರಮನೆ ಪ್ರಾಂಗಣದಲ್ಲಿ ವಿವಿಧ ಕಲಾ ತಂಡಗಳಿಂದ ನಡೆದ ವೈವಿಧ್ಯಮಯ ಕಾರ್ಯಕ್ರಮಗಳಂತೂ ನೋಡುಗರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಮಹಿಳಾಮಂಡಳಿಯ ಹಿರಿಯ ಸದಸ್ಯೆಯರು ನಡೆಸಿಕೊಟ್ಟ ಉತ್ತರ ಕನ್ನಡ ಜಿಲ್ಲೆಯ ಹಿರಿಯಕಲಾವಿದರ ಗೀಗೀಪದ ನಿಜಗೀಗೀಕಲಾವಿದರಷ್ಟು ನೈಜತೆಯಿಂದ ಕೂಡಿತ್ತು. ಈ ವೇಳೆಗಾಗಲೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಅರಮನೆ ಆವರಣಕ್ಕೆ ಬಂದರು ರಾಜ್ಯದ ಮುಖ್ಯಮಂತ್ರಿ. ಜೊತೆಗೆ ಹಿರಿಯ ಸಾಹಿತಿಗಳೂ ಕೂಡ ಅರಮನೆ ಆವರಣದಲ್ಲಿ ಒಂದಾಗಿದ್ದು ಗಮನಸೆಳೆಯಿತು.

viswa_karma_mahotsava_6a viswa_karma_mahotsava_7a viswa_karma_mahotsava_8a

ಬಳಿಕ ಮುಂದುವರಿಯಿತು ಸಾಂಸ್ಕೃತಿಕ ತಂಡಗಳ ಪ್ರದರ್ಶನ.ಮಂಡ್ಯಜಿಲ್ಲೆಯ ಮಾದೇಶ್ವರ ನಗರದ ಕಲಾವಿದರು ಎಂಬ ಹೆಸರಿನಲ್ಲಿ ಪ್ರದರ್ಶಿಸಿದ ಬೀಸುಕಂಸಾಳೆ ಪ್ರೇಕ್ಷಕರಿಗೆ ರಸದೌತಣವನ್ನೇ ನೀಡಿತು.ದಕ್ಷಿಣ ಕನ್ನಡ ಜಿಲ್ಲೆಯ ಗಂಡುಕಲೆ ಯಕ್ಷಗಾನವನ್ನು ಮಹಿಳಾಮಂಡಳಿಯ ಅಧ್ಯಕ್ಷೆ ಸಹಿತ ಈರ್ವರು ಜೊತೆಯಾಗಿ ಪ್ರದರ್ಶಿಸಿದ್ದು, ಹೆಚ್ಚು ಅರ್ಥಪೂರ್ಣವಾಗಿತ್ತಲ್ಲದೆ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.
ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿಗೂ ಮುನ್ನ ಪೂಜೆ ಸ್ವೀಕರಿಸುವ ನಂದಿಧ್ವಜ ದ ಕುಣಿತವಂತೂ ದಸರಾ ದರ್ಶನಕ್ಕೆ ಹೆಚ್ಚು ಅರ್ಥ ತಂದುಕೊಟ್ಟಿತು. ಹರಪ್ಪನ ಹಳ್ಳಿ ತಾಲೂಕಿನ ಗೌರೀಶಂಕರ ನಂದೀಧ್ವಜ ತಂಡದ ಕಲಾವಿದರು ಎಂಬ ಹೆಸರಿನಲ್ಲಿ ಮಹಿಳಾಮಂಡಳಿಯ ಸದಸ್ಯರೇ ನಂದಿಕುಣಿತದೊಂದಿಗೆ ಅಚ್ಚರಿಮೂಡಿಸಿದರು.
ಒಟ್ಟು ಕಾರ್ಯಕ್ರಮವನ್ನು ನಿರ್ದೇಶಿಸಿದ ನಿತಿನ್ ಆಚಾರ್ಯ ಕಲ್ಲಡ್ಕ ಕೋಲಾರದ ಪೂಜಾಕುಣಿತದ ಕಲಾವಿದನಾಗಿ ತಲೆಮೇಲೆ ಬಿದಿರಿನ ತಟ್ಟಿ-ಮುಖವಾಡವನ್ನು ಹೊತ್ತು ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕಿ ಗಮನಸೆಳೆದರು.
ಮೈಸೂರು ದಸರಾ ದರ್ಶನಕ್ಕೆ ಮತ್ತಷು ಮೆರುಗು ತಂದದ್ದು ಬಂಟ್ವಾಳ ಕಳ್ಳಿಗೆ ಗ್ರಾಮದ ಹುಲಿವೇಷಧಾರಿಗಳ ಕುಣಿತ. ವಿವಿಧ ಕಸರತ್ತುಗಳೊಂದಿಗೆ ಪ್ರೇಕ್ಷಕರಿಂದ ನಗದು ಬಹುಮಾನಗಳನ್ನು ಪಡೆಯುವಲ್ಲಿಯೂ ಹುಲಿವೇಷಧಾರಿಗಳು ಯಶಸ್ವಿಯಾದರು.
ಚಿತ್ರದುರ್ಗದ ವೀರಗಾಸೆ ತಂಡದ ಹೆಸರಿನಲ್ಲಿ ಮಹಿಳಾಮಂಡಳಿಯ ಸದಸ್ಯರು ಪ್ರದರ್ಶಿಸಿದ ವೀರಗಾಸೆ ನೃತ್ಯವೂ ಗಮನ ಸೆಳೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯಲ್ಲಿ ನಡೆದ ರಾಜಸ್ಥಾನದ ಗುವಾಹಟ್ಟಿ ಗ್ರಾಮದ ಲಂಬಾಣಿ ಬುಡಕಟ್ಟು ಜನಾಂಗದ ಯುವತಿಯರು ಪ್ರದರ್ಶಿಸಿದ ಲಂಬಾಣಿ ನೃತ್ಯಕ್ಕಂತೂ ಪ್ರೇಕ್ಷಕರ ಕರತಾಡನದ ಸುರಿಮಳೆಯೇ ಹರಿದುಬಂತು. ಲಂಬಾಣಿ ಸ್ತ್ರೀಯರ ರಂಗುರಂಗಿನ ವೇಷಭೂಷಣ ಧರಿಸಿ,ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ಕಲಾವಿದರು, ನಾವೇನು ಕಡಿಮೆಯಲ್ಲ ಎಂಬುದನ್ನು ತೋರಿಸಿಕೊಟ್ಟರು.

