ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಶೀಘ್ರದಲ್ಲೇ ಆರಂಭ ಆಗಲಿದೆ ಎಂಬುದಕ್ಕೆ ಈಗ ಸೂಚನೆ ಸಿಕ್ಕಿದೆ.
ಪ್ರತಿ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಯಾಕೋ ತೆರೆಮರೆಗೆ ಸರಿದಿತ್ತು. ಈ ವರ್ಷ ಈ ರಿಯಾಲಿಟಿ ಶೋ ಆರಂಭ ಆಗುತ್ತೋ ಎಲ್ಲವೋ ಎಂಬ ಬಗ್ಗೆ ವೀಕ್ಷಕರಿಗೆ ಸಣ್ಣದೊಂದು ಅನುಮಾನ ಇತ್ತು. ಆ ಅನುಮಾನಕ್ಕೆ ಈಗ ತೆರೆ ಬಿದ್ದಿದೆ. ಅಧಿಕೃತ ಮೂಲದಿಂದಲೇ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಷ್ಟು ಹೊತ್ತಿಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಶುರುವಾಗಿರಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿ ಇರುವುದರಿಂದ ವಿಳಂಬ ಆಗಿದೆ. ಅಕ್ಕಪಕ್ಕದ ತೆಲುಗು, ತಮಿಳು ಹಾಗೂ ಹಿಂದಿ ಬಿಗ್ ಬಾಸ್ ಹೊಸ ಸೀಸನ್‌ಗಳು ಈಗಾಗಲೇ ಶುರುವಾಗಿ ಯಶಸ್ವಿಯಾಗಿ ಮುಂದುವರಿಯುತ್ತಿವೆ. ಹಾಗಾದರೆ ಕನ್ನಡದಲ್ಲಿ ಹೊಸ ಸೀಸನ್ ಆರಂಭ ಆಗುವುದಿಲ್ಲವೇ ಎಂಬ ಪ್ರಶ್ನೆ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಈ ಬಾರಿ ಕನ್ನಡ ಬಿಗ್ ಬಾಸ್ ಆರಂಭ ಆಗುವುದು ವಿಳಂಬ ಆಗಿರಬಹುದು. ಆದರೆ ಶೋ ನಡೆಯುವುದು ಖಚಿತ. ಆ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮೊದಲಿನಿಂದಲೂ ಭರವಸೆ ನೀಡುತ್ತಲೇ ಬಂದಿದ್ದರು. ಈಗ ಆ ವಿಚಾರದಲ್ಲಿ ಅವರ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲದೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಜೊತೆಗೂ ಪರಮ್ ಮಾತುಕತೆ ಮಾಡಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್ ಮೂಲಕ ಪರಮೇಶ್ವರ್ ಗುಂಡ್ಕಲ್ ಮಾಹಿತಿ ಹಂಚಿಕೊಂಡಿದ್ದಾರೆ. ಸುದೀಪ್ ಜೊತೆ ಚರ್ಚೆ ಮಾಡುತ್ತಿರುವ ಒಂದು ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಕೆಲಸಗಳು ಪ್ರಗತಿಯಲ್ಲಿವೆ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಇಷ್ಟು ದಿನ ಸುದೀಪ್ ಫ್ಯಾಂಟಮ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈಗ ಅವರು ಬಿಗ್ ಬಾಸ್ ಕಡೆಗೆ ಗಮನ ಹರಿಸುತ್ತಿದ್ದಾರೆ.