ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಕೊರೋನಾಗೆ 24 ಗಂಟೆಗಳಲ್ಲಿ 2,000 ಜನ ಸಾವು

Pinterest LinkedIn Tumblr


ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಲೇ ಇದ್ದಾರೆ. ಇದೀಗ ಮತ್ತೆ 24 ಗಂಟೆಗಳಲ್ಲಿ 2,000 ಮಂದಿ ಬಲಿಯಾಗಿದ್ದು, ಮಹಾಮಾರಿ ವೈರಸ್ ಎದುರಿಸುವಲ್ಲಿ ಅಮೆರಿಕಾ ಕಂಗಾಲಾಗಿದೆ.

ಕೆಳೆದ ಮೂರು ದಿನಗಳಿಂದ ಅಂದರೆ, ಮಂಗಳವಾರ 2,207, ಬುಧವಾರ 2,502, ಗುರುವಾರ 2053 ಮಂದಿ ಬಲಿಯಾಗಿದ್ದಾರೆ. ಮೂರು ದಿನಗಳಿಂದಲೂ ಅಮೆರಿಕಾದಲ್ಲಿ 2,000ಕ್ಕೂ ಹೆಚ್ಚು
ಮಂದಿ ಬಲಿಯಾಗುತ್ತೇ ಇದ್ದಾರೆ.

ಇದರೊಂದಿಗೆ ಆ ರಾಷ್ಟ್ರದಲ್ಲಿ ಸಾವಿನ ಸಂಖ್ಯೆ 62,906ಕ್ಕೆ ಏರಿಕೆಯಾಗಿದೆ. ಈ ನಡುವೆ ಕೊರೋನಾಗೆ ಸೂಕ್ತ ಔಷಧ ಕಂಡು ಹಿಡಿಯಲು ವಿಶ್ವದಾದ್ಯಂತ ಭಾರೀ ಯತ್ನ ನಡೆಯುತ್ತಿರುವಾಗಲೇ ಭಾರತೀಯ ಮೂಲಕ ವೈದ್ಯರೊಬ್ಬರ ನೇತೃತ್ವದಲ್ಲಿ ಅಮೆರಿಕಾ ಮೂಲದ ಕಂಪನಿ ಅಭಿವೃದ್ಧಿಪಡಿಸಿರುವ ರೆಮಿಡಿಸಿವಿರ್ ಎಂಬ ಔಷದ ಉತ್ತಮ ಫಲ ನೀಡುವ ಮೂಲಕ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಗಿಲೀಡ್ ಸೈನ್ಸನ್ ಎಂಬ ಅಮೆರಿಕಾ ಕಂಪನಿಯಲ್ಲಿ ಭಾರತೀಯ ಮೂಲದ ಡಾ.ಅರುಣಾ ಸುಬ್ರಮಣಿಯನ್ ನೇತೃತ್ವದ ತಂಡ ಅಭಿವೃದ್ಧಿ ಪಡಿಸಿರುವ ರೆಮಿಡಿಸಿವಿರ್ ಔಷಧವು, ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ.

ಯಾವುದೇ ಔಷಧವು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನದ ಹಂತ ಇದಾಗಿರುವುದರಿಂದ, ಶೀಘ್ರವೇ ಈ ಔಷಧ ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ. ಹಲವು ತಿಂಗಳುಗಳಿಂದಲೇ ಈ ಔಷಧ ಬಳಕೆಗೆ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕಿತರಿಗೆ ಪ್ರಾಯೋಗಿಕ ಪರೀಕ್ಷೆಯ ರೂಪವಾಗಿ ನೀಡಲಾಗುತ್ತಿತ್ತಾದರೂ, ಅದೇ ಔಷಧವನ್ನು ಕಡಿಮೆ ಪ್ರಮಾಣದಲ್ಲಿ ನೀಡಿದರೆ ಅದರ ಪರಿಣಾಮ ಹೇಗಿರಬಹುದು ಎಂಬ ಅಧ್ಯಯನ ನಡೆಸಲಾಗಿತ್ತು. ಚಿಕಿತ್ಸೆ ಪಡೆದವರ ಪೈಕಿ ಶೇ.50ರಷ್ಟು ರೋಗಿಗಳು 2 ವಾರದಲ್ಲಿ ಗುಣಮುಖರಾಗಿ ಮನೆಗೆ ಮರಳಿದ್ದಾರೆಂದು ಅರುಣಾ ಅವರು ತಿಳಿಸಿದ್ದಾರೆ.

Comments are closed.