viswa_karma_mahotsava_9a viswa_karma_mahotsava_10a viswa_karma_mahotsava_11a viswa_karma_mahotsava_12a

ಮುಖ್ಯಮಂತ್ರಿಯಿಂದ ಭಾಷಣ
ಮೈಸೂರಿನ ಒಡೆಯರ ಜೊತೆಗೂಡಿ ವೇದಿಕೆ ಏರಿದ ಮುಖ್ಯಮಂತ್ರಿಗಳು ನೆರೆದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಮೈಸೂರು ದಸರಾಕ್ಕೆ ಮೆರುಗು ನೀಡುವುದು ಕಲಾವಿದರೇ, ಅವರ ಬೇಡಿಕೆಗಳ ಈಡೇರಿಕೆಗೆ ನಾವು ಬದ್ದರಿದ್ದೇವೆ, ಸಿದ್ದರಿದ್ದೇವೆ, ನಾಡಿನ ಜನತೆಗೆ ತಾಯಿ ಚಾಮುಂಡೇಶ್ವರೀ ಒಳ್ಳೆಯದನ್ನು ಮಾಡಲಿ, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎನ್ನುವ ಚುಟುಕಾದ ಭಾಷಣಕ್ಕೆ ಪ್ರೇಕ್ಷಕರು ಚಪ್ಪಾಳೆಯ ಪ್ರತಿಷ್ಪಂದನ ನೀಡಿದರು.
ಮೈಸೂರಿನ ಒಡೆಯರು ಹಾಗೂ ಮುಖ್ಯಮಂತ್ರಿ ಯವರು ಜೊತೆಯಾಗಿ ಆನೆ ಮೇಲೆ ಅಂಬಾರಿಯ ಲ್ಲಿನ ಚಾಮುಂಡೇಶ್ವರಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಇದಕ್ಕೆ ಸಾಕ್ಷಿಗಳಾದರು. ಬಳಿಕ ನಡೆಯಿತು ಅಬ್ಬರದ ಜಂಬೂ ಸವಾರಿ ಮೆರವಣಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲಾ ಕಲಾತಂಡಗಳು ಸರತಿ ಸಾಲಿನಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ನಿಜಮೈಸೂರು ದಸರಾದ ಅನುಭವ ಸಭಿಕರಲ್ಲಿ ಉಂಟಾಯಿತು. ಸೂಕ್ತ ಹಿನ್ನೆಲೆ ಸಂಗೀತ, ಮೈಸೂರು ಮಾದರಿಯಲ್ಲಿಯೇ ನಡೆದ ಕಾರ್ಯಕ್ರಮ ನಿರ್ವಹಣೆ ಸುಮಾರು ಒಂದು ಗಂಟೆಗಳ ಕಾಲ ನಡೆದ ಮೈಸೂರು ದಸರಾ ದರ್ಶನ ಕ್ಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

viswa_karma_mahotsava_13a viswa_karma_mahotsava_14a

ಬಿ.ಸಿರೋಡಿನ ವಿಶ್ವ ಕರ್ಮ ಸಮಾಜ ಸೇವಾ ಸಂಘ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ವಿಶ್ವಜ್ಯೋತಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಬಳಗದವರು ಶಿಲ್ಪಾಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ ಇವರ ಪುತ್ರ ನಿತಿನ್ ಕಲ್ಲಡ್ಕ ನಿರ್ದೇಶನದಲ್ಲಿ ಪ್ರದರ್ಶಿಸಿದ “ಮೈಸೂರು ದಸರಾ ದರ್ಶನ” ರಸವತ್ತಾಗಿತ್ತು ಮೂಡಿಬಂತು.

Write A Comment