ಕರಾವಳಿ

ಮೂಡಾ ಸಾಮಾನ್ಯ ಸಭೆ : ಸಾರ್ವಜನಿಕರ ಅರ್ಜಿಗಳ ವಿಲೇವಾರಿ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

DC_Ibrahim_Press

ಮಂಗಳೂರು ಸೆಪ್ಟೆಂಬರ್ 17: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ಬುಧವಾರ ಮೂಡಾ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿರುವ ಕೆಲವೊಂದು ಕೆರೆಗಳ ಅಭಿವೃದ್ಧಿಯನ್ನು ಮೂಡಾ ವತಿಯಿಂದ ಕೈಗೊಳ್ಳುವ ಸಂಬಂಧ ಸಾಧ್ಯತಾ ವರದಿ ತಯಾರಿಸುವಂತೆ ಸೂಚಿಸಿದರು. ಅಲ್ಲದೆ, ವಿವಿಧ ಕೆಲಸಗಳಿಗೆ ಅನುಮತಿಕೋರಿ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ದೀರ್ಘಕಾಲದವೆರೆಗ ಬಾಕಿ ಇಡದೆ, ತ್ವರಿತವಾಗಿ ವಿಲೇವಾರಿಗೊಳಿಸುವಂತೆ ಸೂಚಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರತೀ ಮೂರನೇ ಶನಿವಾರ ಮೂಡಾ ಸಭೆ ನಡೆಸುವಂತೆ ಸೂಚಿಸಿದರು.

ಉರ್ವಾಸ್ಟೋರ್ ಹಾಗೂ ಉರ್ವಾ ಮಾರುಕಟ್ಟೆ ಅಭಿವೃಧಿಗೆ ಈಗಾಗಲೇ ವಿನ್ಯಾಸ ರಚಿಸಲಾಗಿದ್ದು, ವಿಸ್ತ್ರತ ಯೋಜನಾ ವರದಿ(ಡಿಪಿ‌ಆರ್) ರಚಿಸಲು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಇದನ್ನು ಶೀಘ್ರವೇ ನಗರಾಭಿವೃದ್ಧಿ ಸಚಿವಾಲಯಕ್ಕೆ ಕಳುಹಿಸಿ, ಸರಕಾರ ಅನುಮೋದನೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಶಾಸಕ ಜೆ.ಆರ್. ಲೋಬೋ ಅವರು ಸಭೆಯಲ್ಲಿ ಮಾತನಾಡಿ, ಉರ್ವಸ್ಟೋರ್ ಮತ್ತು ಉರ್ವಾ ಮಾರುಕಟ್ಟೆ ಕಾಮಗಾರಿ ಸಂಬಂಧ ಆಡಳಿತಾತ್ಮಕ ಪ್ರಕ್ರಿಯೆ ತ್ವರಿತಗೊಳಿಸಲು ಬೆಂಗಳೂರಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಶಾಸಕ ಮೊಹಿದೀನ್ ಬಾವಾ ಅವರು ಮಾತನಾಡಿ, ಮೂಡಾ ವತಿಯಿಂದ ಕಾಟಿಪಳ್ಳ ಕೈಕಂಬ, ಕೃಷ್ಣಾಪುರ ಹಾಗೂ ಕಾವೂರಿನಲ್ಲಿ ಉತ್ತಮ ರೀತಿಯ ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಮಾತನಾಡಿ, ಮೂಡಾ ಕೈಗೆತ್ತಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು. ಸಭೆಯಲ್ಲಿ ಮೂಡಾ ಆಯುಕ್ತ ಮೊಹಮ್ಮದ್ ನಝೀರ್, ನಗರಪಾಲಿಕೆ ಆಯುಕ್ತ ಗೋಕುಲ್‌ದಾಸ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Write A Comment