ಟೆಸ್ಲಾ ಕಂಪನಿಯ ಸಹ ಸಂಸ್ಥಾಪಕ ಹಾಗೂ ಉದ್ಯಮಿ ಎಲೋನ್ ಮಸ್ಕ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಹಿಂದಿಕ್ಕಿ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಏರಿಕೆಯಾಗುತ್ತಲೇ ಸಾಗಿದ್ದು ಸೋಮವಾರ ಕೂಡ 7.2 ಬಿಲಿಯನ್ ಡಾಲರ್ ಸಂಪಾದಿಸುವುದರೊಂದಿಗೆ ಮಸ್ಕ್ ಆಸ್ತಿ 127.9 ಬಿಲಿಯನ್ ಡಾಲರ್‌ಗೆ (9.47 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಕೇವಲ 2020ರಲ್ಲಿಯೇ ಅವರು 100 ಬಿಲಿಯನ್ ಡಾಲರ್ ಆಸ್ತಿ ಸಂಪಾದಿಸಿದ್ದಾರೆ. ಪರಿಣಾಮ ಜನವರಿಯಲ್ಲಿ 35ನೇ ಸ್ಥಾನದಲ್ಲಿದ್ದ ಅವರು ಈಗ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಟೆಸ್ಲಾ ಕಂಪನಿಯಿಂದಲೇ ಮಸ್ಕ್ ಆಸ್ತಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಟೆಸ್ಲಾ ಕಂಪನಿ ನಾಗಾಲೋಟದಲ್ಲಿ ಸಾಗುತ್ತಿದ್ದು, ಕಂಪನಿಯ ಮೌಲ್ಯ 500 ಬಿಲಿಯನ್ ಡಾಲರ್ ಸಮೀಪದಲ್ಲಿದೆ. ಇದರ ಜೊತೆಗೆ ಸ್ಪೇಸ್‌ಎಕ್ಸ್ ಎಂಬ ಸಂಸ್ಥೆಯಲ್ಲೂ ಮಸ್ಕ್ ಹೂಡಿಕೆ ಇದೆ.
ಕಳೆದ ಎಂಟು ವರ್ಷಗಳಲ್ಲಿ ಬಿಲ್ ಗೇಟ್ಸ್ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೂ ಕೆಳಗೆ ಜಾರಿದ್ದು ಇದು ಕೇವಲ ಎರಡನೇ ಬಾರಿ. ಹಲವು ವರ್ಷಗಳ ಕಾಲ ಅವರು ಮೊದಲ ಸ್ಥಾನದಲ್ಲೇ ಮುಂದುವರಿದಿದ್ದರು. ಆದರೆ 2017ರಲ್ಲಿ ಅಮೆಜಾನ್‌ನ ಜೆಫ್ ಬಿಜೋಸ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದರು.
ಸದ್ಯ 127.7 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಗೇಟ್ಸ್ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಒಂದೊಮ್ಮೆ ಅವರು ತಮ್ಮ ಆಸ್ತಿಯನ್ನು ದಾನ ಮಾಡದೇ ಇದ್ದಲ್ಲಿ ಇಂದಿಗೂ ಎರಡನೇ ಸ್ಥಾನದಲ್ಲೇ ಮುಂದುವರಿಯುತ್ತಿದ್ದರು. ಇಲ್ಲಿಯವರೆಗೆ ಅವರು 27 ಬಿಲಿಯನ್ ಡಾಲರ್ ಮೊತ್ತವನ್ನು ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಷನ್‌ಗೆ ದಾನ ಮಾಡಿದ್ದಾರೆ.