ಮಂಗಳೂರು,ಸೆ.17 : ನಗರಪಾಲಿಕೆಯ 5 ವಾರ್ಡ್‌ಗಳನ್ನು ಸಂಪರ್ಕಿಸುವ ಸುರತ್ಕಲ್ – ಕೃಷ್ಣಾಪುರ ರಸ್ತೆಯಲ್ಲಿ ಮಲ್ಲಮಾರ್ ಕಟ್ಲ ಎಂಬಲ್ಲಿ ಕಿರುಸೇತುವೆಯ ರಚನೆ ಕಾಮಗಾರಿಯು ವರ್ಷದ ಹಿಂದೆ ಚಾಲನೆಗೊಂಡು, ಕುಂಟುತ್ತಾ ಸಾಗಿ, ಪ್ರಸ್ತುತ 6 ತಿಂಗಳಿನಿಂದ ಸ್ತಬ್ಧಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಭಾರತೀಯ ಜನತಾ ಪಾರ್ಟಿ ಸುರತ್ಕಲ್ ನಗರ ಶಕ್ತಿಕೇಂದ್ರದಿಂದ ಮಂಗಳೂರು ಮಹಾನಗರಪಾಲಿಕೆ ಮೇಯರ್‌ರವರಿಗೆ ದಿನಾಂಕ 16.09.2014 ರಂದು ಮನವಿ ಸಲ್ಲಿಸುವುದರ ಮೂಲಕ ಪ್ರತಿಭಟನೆ ಸಲ್ಲಿಸಲಾಯಿತು.
ಸದರಿ ಅಪೂರ್ಣ ಕಾಮಗಾರಿಯು ಅಪಾಯವನ್ನು ಆಹ್ವಾನಿಸುತ್ತಿದೆ ಎಂದೂ, ಕೆಲವು ರಸ್ತೆ ಅವಘಢಗಳಿಗೆ ಕಾರಣವಾಗಿದೆಯೆಂದೂ ಮನವಿಯಲ್ಲಿ ವಿವರಿಸಿರುವ ಸಮಿತಿಯು ಕಾಮಗಾರಿಯನ್ನು ಪೂರ್ಣಗೊಳಿಸಲು ನಿರುತ್ಸಾಹವನ್ನು ತೋರುತ್ತಿರುವ ಮಹಾನಗರಪಾಲಿಕೆಯು ಜನತೆಯ ಸಹನೆಯನ್ನು ಅಣಕಿಸುತ್ತಿದೆಯೆಂದು ಟೀಕಿಸಿದೆ.
ಸೇತುವೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, ಈ ಬಗ್ಗೆ ನಿರ್ಲಕ್ಷ್ಯವನ್ನು ಮುಂದುವರಿಸಿದ್ದಲ್ಲಿ ತೀವ್ರ ಹೋರಾಟದ ಹಾದಿ ತುಳಿಯುವುದಾಗಿ ಎಚ್ಚರಿಕೆ ನೀಡಿದೆ. ನಿಯೋಗದಲ್ಲಿ ಬಿಜೆಪಿ ಸುರತ್ಕಲ್ ಶಕ್ತಿಕೇಂದ್ರದ ಅಧ್ಯಕ್ಷ ಮಹೇಶ್ ಮೂರ್ತಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ, ಮಂಡಲ ಕಾರ್ಯದರ್ಶಿ ಶಶಿಕಲಾ ಶೆಟ್ಟಿ, ಯುವಮೋರ್ಚಾ ಉಪಾಧ್ಯಕ್ಷ ಪ್ರಶಾಂತ್ ಮೂಡಾಯಿಕೋಡಿ, ಪ್ರಮುಖರಾದ ದೇವೇಂದ್ರ ಕೋಟ್ಯಾನ್, ಹರೀಶ್ ಸುವರ್ಣ, ರಾಕೇಶ್ ಕೋಟ್ಯಾನ್, ಹರಿಪ್ರಸಾದ್, ಗಣೇಶ್ ಕಾಟಿಪಳ್ಳ, ಮುಂತಾದವರು ಹಾಜರಿದ್ದರು.