ರಾಷ್ಟ್ರೀಯ

ಮೋದಿ ವಿರುದ್ಧ ಸ್ಪರ್ಧಿಸಿದ್ದ ಸೈನಿಕ ತೇಜ್ ಬಹದ್ದೂರ್ ಅರ್ಜಿ ವಜಾಗೊಳಿಸಿದ ಸುಪ್ರೀಂ

Pinterest LinkedIn Tumblr


ನವದೆಹಲಿ; 2019ರ ಲೋಕಸಭಾ ಚುಣಾವಣೆಯಲ್ಲಿ ಬಿಎಸ್​ಎಫ್​ ಸೈನಿಕರ ತೇಜ್ ಬಹದ್ದೂರ್​ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದರು. ಆದರೆ, ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ತೇಜ್​ ಬಹದ್ದೂರ್​​ ಅಲಹಾಬಾದ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಅಲಹಾಬಾದ್​ ಹೈಕೋರ್ಟ್​ನಲ್ಲಿ ಸೋಲಾದ ನಂತರ ಸುಪ್ರೀಂ ಕೋರ್ಟ್​ ಕದ ತಟ್ಟಿದ್ದರು.  ಇದೀಗ ಸುಪ್ರೀಂ ಕೋರ್ಟ್​ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.

ಕಳೆದ ಒಂದು ವರ್ಷದಿಂದ ವಿಚಾರಣೆಯ ಹಂತದಲ್ಲಿದ್ದ ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್​ ಕಾಯ್ದಿರಿಸಿತ್ತು. ಆದರೆ, ಇಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್.ಎಸ್.ಬೋಪಣ್ಣ ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿ ಸದಸ್ಯ ನ್ಯಾಯಪೀಠವು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.

ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ತೇಜ್ ಬಹದ್ದೂರ್ ಅವರ ನಾಮಪತ್ರಗಳನ್ನು ಕಳೆದ ವರ್ಷ ಮೇ 1 ರಂದು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದರು. ಸೇನೆಯಲ್ಲಿ ಆಹಾರ ಸರಿಯಾಗಿ ಒದಗಿಸುತ್ತಿಲ್ಲ ಎಂಬ ಕಾರಣಕ್ಕೆ ವೀಡಿಯೋ ಮಾಡಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ತೇಜ್ ಬಹದ್ದೂರ್ ಅವರನ್ನು 2017 ರಲ್ಲಿ ಸೇನೆಯಿಂದ ವಜಾಗೊಳಿಸಲಾಗಿತ್ತು.

ನಂತರ ಅವರು ನರೇಂದ್ರ ಮೋದಿಯವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಚುನಾವಣಾ ಅಧಿಕಾರಿಗಳು ಇವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿಯೂ ನಾಮಪತ್ರ ತಿರಸ್ಕಾರದ ನಿರ್ಧಾರವನ್ನು ಎತ್ತಿಹಿಡಿಯಲಾಗಿತ್ತು.

ಅರ್ಜಿದಾರರು ಈ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ನಂತರ ಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಬಹದ್ದೂರ್ ಪರ ವಕೀಲರು ಉನ್ನತ ನ್ಯಾಯಾಲಯದ ಎದುರು ವಾದಿಸಿದ್ದರು.

ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿ ವಕೀಲರು, “ಬಹದ್ದೂರ್ ಅವರ ನಾಮಪತ್ರವನ್ನು ಬಾಹ್ಯ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ” ಎಂದು ಹೇಳಿದ್ದಾರೆ.

ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾ ಅಧಿಕಾರಿಗಳು, “ತೇಜ್ ಬಹದ್ದೂರ್ ಅವರನ್ನು ಭ್ರಷ್ಟಾಚಾರ/ರಾಜ್ಯ ದ್ರೋಹ ಎಸಗಿದ್ದಕ್ಕಾಗಿ ವಜಾಗೊಳಿಸಿಲ್ಲ ಎಂದು ನೀಡುವ ಪ್ರಮಾಣ ಪತ್ರವನ್ನು ನಾಮಪತ್ರದೊಟ್ಟಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರಲಿಲ್ಲ” ಎಂದು ಹೇಳಿದ್ದರು.

Comments are closed.