ಮಂಗಳೂರು ಸೆಪ್ಟೆಂಬರ್ 17; ಮಂಗಳೂರು ಮಹಾನಗರಪಾಲಿಕೆ ತುಂಬೆ ವೆಂಟೆಡ್ ಡ್ಯಾಂನಿಂದ ನೀರು ಸರಬರಾಜು ಮಾಡಲು ಹಾಕಿರುವ ಕೊಳವೆಯಿಂದ ಸರಬರಾಜು ಮಾರ್ಗದಲ್ಲಿ ಸಿಗುವ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಂಬಂಧ ಈಗಾಗಲೇ ಇರುವ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸುವ ಸಂಬಂದ ಕೂಡಲೇ ಕ್ರಮ ಜರುಗಿಸುವಂತೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಜಿಲ್ಲಾ ಪಂಚಾಯತ್ಗೆ ಸೂಚಿಸಿದ್ದಾರೆ.
ಅವರು ಬುಧವಾರ ಈ ಸಂಬಂಧ ಸರ್ಕ್ಯೂಟ್ಹೌಸ್ನಲ್ಲಿ ಶಾಸಕರು, ಮಹಾನಗರಪಾಲಿಕೆ ಮತ್ತು ಜಿಲ್ಲಾಪಂಚಾಯತ್ ಅಧಿಕಾರಿಗಳ ಜಂಟೀ ಸಭೆ ನಡೆಸಿ ಮಾತನಾಡಿದರು. ತುಂಬೆ ವೆಂಟೆಡ್ಡ್ಯಾಂನಿಂದ ಮಂಗಳೂರು ನಗರಕ್ಕೆ ನೀರುಸರಬರಾಜಾಗುವ ಹಾದಿಯುದ್ದಕ್ಕೂ ಸಿಗುವ ಗ್ರಾಮಗಳಿಗೆ ಕಳೆದ ಹಲವಾರು ವರ್ಷಗಳಿಂದ ಅನಧಿಕೃತವಾಗಿ ನೀರು ಸಂಪರ್ಕ ಪಡೆಯಲಾಗಿದೆ. ಇದರಿಂದ ಒಂದೆಡೆ ನಗರಕ್ಕೆ ನೀರು ಸರಬರಾಜಿನಲ್ಲೂ ವ್ಯತ್ಯಯವಾಗುತ್ತಿದ್ದ ರೆ, ಇನ್ನೊಂದೆಡೆ ಗ್ರಾಮಗಳಿಗೂ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಈಗಾಗಿ, ಜಿಲ್ಲಾ ಪಂಚಾಯತ್ ಮೂಲಕ ಈ ನೀರು ಸರಬರಾಜನ್ನು ಅಧಿಕೃತವಾಗಿ ಪಡೆಯಲು ಓವರ್ಹೆಡ್ ಟ್ಯಾಂಕ್ ನಿರ್ಮಿಸಿ, ಹಾದಿಯುದ್ದಕ್ಕೂ ಸಿಗುವ ಎಲ್ಲ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ ಎಂದು ಸಚಿವರು ಹೇಳಿದರು.
ನಗರಪಾಲಿಕೆಗೆ ನೀರು ಸರಬರಾಜಾಗುವ ಮುಖ್ಯ ಕೊಳವೆಯಿಂದ ಅಧಿಕೃತವಾಗಿ ನೀರು ಸಂಪರ್ಕ ಪಡೆದರೆ ಶುದ್ದೀಕರಣ ಘಟಕ ಮತ್ತು ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ , ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ನೀಡಬಹುದು. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಜಿಲ್ಲಾ ಪಂಚಾಯತ್ನಿಂದ ಪ್ರಸ್ತಾವನೆ ಕಳುಹಿಸಲು ಸೂಚಿಸಿದ ಸಚಿವ ರಮಾನಾಥ ರೈ, ಅಗತ್ಯಬಿದ್ದರೆ ಈ ಬಗ್ಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಹೇಳಿದರು.
ಅಲ್ಲದೆ, ಮುಂದಿನ 10ದಿನದೊಳಗೆ ಜಿಲ್ಲಾ ಪಂಚಾಯತ್ ಮತ್ತು ಮಹಾನಗರಪಾಲಿಕೆ ಅಧಿಕಾರಿಗಳು ನೀರು ಸಂಪರ್ಕ ಪಡೆಯುತ್ತಿರುವ ಮಾರ್ಗದಲ್ಲಿ ಜಂಟೀ ಸರ್ವೆ ನಡೆಸುವಂತೆ ಸಚಿವರು ಸೂಚಿಸಿದರು. ಈಗಿನ ಮುಖ್ಯ ಕೊಳವೆಯಿಂದಲೇ ಗ್ರಾಮಗಳಿಗೆ ನೀರು ನೀಡಲು ಮಹಾನಗರಪಾಲಿಕೆಗೆ ಮತ್ತು ಪಡೆಯಲು ಜಿಲ್ಲಾ ಪಂಚಾಯತ್ಗೆ ಯಾವುದೇ ಸಮಸ್ಯೆ ಇಲ್ಲ. ಈಗಿನ ವ್ಯವಸ್ಥೆ ಸಕ್ರಮೀಕರಣಗೊಂಡರೆ, ಮುಖ್ಯ ನೀರು ಸರಬರಾಜು ಕೊಳವೆಯಿಂದ ಮುಂದಿನ ದಿನಗಳಲ್ಲಿ ಅನಧಿಕೃತ ಸಂಪರ್ಕಗಳಿಗೆ ಕಡಿವಾಣ ಹಾಕಬಹುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್.ಲೋಬೋ, ಐವನ್ ಡಿಸೋಜಾ, ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿಮದ್ದಿನೇನಿ, ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಚಿತ್ರಾಪುರ, ಅಶೋಕ್ ಶೆಟ್ಟಿ, ಅಶೋಕ್, ಅಧಿಕಾರಿಗಳು ಉಪಸ್ಥಿತರಿದ್ದರು.