ರಾಷ್ಟ್ರೀಯ

ಚಲಿಸುತ್ತಿದ್ದ ವಿಮಾನ ದಿಢೀರ್‌ ಟೇಕಾಫ್‌, 180 ಜೀವ ರಕ್ಷಿಸಿದ ಪೈಲೆಟ್‌!

Pinterest LinkedIn Tumblr


ಹೊಸದಿಲ್ಲಿ: ಪುಣೆ ವಿಮಾನ ನಿಲ್ದಾಣದ ರನ್‌ವೇ ಪಥದಲ್ಲಿ ಗಂಟೆಗೆ 222 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವಿಮಾನವನ್ನು ಪೈಲಟ್‌ ದಿಢೀರ್‌ ಟೇಕಾಫ್‌ ಮಾಡುವ ಮೂಲಕ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಆದರೆ ಈ ಸಾಹಸದಲ್ಲಿ ವಿಮಾನದ ಕೆಳಗಿನ ಹಿಂಬದಿಯ ಭಾಗಕ್ಕೆ (ಫ್ಯೂಸ್‌ಲೇಜ್‌) ಸ್ವಲ್ಪಮಟ್ಟಿಗೆ ಹಾನಿಯಾಗಿದ್ದು, ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ವಿಮಾನ ಪುಣೆಯಿಂದ ದಿಲ್ಲಿಗೆ ಸುರಕ್ಷಿತವಾಗಿ ಬಂದಿಳಿಯುವ ಮೂಲಕ 180 ಪ್ರಯಾಣಿಕರ ಜೀವ ಉಳಿದಿದೆ.

ರನ್‌ವೇಯಲ್ಲಿ ವಿಮಾನ ಸಾಗುವ ಹಾದಿಯಲ್ಲಿಯೇ ವಿಮಾನಯಾನ ಸಂಸ್ಥೆಯೊಂದರ ‘ಗ್ರೌಂಡ್‌ ಸಿಬ್ಬಂದಿ’ಯೊಬ್ಬರು ಜೀಪ್‌ನಲ್ಲಿ ಸಾಗುತ್ತಿದ್ದುದು ಕೊನೆಕ್ಷಣದಲ್ಲಿ ಪೈಲಟ್‌ ಗಮನಕ್ಕೆ ಬಂದಿತು. ಅವರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ದಿಢೀರ್‌ ಟೇಕಾಫ್‌ ಮಾಡಿದರು. ಈ ಸಂದರ್ಭದಲ್ಲಿ ಹಿಂಭಾಗ ನೆಲಕ್ಕೆ ತಾಗಿ ಸ್ವಲ್ಪಮಟ್ಟಿಗೆ ಜಖಂಗೊಂಡಿತು.

ಇದೇ ವಿಮಾನ ಮುಂದೆ ದಿಲ್ಲಿಯಿಂದ ಶ್ರೀನಗರಕ್ಕೆ ತೆರಳಬೇಕಿತ್ತು. ವಿಮಾನ ಹಾರಾಟದ ಪೂರ್ವ ತಪಾಸಣೆ ವೇಳೆ ಪ್ಲೇನ್‌ನ ಕೆಳಭಾಗಕ್ಕೆ ಹಾನಿಯಾಗಿರುವುದು ಪತ್ತೆಯಾಗಿತ್ತು. ತಕ್ಷಣವೇ ವಿಮಾನವನ್ನು ಸೇವೆಯಿಂದ ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಏರ್‌ ಇಂಡಿಯಾ ಘೋಷಿಸಿತು.

ತನಿಖೆಗೆ ಆದೇಶ: ಘಟನೆ ಕುರಿತು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ. ಏರ್‌ ಇಂಡಿಯಾ ಕಂಪನಿ ಪುಣೆ ಎಟಿಸಿ (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಜತೆ ಸಂಪರ್ಕದಲ್ಲಿದ್ದು, ಅಲ್ಲಿನ ರನ್‌ವೇನಲ್ಲಿ ಏನಾದರೂ ಮಾರ್ಕ್ ಆಗಿದೆಯೇ ಎಂಬುದನ್ನು ಪತ್ತೆ ಹಚ್ಚಿ ಮಾಹಿತಿ ರವಾನಿಸುವಂತೆ ಸೂಚಿಸಿದೆ. ವಿಮಾನದ ಸಿವಿಆರ್‌ (ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌) ಮತ್ತು ಎಸ್‌ಎಸ್‌ಎಫ್‌ಡಿಆರ್‌(ಸಾಲಿಡ್‌ ಸ್ಟೇಟ್‌ ಫ್ಲೈಟ್‌ ಡೇಟಾ ರೆಕಾರ್ಡರ್‌)ಗಳನ್ನು ಪಡೆದು ಅದನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಏರ್‌ ಇಂಡಿಯಾ ವಕ್ತಾರರು ಹೇಳಿದ್ದಾರೆ

Comments are closed.