ಅಂತರಾಷ್ಟ್ರೀಯ

ಹೊಸ ಪ್ರಭೇದದ ಕೊರೋನಾ ವೈರಸ್’ನಿಂದ ಕಂಗೆಟ್ಟ ಬ್ರಿಟನ್ ! 6 ವಾರಗಳ ಸಂಪೂರ್ಣ ಲಾಕ್​ಡೌನ್​ ಘೋಷಣೆ

Pinterest LinkedIn Tumblr

ಲಂಡನ್: ಇಂಗ್ಲೆಂಡ್​ನಲ್ಲಿ ಪತ್ತೆಯಾಗಿರುವ​ ಹೊಸ ರೂಪಾಂತರ ಪ್ರಭೇದದ ಕೊರೋನಾ ವೈರಸ್​ ಇಡೀ ಜಗತ್ತಿಗೆ ಮತ್ತಷ್ಟು ಮಾರಕವಾಗುವ ಸಾಧ್ಯತೆಗಳನ್ನು ಮುಂದಿಟ್ಟಿದ್ದು, ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸರ್ ಅವರು, ಇಂಗ್ಲೆಂಡ್’ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್​ಡೌನ್​ ಘೋಷಣೆ ಮಾಡಿದ್ದಾರೆ.

ರೂಪಾಂತರಿ ಕೊರೋನಾ ವೈರಸ್ ಪ್ರಕರಣಗಳು ಉಲ್ಬಣವಾಗುತ್ತಿದೆ. ಹೀಗೆ ಮುಂದುವರೆದರೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತವೆ. ಪರಿಣಾಮ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಸ್ಥಳಾವಕಾಶವೂ ಇರುವುದಿಲ್ಲ ಎಂಬ ತಜ್ಞರ ಎಚ್ಚರಿಕೆಯ ನಂತರ ತುರ್ತು ಕ್ರಮಕ್ಕೆ ಮುಂದಾಗಿರುವ ಬ್ರಿಟನ್ ಸರ್ಕಾರ ಲಂಡನ್​ನಲ್ಲಿ ಇಂದಿನಿಂದ ಆರು ವಾರಗಳ ಲಾಕ್​ಡೌನ್​ ಘೋಷಿಸಿ ಆದೇಶಿಸಿದೆ.

ಸೋಮವಾರ ಈ ಕುರಿತ ಆದೇಶವನ್ನು ಪ್ರಕಟಿಸಿರುವ ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​, “ಬ್ರಿಟನ್​ನಲ್ಲಿ ಉಲ್ಭಣಿಸುತ್ತಿರುವ ರೂಪಾಂತರಿ ಕೊರೋನಾ ವೈರಸ್​ ವೇಗವಾಗಿ ಹರಡುವುದನ್ನು ತಡೆಯುವ ಸಲುವಾಗಿ ಬ್ರಿಟನ್​ನಲ್ಲಿ 6 ವಾರಗಳ ಕಾಲ ಮತ್ತೊಂದು ಸುತ್ತಿನ ಲಾಕ್​ಡೌನ್​ ಅನ್ನು ಹೇರಲಾಗುತ್ತಿದೆ. ಶಾಲಾ ಕಾಲೇಜು ಹಾಗೂ ಎಲ್ಲಾ ರಂಗಗಳು ಮುಂದಿನ ಆರು ವಾರಗಳ ಕಾಲ ಸಂಪೂರ್ಣವಾಗಿ ಮುಚ್ಚಲಿವೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಸ್ಟ್ರಾಜೆನೆಕಾ ಸೇರಿದಂತೆ ಎರಡು ಲಸಿಕೆಗಳನ್ನು ಪರಿಚಯಿಸುವುದರೊಂದಿಗೆ ಬ್ರಿಟನ್ ಕೊರೋನಾ ಲಸಿಕೆ ಸಂಶೋಧನೆಯಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಲಾಕ್​ಡೌನ್ ಅಗತ್ಯವಾಗಿದೆ. ಫೆಬ್ರವರಿ ಮಧ್ಯಂತರದ ವೇಳೆಗೆ ಎಲ್ಲರೂ ಮುಕ್ತವಾಗಿ ಓಡಾಡಬಹುದು ತಮ್ಮ ಆದ್ಯತೆಯ ಕೆಲಸಗಳಿಗೆ ಮರಳಬಹುದು. ಪ್ರಸ್ತುತ ಜನರ ಜೀವವನ್ನು ಉಳಿಸುವ ರಕ್ಷಿಸುವ ಸಲುವಾಗಿ ನಾವು ಇನ್ನೂ ಆರು ವಾರಗಳ ಕಾಲ ಮನೆಯಲ್ಲೇ ಇರಬೇಕಾಗುತ್ತದೆ” ಎಂದು ದೂರದರ್ಶನದಲ್ಲಿ ಮಾಡಿದ ಭಾಷಣದ ಮೂಲಕ ತಿಳಿಸಿದ್ದಾರೆ.

ಬ್ರಿಟನ್​ನಲ್ಲಿ ರೂಪಾಂತರಿ ಕೊರೋನಾ ವೈರಸ್​ ಅನ್ನು ಹಿಮ್ಮೆಟ್ಟಿಸುವ ಸಲುವಾಗಿ ವಿಜ್ಞಾನಿಗಳು ಹಾಗೂ ತಂತ್ರಜ್ಞರು ತೀವ್ರವಾಗಿ ಲಸಿಕೆ ಸಂಶೋಧನೆ ಕೆಲಸದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಲಾಕ್​ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು ಅಲ್ಲದೆ, ಶೀಘ್ರದಲ್ಲಿ ಈ ವೈರಸ್​ ಅನ್ನು ಹಿಮ್ಮೆಟ್ಟಿಸುವ ಲಸಿಕೆ ಸಂಶೋಧನೆಯಾಗದಿದ್ದರೆ, ಲಂಡನ್​​ಗೆ ತೀವ್ರ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ನೆರೆಯ ಸ್ಕಾಟ್ಲೆಂಟ್​ ದೇಶ ಸಹ ಮುಂಜಾಗ್ರತಾ ಕ್ರಮವಾಗಿ ಲಾಕ್​ಡೌನ್ ಘೋಷಿಸಿದೆ.

Comments are closed.