ಅಂತರಾಷ್ಟ್ರೀಯ

ಇಲಿಗಳನ್ನು ಬಿಟ್ಟು ಉಚಿತವಾಗಿ ಹೋಟೆಲ್‌ನಲ್ಲಿ ರೂಮ್ ಪಡೆಯುತ್ತಿದ್ದ!

Pinterest LinkedIn Tumblr


ಕ್ರಿಮಿನಲ್‌ಗಳು ಕೆಲವೊಮ್ಮೆ ಮಾಡುವ ಐಡಿಯಾಗಳನ್ನು ಕೇಳಿದರೆ ತಲೆ ಗಿರಗಿರ ಅನ್ನುತ್ತದೆ. ಇದೇ ಬುದ್ಧಿವಂತಿಕೆಯನ್ನು ಇವರೇನಾದರೂ ಸರಿಯಾದ ದಾರಿಯಲ್ಲಿ ಬಳಸಿದ್ದರೆ ದೊಡ್ಡ ಸಾಧನೆಯನ್ನೇ ಮಾಡುತ್ತಿದ್ದರೇನೋ… ಆದರೆ, ಕೆಟ್ಟ ದಾರಿಯಲ್ಲಿ ತಮ್ಮ ಬುದ್ಧಿಯನ್ನು ಪ್ರಯೋಗಿಸಿ ಕೊನೆಗೆ ಕೆಟ್ಟ ಅನುಭವವನ್ನೇ ಪಡೆಯುತ್ತಾರೆ. ಇದು ಕೂಡಾ ಅಂತಹದ್ದೇ `ಖತರ್ನಾಕ್’ ಕ್ರಿಮಿನಲ್ ಕತೆ…

ರಿಯಾನ್ ಸೆಂಟೆಲ್ಲೆ ಸ್ಟೇಟ್ ಎಂಬ 37 ವರ್ಷದ ವ್ಯಕ್ತಿ ಈ ಕತೆಯ ವಿಲನ್. ಮಾಡಿದ ತಪ್ಪಿಗೆ ಉತಾಹ್ ಪೊಲೀಸರು ಈತನನ್ನು ಬಂಧಿಸಿ ಸೆರೆಗಟ್ಟಿದ್ದಾರೆ. ಹೋಟೆಲ್‌ಗಳಲ್ಲಿ ಬಗೆಬಗೆಯಾಗಿ ವಂಚಿಸಿದ್ದರಿಂದ ಈತನೀಗ ಕಂಬಿ ಹಿಂದೆ ಬಂಧಿಯಾಗಿದ್ದಾನೆ. ಇಷ್ಟಕ್ಕೂ ರಿಯಾನ್‌ನ ವಂಚನೆಯ ದಾರಿಯೇ ಡಿಫ್ರೆಂಟ್…!

ಐಷಾರಾಮಿ ಹೋಟೆಲ್‌ಗಳಲ್ಲಿ ಹೋಗಿ ರೂಮ್ ಪಡೆಯುತ್ತಿದ್ದ ರಿಯಾನ್ ಆರಂಭದ ಒಂದಷ್ಟು ಹೊತ್ತು ಸಭ್ಯನಂತೆ ಪೋಸ್ ಕೊಡುತ್ತಿದ್ದ. ಈತನ ನಯವಿನಯ ನೋಡಿ ಹೋಟೆಲ್‌ನವರೇ ಬೋಲ್ಡ್‌ ಆಗುತ್ತಿದ್ದರು. ಆದರೆ, ರೂಮ್ ಪಡೆದು ಒಳಗೆ ಹೋದ ಬಳಿಕ ಈತನ ಅಸಲಿ ಮುಖ ಹೊರಬರುತ್ತಿತ್ತು. ಅದೇನೆಂದರೆ, ಈತ ರೂಮ್‌ನೊಳಗೆ ಹೋಗುತ್ತಿದ್ದಂತೆಯೇ ತಾನು ತಂದಿದ್ದ ಒಂದಷ್ಟು ಇಲಿ ಮರಿಗಳನ್ನು ಕೋಣೆಯಲ್ಲಿ ಬಿಡುತ್ತಿದ್ದ. ಬಳಿಕ ಸಿಬ್ಬಂದಿಯನ್ನು ಕರೆದು `ಹೋಟೆಲ್ ಕ್ಲೀನ್ ಇಲ್ಲ. ಎಲ್ಲಾ ಕಡೆ ಇಲಿಗಳು ಓಡಾಡುತ್ತಿವೆ’ ಎಂದು ಖ್ಯಾತೆ ತೆಗೆದು ನನಗೆ ರೂಮ್ ಫ್ರೀ ಕೊಡಬೇಕು ಎಂದು ಪಟ್ಟು ಹಿಡಿಯುತ್ತಿದ್ದ.

ಒಂದಷ್ಟು ಹೋಟೆಲ್‌ನಲ್ಲಿ ಈತನ ಈ ತಂತ್ರ ಫಲಕೊಟ್ಟಿತ್ತು. ಆದರೆ, ಎಷ್ಟು ದಿನ ಈ ಕಳ್ಳ ಜೀವನ ನಡೆಸಲು ಸಾಧ್ಯ ಹೇಳಿ ಸಿಕ್ಕಿಬೀಳಲೇಬೇಕು. ರಿಯಾನ್ ಕೂಡಾ ಎರಡ್ಮೂರು ಹೋಟೆಲ್‌ಗಳಲ್ಲಿ ಇದೇ ತಂತ್ರ ಹೂಡಿ ಫ್ರೀ ಅಥವಾ ಕಡಿಮೆಗೆ ರೂಮ್ ಪಡೆದು ಹಾಯಾಗಿದ್ದ. ಆದರೆ, ಈತನ ಆಟ ಹೆಚ್ಚು ದಿನ ನಡೆಯಲಿಲ್ಲ. ಯಾಕೆಂದರೆ, ಈತನ ಬಗ್ಗೆ ಅನುಮಾನಗೊಂಡಿದ್ದ ಹೋಟೆಲ್‌ನವರು ದೂರು ಕೊಟ್ಟಿದ್ದರಿಂದ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಈತ ಇದೇ ರೀತಿ ಹಲವು ಹೋಟೆಲ್‌ಗಳಿಗೆ ವಂಚನೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈತ ಪೊಲೀಸರಿಗೆ ಹೇಗೆ ಸೆರೆ ಸಿಕ್ಕ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಬಂಧನದ ಬಳಿಕ ಈತ ತಾನು ಇಲಿಗಳನ್ನು ಹೋಟೆಲ್ ಕೋಣೆಯೊಳಗೆ ಬಿಡುತ್ತಿದ್ದದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಮೂರು ಕ್ರಿಮಿನಲ್ ಕೇಸ್ ಸೇರಿ ಒಟ್ಟು ಐದು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Comments are closed.