ಮಂಗಳೂರು: `ಸಜಿಪ ಸೆಂಟರ್ ಜುಮಾ ಮಸೀದಿಯ ವಿರುದ್ಧ ಇತ್ತೀಚಿಗೆ ಸ್ಥಾಪಿತ ಹಿತಾಸಕ್ತಿಗಳು ಅಪಪ್ರಚಾರದಲ್ಲಿ ತೊಡಗಿರುವುದರ ಜೊತೆಗೆ ಕೂರತ್ ತಂಙಲ್ ಮೇಲೆ ಹಲ್ಲೆ ನಡೆದಿದೆ ಎಂದು ವ್ಯಾಪಕ ಅಪ ಪ್ರಚಾರ ನಡೆಸುತ್ತಿದ್ದಾರೆ. ಇದನ್ನು ಖಂಡಿಸುವುದಾಗಿ ಸಜಿಪ ಸೆಂಟರ್ ಜುಮಾ ಮಸೀದಿ ಖತೀಬರಾದ ಅಶ್ರಫ್ ಫೈಝಿ ಹೇಳಿದ್ದಾರೆ.
ಬುಧವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ನಮಗೆ ಕೂರತ್ ತಂಙಲ್ ಮೇಲೆ ತುಂಬಾ ಗೌರವವಿದೆ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಪಪ್ರಚಾರ ಮಾಡುವ ಮೂಲಕ ಸಜಿಪದಲ್ಲಿ ಗಲಭೆ ನಡೆಸುವ ಕುತಂತ್ರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
`ಸಜಿಪದಲ್ಲಿ 650 ಮುಸ್ಲಿಂ ಧರ್ಮೀಯರ ಮನೆಗಳಿದ್ದು, ಅವರೆಲ್ಲರೂ ಸಜಿಪ ಸೆಂಟರ್ ಜುಮಾ ಮಸೀದಿಯ ವಿರುದ್ಧ ಮಾತಾಡುತ್ತಿಲ್ಲ, ಮಸೀದಿಯ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಗಳಾಗುತ್ತಿದ್ದಾರೆ. ಆದರೆ ಕೇವಲ ಐದು ಮನೆಗಳ ಜನರು ಮಾತ್ರ ಮಸೀದಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’. ಈ ರೀತಿ ಸುಳ್ಳು ಸುಳ್ಳು ಅಪಪ್ರಚಾರ ನಡೆಸುವುದು ಸರಿಯಲ್ಲ’ ಎಂದು ಹೇಳಿದರು.
`ಸಜಿಪದಲ್ಲಿ ಆರು ಮಸೀದಿಗಳು ಕಾರ್ಯಾಚರಿಸುತ್ತಿದ್ದು, ಇವುಗಳೆಲ್ಲ ಸಜಿಪ ಸೆಂಟರ್ ಜುಮಾ ಮಸೀದಿ ಅಧೀನದಲ್ಲಿದೆ. ಕಳೆದ ಮೂರು ವರ್ಷಗಳ ಹಿಂದೆ ಹೈದರ್ ಹಾಜಿ ಎಂಬವರು ತಮ್ಮ ಎಂಟು ಸೆಂಟ್ಸ್ ಖಾಸಗಿ ಜಾಗವನ್ನು ಮಸೀದಿ ನಿರ್ಮಾಣಕ್ಕೆ ನೀಡಿದ್ದರು. ಆನಂತರ ಮಸೀದಿ ರಚನೆಗೆ ಸಭೆ ನಡೆಸಿ ಕಮಿಟಿಯನ್ನೂ ಮಾಡಲಾಗಿದ್ದು ಅಶ್ರಫ್ ಅದೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸಜಿಪ ಸೆಂಟರ್ ಜುಮಾ ಮಸೀದಿ ಕೂಡಾ ಇದಕ್ಕೆ ಒಪ್ಪಿದ್ದು ಊರಿನ ಜನರ ಸಹಕಾರದಿಂದ ಮಸೀದಿ ನಿರ್ಮಾಣಗೊಂಡಿತ್ತು. ಮಸೀದಿಯನ್ನು ಸಜಿಪ ಸೆಂಟರ್ ಜುಮಾ ಮಸೀದಿ ಅಧೀನಕ್ಕೆ ಒಪ್ಪಿಸುವ ಮಾತುಕತೆಯೂ ನಡೆದಿತ್ತು.’
`ಆದರೆ ಕೆಲವು ದಿನಗಳ ಬಳಿಕ ಹೈದರ್ ಹಾಜಿ ಹಾಗೂ ಅಶ್ರಫ್ ಅದೂರು ಅವರಲ್ಲಿ ನೂತನ ಮಸೀದಿಯನ್ನು ಸಜಪ ಸೆಂಟರ್ ಮಸೀದಿ ಅಧೀನಕ್ಕೆ ಒಪ್ಪಿಸುವಂತೆ ಭಿನ್ನವಿಸಿದಾಗ ಅವರು ತಿರುಗಿಬಿದ್ದಿದ್ದು, ಮೂರು ಜನರನ್ನೊಳಗೊಂಡ ಟ್ರಸ್ಟ್ ರಚಿಸಿದ್ದಾಗಿ ಮತ್ತು ಅದರ ಅಡಿಯಲ್ಲೇ ಮಸೀದಿ ಕಾರ್ಯಾಚರಿಸುವುದಾಗಿ ಹೇಳಿರುವುದು ಖಂಡನೀಯ’ ಎಂದು ಹೇಳಿದರು.
`ಸಜಿಪದಲ್ಲಿ ಹೊರಗಿನ ಜನರನ್ನು ಕರೆದುಕೊಂಡು ಬಂದು ಸ್ವಲಾತ್ ಮಜ್ಲಿಸ್ ನಡೆಸಿ ಆ ನೆಪದಲ್ಲಿ ಊರಿನ ಶಾಂತಿಭಂಗಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ತಂಙಳ್ ಮೇಲೆ ಹಲ್ಲೆಗೈದಿದ್ದಾಗಿ ವ್ಯಾಪಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಶ್ರಫ್ ಫೈಝಿ ಆರೋಪಿಸಿದರು.
ಸಜಿಪ ಸೆಂಟರ್ ಮಸೀದಿ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ರಜಾಕ್, ಮಾಜಿ ಅಧ್ಯಕ್ಷ ಹಾಜಿ ಎಸ್.ಅಬ್ಬಾಸ್, ಮಸೀದಿ ಮಾಜಿ ಪ್ರಧಾನ ಕಾರ್ಯದರ್ಶಿ ಆಸಿಫ್ ಕುನಿಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


