ಪುತ್ತೂರು: ಪುತ್ತೂರಿನ ಸ್ಟುಡಿಯೋ ಮಾಲಕರೊಬ್ಬರ ಪತ್ನಿಯ ನಾಪತ್ತೆ ಪ್ರಕರಣ ಆ ಬಳಿಕ ಅಪಹರಣ ಪ್ರಕರಣವಾಗಿ ಬದಲಾಗಿದ್ದು, ಇದರ ಬೆನ್ನಲ್ಲೇ ಆಕೆ ತನ್ನ ಪ್ರಿಯಕರನಾದ ಅನ್ಯ ಜಾತಿಯ ಯುವಕನೊಂದಿಗೆ ಪರಾರಿಯಾಗಿರುವುದಾಗಿ ವ್ಯಾಪಕ ಪ್ರಚಾರ ಹರಡಿದೆ.
ಸಾಮೆತ್ತಡ್ಕದ ಗಿರೀಶ್ ಕಂಪೌಂಡ್ನ ಗಿರಿಧರ ಭಟ್ ಪತ್ನಿ ಕೀರ್ತಿಕಾ (24) ನಾಪತ್ತೆಯಾಗಿರುವ ಮಹಿಳೆ. ಆಕೆ ಬೆಂಗಳೂರು ಮೂಲದ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುವುದಾಗಿ ಸುದ್ದಿ ಹರಡಿದೆ. ಬಿ.ಇ ಪದವೀಧರೆಯಾಗಿರುವ ಕೀರ್ತಿಕಾ ಕೆಲ ಸಮಯದ ಹಿಂದೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಸಿಕ್ಕಿತ್ತು. ಪತ್ನಿಗೆ ಉತ್ತಮ ಉದ್ಯೋಗ ಸಿಕ್ಕಿದ ಕಾರಣ ಪತಿ ಆಕೆಯನ್ನು ಬೆಂಗಳೂರಿನಲ್ಲೇ ಬಿಟ್ಟು ಪುತ್ತೂರಿಗೆ ಮರಳಿದ್ದರು ಎನ್ನಲಾಗಿದೆ. ದಿನ ಕಳೆಯುತ್ತಿದ್ದಂತೆ ಆಕೆಗೆ ಅದೇ ಕಂಪೆನಿಯಲ್ಲಿ ದುಡಿಯುತ್ತಿರುವ ಅನ್ಯಜಾತಿಯ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಈ ವಿಚಾರವರಿತ ಪತಿ ಹಾಗೂ ಆಕೆಯ ಮನೆಯವರು ಅಲ್ಲಿಂದ ಆಕೆಯನ್ನು ಪುತ್ತೂರಿಗೆ ಕರೆತಂದು ತವರು ಮನೆಯಲ್ಲೇ ಇರಿಸಿದ್ದರು. ಮನೆಯವರ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ಆತನೊಂದಿಗೆ ಸಂಪರ್ಕ ಇರಿಸಿದ್ದ ಆಕೆ ಪರಾರಿಯಾಗುವ ಸ್ಕೆಚ್ ರೂಪಿಸಿ ಸೆ.11ರಂದು ಪುತ್ತೂರಿನ ಸಾಮತ್ತಡ್ಕದ ಮನೆಯಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿರುವುದಾಗಿ ಪುತ್ತೂರಿನಲ್ಲಿ ಸುದ್ದಿಯಾಗಿದೆ.
ಛಾಯಾಗ್ರಾಹಕ ಗಿರಿಧರ ಭಟ್ ಹಾಗೂ ಕೀರ್ತಿಕಾ ಕೂಡ ಪ್ರೇಮ ವಿವಾಹವಾಗಿದ್ದರು. ಕೀರ್ತಿಕಾ ಅನ್ಯ ಜಾತಿಯಾಗಿದ್ದರೂ ಕಾಲೇಜಿಗೆ ಹೋಗುತ್ತಿರುವ ಸಂದರ್ಭದಲ್ಲಿ ಗಿರಿಧರ್ ಅವರು ಆಕೆಯನ್ನು ಪ್ರೀತಿಸಿ ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ಪ್ರೀತಿಸಿ ವಿವಾಹವಾದವಳೇ ಇದೀಗ ಪತಿಯನ್ನು ಬಿಟ್ಟು ಮತ್ತೊಬ್ಬ ಪ್ರಿಯಕರನ ಹಿಂದೆ ಬಿದ್ದಿರುವುದು ವಿಪರ್ಯಾಸ.
ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು: ತನ್ನ ಪತ್ನಿ ಕೀರ್ತಿಕಾ ಸೆ.11ರಂದು ಕಲ್ಲಾರೆಯಲ್ಲಿರುವ ತನ್ನ ತವರು ಮನೆಯಿಂದ ನಾಪತ್ತೆಯಾಗಿದ್ದು, ಆಕೆಯನ್ನು ಮೋಟಾರು ಬೈಕುಗಳಲ್ಲಿ ಬಂದ ಇಬ್ಬರು ಅಪಹರಿಸಿಕೊಂಡು ಹೋಗಿದ್ದಾರೆಂದು ನಗರ ಠಾಣಾ ಪೊಲೀಸರಿಗೆ ಸಾಮೆತ್ತಡ್ಕದ ಗಿರೀಶ್ ಕಂಪೌಂಡ್ನ ಗಿರಿಧರ ಭಟ್ರವರು ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ 363 ಹಾಗು ಭಾರತೀಯ ದಂಡ ಸಂಹಿತೆ ಕಲಂ 34ರಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು, ಆಕೆಯನ್ನು ಕರೆದುಕೊಂಡು ಹೋಗಲು ಆಕೆಯ ಪ್ರಿಯಕರನೆನ್ನಲಾದ ಬೆಂಗಳೂರು ಮೂಲದ ಡೆನ್ನಿಸ್ ಡೆವಿಸ್ ಮತ್ತು ಆತನಿಗೆ ಸಹಕರಿಸಿದ ಆರೋಪದ ಮೇಲೆ ಬೆಂಗಳೂರಿನ ಉದಯನಗರ ಬಳಿಯ ಟಿನ್ನಫ್ಯಾಕ್ಟರಿ ಸಮೀಪದ ಮುರುಗನ್ ನಿಲಯದ ಸಂತೋಷ್ ಕುಮಾರ್(26) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಒಟ್ಟಾರೆ ಈ ಪ್ರಕರಣ ಹಲವಾರು ಊಹಾಪೋಹಕ್ಕೆ ಕಾರಣವಾಗುವ ಜೊತೆಗೆ ಕುತೂಹಲವನ್ನು ಸೃಷ್ಠಿಸಿದೆ.