ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ವಜ್ರದ ಗಣಿಯಲ್ಲಿ ಅಂದಾಜು 11 ಕ್ಯಾರಟ್ (10.69 ಕ್ಯಾರಟ್) ವಜ್ರದ ಹರಳು ಪತ್ತೆಯಾಗಿದೆ. ಸದ್ಯ ಈ ಹರಳನ್ನು ಪನ್ನಾದಲ್ಲಿರುವ ಹೀರಾ ಕಾರ್ಯಾಲಯಕ್ಕೆ ಸಲ್ಲಿಸಲಾಗಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಇದಕ್ಕೆ 50 ಲಕ್ಷ ರೂ.ಗೂ ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆ ಇದೆ.
ಪನ್ನಾದ ವಜ್ರದ ಅಧಿಕಾರಿ ಆರ್.ಕೆ. ಪಾಂಡೆ ಈ ವಿಷಯ ತಿಳಿಸಿದ್ದು, ರಾಣಿಪುರ್ ಪ್ರದೇಶದಲ್ಲಿ ವಜ್ರದ ಹರಳಿನ ಗಣಿಯನ್ನು ಆನಂದಿಲಾಲ್ ಕುಶ್ವಾ (35) ಎಂಬುವರಿಗೆ ಗುತ್ತಿಗೆ ನೀಡಲಾಗಿದೆ. ಇವರ ಗಣಿಯಲ್ಲಿ ಈ ವಜ್ರದ ಹರಳು ಪತ್ತೆಯಾಗಿದ್ದಾಗಿ ಹೇಳಿದ್ದಾರೆ.
ಭಾರಿ ಮೌಲ್ಯದ ವಜ್ರದ ಹರಳನ್ನು ಸದ್ಯದಲ್ಲೇ ಹರಾಜು ಹಾಕಲಾಗುವುದು. ಹರಾಜಿನಲ್ಲಿ ಇದಕ್ಕೆ 50 ಲಕ್ಷ ರೂ.ಗೂ ಹೆಚ್ಚಿನ ಮೊತ್ತ ಸಿಗುವ ಸಾಧ್ಯತೆ ಇದೆ. ಸರ್ಕಾರಿ ರಾಯಲ್ಟಿ ಮತ್ತು ತೆರಿಗೆಯನ್ನು ಕಡಿತಗೊಳಿಸಿಕೊಂಡು ಉಳಿದ ಮೊತ್ತವನ್ನು ವಜ್ರವನ್ನು ಸರ್ಕಾರಕ್ಕೆ ಸಲ್ಲಿಸಿದ ವ್ಯಕ್ತಿಗೆ ಕೊಡಲಾಗುವುದು ಎಂದು ಹೇಳಿದ್ದಾರೆ.
ಭಾರಿ ಮೌಲ್ಯದ ವಜ್ರದ ಹರಳನ್ನು ಪತ್ತೆ ಮಾಡಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕುಶ್ವಾ, ನಾನು ಮತ್ತು ನಮ್ಮ ಕಾರ್ಮಿಕರು ಕಳೆದ 6 ತಿಂಗಳಿಂದ ಭಾರಿ ಶ್ರಮಪಟ್ಟು ಕೆಲಸ ಮಾಡುತ್ತಿದ್ದೆವು. ಅದಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಇಂಥ ಹರಳು ನಮ್ಮ ಗಣಿಯಲ್ಲಿ ಪತ್ತೆಯಾಗಿದ್ದು ರೋಮಾಂಚಕಾರಿ ಅನುಭವ ನೀಡಿತು ಎಂದು ತಿಳಿಸಿದ್ದಾರೆ.
Comments are closed.