ಅಂತರಾಷ್ಟ್ರೀಯ

ಹೆತ್ತವರನ್ನು ಹತ್ಯೆಮಾಡಿದ ತಾಲಿಬಾನರ ರುಂಡ ಚೆಂಡಾಡಿದ ಧೀರ ಪುತ್ರಿ

Pinterest LinkedIn Tumblr


ಕಾಬೂಲ್‌: ಈ ಬಾಲಕಿಯ ಸಾಹಸ ಅಂತಿಂಥದಲ್ಲ. ಉಗ್ರರ ರುಂಡವನ್ನೇ ಚೆಂಡಾಡಿದ ಧೀರ, ದಿಟ್ಟೆ ಈಕೆ. ಕಣ್ಣೆದುರೇ ಅಪ್ಪ-ಅಮ್ಮನನ್ನು ಗುಂಡಿಕ್ಕಿ ಕೊಂದ ತಾಲಿಬಾನ್‌ ಉಗ್ರರಿಗೆ ಗುಂಡಿನಿಂದಲೇ ಉತ್ತರಿಸಿರುವ ಬಾಲಕಿ ಖಮರ್‌ ಗುಲ್‌ಗೆ ಎಲ್ಲೆಡೆಯಿಂದಲೂ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

ಈ ಘಟನೆ ನಡೆದಿರುವುದು ಕಾಬೂಲ್‌ನಲ್ಲಿ. ಈಕೆಯ ಅಪ್ಪ-ಅಮ್ಮ ತಾಲಿಬಾನ್‌ ಉಗ್ರರ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದಾರೆ ಎಂಬ ಸಂಶಯ ಭಯೋತ್ಪಾದಕರಲ್ಲಿ ಭಯ ಹುಟ್ಟಿಸಿತ್ತು. ಇದೇ ಕಾರಣಕ್ಕೆ ನಿನ್ನೆ, ಘೋರ್‌ ಪ್ರಾಂತ್ಯದಲ್ಲಿ ಇರುವ ಖಮರ್‌ ಗುಲ್‌ ಮನೆಗೆ ನುಗ್ಗಿದ್ದರು.

ನಮ್ಮ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವವರಿಗೆ ಇದೇ ಆಗುತ್ತದೆ ಶಿಕ್ಷೆ ಎನ್ನುತ್ತಲೇ ಬಾಲಕಿ ಎದುರೇ ಆಕೆಯ ಅಪ್ಪ-ಅಮ್ಮನನ್ನು ಹೊರಕ್ಕೆ ಎಳೆದು ಗುಂಡಿನ ಸುರಿಮಳೆಗೈದರು. ಆ ಸಮಯದಲ್ಲಿ ಭಯಭೀತಳಾಗಿದ್ದ ಬಾಲಕಿ ಖಮರ್‌ ಅವಿತುಕೊಂಡಳು.

ಆದರೆ ಅಪ್ಪ-ಅಮ್ಮ ಚೀರಾಡಿ ನೆಲಕ್ಕೆ ಕಣ್ಣೆದುರೇ ಉರುಳುತ್ತಿದ್ದಂತೆಯೇ ಖಮರ್‌ಗೆ ಅದೆಲ್ಲಿಯ ಧೈರ್ಯ ಬಂದಿತೋ ಗೊತ್ತಿಲ್ಲ. ಆಗಿದ್ದು ಆಗಿಯೇ ಹೋಗಲಿ ಎಂದು ಎಕೆ-47 ಗನ್‌ ಹೆಗಲೇರಿಸಿಕೊಂಡಳು. ಅಪ್ಪ-ಅಮ್ಮನ ಮೇಲೆ ಗುಂಡಿನ ದಾಳಿ ಮಾಡುತ್ತಿದ್ದ ಭಯೋತ್ಪಾದಕತ್ತ ಒಂದೇ ಸಮನೆ ಗುಂಡಿನ ಸುರಿಮಳೆಯನ್ನೇಗೈದಳು. ಬಾಲಕಿ ಈ ರೀತಿ ಏಕಾಏಕಿ ದಾಳಿ ನಡೆಸುವ ಕಿಂಚಿತ್‌ ಸೂಚನೆ ಇಲ್ಲದ ಉಗ್ರರು ಅಲ್ಲಿಂದ ಕಾಲ್ಕಿತ್ತರು. ಆದರೆ ಈ ಬಾಲಕಿ ಸುಮ್ಮನೇ ಬಿಡಲಿಲ್ಲ. ಅಪ್ಪ-ಅಮ್ಮನ ಮೇಲೆ ಗುಂಡು ಹಾರಿಸಿದ್ದ ಇಬ್ಬರು ತಾಲಿಬಾನಿಗಳನ್ನು ಹೊಡೆದುರುಳಿದ ಅವರ ರುಂಡ ಚೆಂಡಾಡಿಬಿಟ್ಟಳು.

ಇದನ್ನು ಕಂಡ ಇತರ ಉಗ್ರರು ಅಲ್ಲಿಂದ ಕಾಲ್ಕಿತ್ತರು. ಆದರೆ ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು ಉಗ್ರರ ತಂಡ ಬಂದು ಬಾಲಕಿಯನ್ನು ಹತ್ಯೆ ಮಾಡಲು ಸಜ್ಜಾಗಿತ್ತು. ಆದರೆ ಅಷ್ಟರಲ್ಲಿಯೇ ಪೊಲೀಸರು ಸೇರಿದಂತೆ ಗ್ರಾಮಸ್ಥರು ಅಲ್ಲಿ ಜಮಾಯಿಸಿದ್ದರಿಂದ ಉಗ್ರರು ಹತ್ತಿರ ಬರದೇ ಓಡಿಹೋದರು ಎಂದು ಘೋರ್‌ ಪ್ರಾಂತ್ಯದ ಪೊಲೀಸ್‌ ವರಿಷ್ಠಾಧಿಕಾರಿ ಹಬಿಬುರೆಹಮಾನ್‌ ಮಲೆಕ್ಜದ ಹೇಳಿದ್ದಾರೆ.

ಈಗ ಬಾಲಕಿ ಹಾಗೂ ಆಕೆಯ ಕಿರಿಯ ಸೋದರನನ್ನು ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡು ರಕ್ಷಣೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.