ಅಂತರಾಷ್ಟ್ರೀಯ

ಮರಣದಂಡನೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್ ನಕಾರ: ಪಾಕ್

Pinterest LinkedIn Tumblr


ಇಸ್ಲಾಮಾಬಾದ್‌ (ಜುಲೈ 08); ಮರಣದಂಡನೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಭಾರತೀಯ ಸೇನೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಹೇಳಿಕೆ ನೀಡಿದ್ದಾರೆ.

“ಗೂಢಚರ್ಯೆ ಮತ್ತು ಭಯೋತ್ಪಾದನೆ” ಆರೋಪದ ಮೇಲೆ 49 ವರ್ಷದ ಭಾರತೀಯ ನಿವೃತ್ತ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು 2017ರಲ್ಲಿ ಪಾಕಿಸ್ತಾನದ ಸೇನೆ ಬಂದಿಸಿತ್ತು. ಅಲ್ಲದೆ, ಅದೇ ವರ್ಷ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆಯನ್ನೂ ವಿಧಿಸಿತ್ತು.

ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಅವರು ಕಳೆದ ಜೂನ್ 17 ರಂದು ಕುಲಭೂಷಣ್ ಜಾಧವ್ ಅವರಿಗೆ ತಮ್ಮ ಶಿಕ್ಷೆ ಮತ್ತು ಅಪರಾಧದ ಮರು ಪರಿಶೀಲನೆಗಾಗಿ ಅರ್ಜಿ ಸಲ್ಲಿಸುವಂತೆ ಆಹ್ವಾನಿಸಿದ್ದಾರೆ. ಆದರೆ, ಜಾಧವ್ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಬಾಕಿ ಇರುವ ಕರುಣೆ ಮನವಿಗಳನ್ನು ಪರಿಶೀಲಿಸಲು ಆದ್ಯತೆ ನೀಡಿದೆ ಎಂದು ಪಾಕಿಸ್ತಾನದ ಮಾಧ್ಯಮವನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಅರ್ಜಿಯನ್ನು ಸಲ್ಲಿಸಲು ಮತ್ತು ಗಡುವಿಗೆ ಮುಂಚಿತವಾಗಿ ಪರಿಶೀಲನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಪಾಕಿಸ್ತಾನ ಸರ್ಕಾರ ಭಾರತೀಯ ಹೈಕಮಿಷನ್‌ಗೆ ಈಗಾಗಲೇ ಪತ್ರ ಬರೆದಿದೆ ಎಂದು ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಹೇಳಿದ್ದಾರೆ.

ಅಲ್ಲದೆ, “ಪಾಕಿಸ್ತಾನ ಸರ್ಕಾರ ಜಾಧವ್‌ಗೆ ಎರಡನೇ ಕಾನ್ಸುಲರ್ ಪ್ರವೇಶವನ್ನು ನೀಡಿದೆ ಹೀಗಾಗಿ ಈ ಬಾರಿ ಅವರು ತಮ್ಮ ತಂದೆ ಮತ್ತು ಹೆಂಡತಿಯನ್ನು ಭೇಟಿಯಾಗಬಹುದು” ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ.

ಕುಲಭೂಷಣ್ ಜಾಧವ್ ಅವರನ್ನು ಭಾರತಕ್ಕೆ ಕರೆತರಲು ಕಳೆದ ಮೂರು ವರ್ಷದಿಂದ ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ಜಾಧವ್‌ಗೆ ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಭಾರತ ಸರ್ಕಾರ 2017 ರಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ದಾವೆ ಹೂಡಿತ್ತು.

ಜುಲೈನಲ್ಲಿ, ಹೇಗ್ ಮೂಲದ ಐಸಿಜೆ, ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯ ಬಗ್ಗೆ “ಪಾಕಿಸ್ತಾನವು ಪರಿಣಾಮಕಾರಿ ವಿಮರ್ಶೆ ಮತ್ತು ಮರುಪರಿಶೀಲನೆಯನ್ನು ಕೈಗೊಳ್ಳಬೇಕು ಮತ್ತು ಹೆಚ್ಚಿನ ವಿಳಂಬವಿಲ್ಲದೆ ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡಬೇಕು” ಎಂದು ತೀರ್ಪು ನೀಡಿತು.

ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, “ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಐಸಿಜೆ ನೀಡಿದ ತೀರ್ಪನ್ನು ಪಾಕಿಸ್ತಾನ ಸರ್ಕಾರ ಸಂಪೂರ್ಣವಾಗಿ ಪಾಲಿಸಿದೆ” ಎಂದು ಕಳೆದ ಮೇ ತಿಂಗಳಲ್ಲೇ ಹೇಳಿಕೆ ಬಿಡುಗಡೆ ಮಾಡಿದೆ. ಆದಾಗ್ಯೂ ಜಾಧವ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಸಂಬಂಧ ಭಾರತದ ಪ್ರಮುಖ ಸಲಹೆಗಾರ ಹರೀಶ್ ಸಾಲ್ವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.