ಅಂತರಾಷ್ಟ್ರೀಯ

ಹತ್ತು ತಿಂಗಳು ಪಾಕಿಸ್ತಾನದಲ್ಲಿ ಸಿಲುಕಿಕೊಂಡು ಭಾರತ ತಲುಪಿದ ಮಹಿಳೆ!

Pinterest LinkedIn Tumblr


ಕರಾಚಿ: 10 ತಿಂಗಳಿನಿಂದ ಪಾಕ್ ನಲ್ಲಿ ಸಿಲುಕಿ ಪೇಚಾಡಿದ್ದ ಭಾರತದ ಮಹಿಳೆಯೊಬ್ಬರು ಭಾರತ ತಲುಪಲು ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದಲ್ಲಿ ಸಿಲುಕಿದ್ದ ಈ ಮಹಿಳೆ ವೀಸಾ ಅವಧಿ ಮುಗಿದಿದ್ದರಿಂದ ಪಾಕಿಸ್ತಾನದಿಂದ ಬರಲು ಸಾಧ್ಯವಾಗದೇ ನಲುಗಿ ಹೋಗಿದ್ದರು. ಇದೀಗ ಕೊನೆಗೂ ಅವರ ಆಸೆ ಈಡೇರಿದೆ. ಇವರು ಪಾಕಿಸ್ತಾನ ಮೂಲದ ಹಿಂದೂ ಧರ್ಮಿಯರು. ಭಾರತೀಯ ವ್ಯಕ್ತಿಯೊಂದಿಗೆ ವಿವಾಹವಾಗಿ, ಭಾರತದಲ್ಲೇ ವಾಸವಿದ್ದಾರೆ. ಆದರೆ ಅವರ ತಾಯಿ ಪಾಕಿಸ್ತಾನದಲ್ಲಿಯೇ ಇದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಂಡು ಬರಲು ಅವರು ಹೋಗಿ ಪೇಚಿಗೆ ಸಿಲುಕಿದ್ದರು.

ಇವರ ಹೆಸರು ಜಂತಾ ಮಲಿ. ಫೆಬ್ರುವರಿಯಲ್ಲಿ ಪಾಕಿಸ್ತಾನದ ಮೀರ್‍ಪುರ ಕಾಸ್ ಪ್ರದೇಶದಲ್ಲಿರುವ ತಾಯಿಯನ್ನು ಭೇಟಿಯಾಗಲು ನೋರಿ (ಎನ್‌ಒಆರ್‌ಐ-‘ಭಾರತಕ್ಕೆ ಮರಳಲು ಆಕ್ಷೇಪಣೆ ಇಲ್ಲ’) ವೀಸಾದಡಿ ಪಾಕಿಸ್ತಾನಕ್ಕೆ ತೆರಳಿದ್ದರು.

ಅವರ ದುರದೃಷ್ಟಕ್ಕೆ ಅದಾಗಲೇ ಲಾಕ್​ಡೌನ್​ ಘೋಷಣೆಯಾಯಿತು. ನಂತರ ಅಂತಾರಾಷ್ಟ್ರೀಯ ವಿಮಾನಗಳೂ ರದ್ದುಗೊಂಡವು. ನೋರಿ ವಿಸಾ 60 ದಿನಗಳವರೆಗೆ ಮಾತ್ರ ಊರ್ಜಿತವಾಗಿರುತ್ತದೆ. ಲಾಕ್​ಡೌನ್​ ಮುಗಿದ ನಂತರ ಜೂನ್‌ನಲ್ಲಿ ಭಾರತಕ್ಕೆ ಹಿಂದಿರುಗುವ ವೇಳೆ, 60 ದಿನಗಳ ಅವಧಿ ಮುಗಿದಿತ್ತು. ಹೀಗಾಗಿ ಅವರಿಗೆ ಅಲ್ಲಿನ ಅಧಿಕಾರಿಗಳು ಭಾರತಕ್ಕೆ ಮರಳಲು ಅವಕಾಶ ನೀಡಲಿಲ್ಲ.

ಆದ್ದರಿಂದ ಅನಿವಾರ್ಯವಾಗಿ ಅವರು ಅಲ್ಲಿಯೇ ಉಳಿಯಬೇಕಾಯಿತು. ಹೀಗಾಗಿ ಕಳೆದ 10 ತಿಂಗಳಿನಿಂದ ಇವರು ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪಾಕಿಸ್ತಾನದಲ್ಲಿರುವ ಹಿಂದೂ ವಲಸಿಗರು ಹಾಗೂ ಭಾರತದಲ್ಲಿರುವ ಮುಸಲ್ಮಾನ್ ವಲಸಿಗರ ಕುರಿತಂತೆ ವಿಚಾರಣೆ ನಡೆಸಿದ್ದ ರಾಜಸ್ಥಾನ ಹೈಕೋರ್ಟ್ ಆಯಾ ದೇಶಗಳ ವಲಸಿಗರನ್ನು ವಾಪಸ್ ಕಳುಹಿಸಿ ಬೇರೆ ದೇಶದಲ್ಲಿ ಸಿಲುಕಿಕೊಂಡಿರುವ ಹಿಂದೂ ವಲಸಿಗರನ್ನು ಭಾರತಕ್ಕೆ ಕರೆ ತರುವಂತೆ ಸೂಚನೆ ನೀಡಿತ್ತು.

ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ಗೃಹ ಸಚಿವಾಲಯ 10 ತಿಂಗಳಿನಿಂದ ಪಾಕಿಸ್ತಾನದಲ್ಲಿದ್ದ ಜಂತಾ ಕೊನೆಗೂ ಕುಟುಂಬವನ್ನು ಸೇರಿದ್ದಾರೆ.

Comments are closed.