ರಾಷ್ಟ್ರೀಯ

ನಮ್ಮ ಟೀಚರ್​ಗೆ ಬುದ್ಧಿ ಹೇಳಿ ಎಂದು ಪೊಲೀಸರಿಗೆ ದೂರು ನೀಡಿದ ಪುಟ್ಟ ಹುಡುಗ

Pinterest LinkedIn Tumblr


ಲಾಕ್​ಡೌನ್​ನಿಂದಾಗಿ ಇಡೀ ದೇಶವೇ ಸ್ಥಗಿತಗೊಂಡಿದೆ. ಎಲ್ಲ ಶಾಲಾ-ಕಾಲೇಜು, ಕಂಪನಿಗಳು, ಕಚೇರಿಗಳು ಮುಚ್ಚಲ್ಪಟ್ಟಿವೆ. ಆದರೆ, ಪಂಜಾಬ್​ನ ಹುಡುಗನೊಬ್ಬನನ್ನು ಮಾತ್ರ ಆತನ ಅಪ್ಪ-ಅಮ್ಮ ಟ್ಯೂಷನ್​ಗೆ ಕಳುಹಿಸುತ್ತಿದ್ದರು. ಬೇರೆ ಹುಡುಗರೆಲ್ಲ ಲಾಕ್​ಡೌನ್​ ನೆಪದಲ್ಲಿ ಮನೆಯಲ್ಲೇ ಆಟವಾಡಿಕೊಂಡು ಆರಾಮಾಗಿದ್ದುದನ್ನು ನೋಡಿ ತನ್ನ ಪರಿಸ್ಥಿತಿಯ ಬಗ್ಗೆ ಬೇಸರಿಸಿಕೊಂಡ ಬಾಲಕ ತನ್ನನ್ನು ಟ್ಯೂಷನ್​ನಿಂದ ಬಚಾವ್ ಮಾಡುವಂತೆ ಪೊಲೀಸರ ಮೊರೆಹೋಗಿದ್ದಾನೆ!

ಚಿಕ್ಕ ಬಾಲಕನೋರ್ವ ಪೊಲೀಸರ ಬಳಿ ತನ್ನ ಸಂಕಷ್ಟ ಹೇಳಿಕೊಂಡಿದ್ದಾನೆ. ನನ್ನ ಅಪ್ಪ-ಅಮ್ಮ ಬಲವಂತವಾಗಿ ಟ್ಯೂಷನ್​ಗೆ ಕಳುಹಿಸುತ್ತಿದ್ದಾರೆ. ಎಲ್ಲ ಕಡೆ ಲಾಕ್​ಡೌನ್​ ಇದ್ದರೂ ನನ್ನ ಮನೆಯವರು ಅದನ್ನು ಪಾಲಿಸದೆ ನನ್ನನ್ನು ಹೊರಗೆ ಕಳುಹಿಸುತ್ತಿದ್ದಾರೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಲಾಕ್​ಡೌನ್​ ಇದ್ದಾಗ ಟ್ಯೂಷನ್​ ತೆಗೆದುಕೊಳ್ಳುವುದು ತಪ್ಪು ಎಂದು ಟೀಚರ್​ಗೆ ಬುದ್ಧಿ ಹೇಳಿ ಎಂದು ಪೊಲೀಸರನ್ನು ತನ್ನ ಟ್ಯೂಷನ್​ ಕ್ಲಾಸ್ ನಡೆಯುವ ಟೀಚರ್ ಮನೆಯ​ ಬಳಿ ಕರೆದುಕೊಂಡು ಹೋಗಿದ್ದಾನೆ. ಈ ವಿಡಿಯೋ ಈಗ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ.

ಮನೆಯ ಬಾಗಿಲಿನೆದುರು ನಿಂತಿದ್ದ ಪೊಲೀಸರನ್ನು ಕಂಡು ಟೀಚರ್ ದಂಗಾಗಿದ್ದಾರೆ. ಲಾಕ್​ಡೌನ್​ ಇದ್ದರೂ ನೀವು ಹೇಗೆ ಕ್ಲಾಸ್​ ತೆಗೆದುಕೊಳ್ಳುತ್ತಿದ್ದೀರಿ? ನಿಮಗೆ ಬೇರೆ ಕಾನೂನು ಏನಾದರೂ ಇದೆಯೇ? ನಿಮಗೆ ಟ್ಯೂಷನ್ ಮಾಡಲು ಅನುಮತಿ ಕೊಟ್ಟವರು ಯಾರು? ಎಂದು ಪೊಲೀಸರು ಟೀಚರ್​ಗೆ ಪ್ರಶ್ನೆಯ ಸುರಿಮಳೆಗರೆದಿದ್ದಾರೆ.

ನಾನು ಮಾತ್ರ ಅಲ್ಲ, ಇನ್ನೂ ಮೂರು ಹುಡುಗರಿಗೆ ಈ ಟೀಚರ್ ಕ್ಲಾಸ್​ ಮಾಡುತ್ತಿದ್ದಾರೆ ಎಂದು ಆ ಬಾಲಕ ಮತ್ತೆ ಪೊಲೀಸರಿಗೆ ದೂರು ಹೇಳಿದ್ದಾನೆ. ಅದನ್ನು ಕೇಳಿದ ಪೊಲೀಸರು ಟೀಚರ್​ಗೆ ತರಾಟೆ ತೆಗೆದುಕೊಂಡಿದ್ದಾರೆ. ಟ್ಯೂಷನ್​ನಿಂದ ಬಚಾವಾಗಲು ಬಾಲಕ ಮಾಡಿದ ಕೆಲಸ ನೋಡಿ ಟ್ವಿಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Comments are closed.