ಅಂತರಾಷ್ಟ್ರೀಯ

2 ದಿನ ರೂಮ್ ನಿಂದ ಮಹಿಳೆಯನ್ನು ಹೊರಗೆ ಬರಲು ಬಿಡದ ಬೆಕ್ಕುಗಳು!

Pinterest LinkedIn Tumblr


ಬೆಕ್ಕು ಎಲ್ಲರ ಮುದ್ದಿನ ಸಾಕುಪ್ರಾಣಿ. ಬಹುತೇಕ ಸಂದರ್ಭದಲ್ಲಿ ಬೆಕ್ಕುಗಳಿಗೆ ಮನೆಯ ಸದಸ್ಯರ ಸ್ಥಾನವೇ ಇರುತ್ತದೆ. ಇಂತಹ ಮುದ್ದಿನ ಪ್ರಾಣಿಗಳು ಮಾಲೀಕರ ಮೇಲೆಯೇ ಆಕ್ರಮಣ ಮಾಡಲು ಸಾಧ್ಯವಿದೆಯಾ…? ಮಾಲೀಕರನ್ನು ಎರಡೆರಡು ದಿನವೆಲ್ಲಾ ಕೋಣೆಯಲ್ಲೇ ತಡೆಯಲು ಸಾಧ್ಯವಿದೆಯಾ…? ಕೇಳುವಾಗ ನಿಜಕ್ಕೂ ವಿಚಿತ್ರವೆನಿಸುತ್ತದೆ. ಆದರೆ, ಇಂತಹ ಘಟನೆ ರಷ್ಯಾದಲ್ಲಿ ನಡೆದಿದೆ ಎನ್ನಲಾಗಿದೆ.

ಎರಡು ಸಾಕುಬೆಕ್ಕುಗಳ ಆಕ್ರಮಣಕಾರಿಯಾಗಿ ವರ್ತಿಸಲು ಆರಂಭಿಸಿದ್ದರಿಂದ ಮಹಿಳೆಯೊಬ್ಬರು ಎರಡು ದಿನಗಳ ಕಾಲ ಅಡುಗೆ ಕೋಣೆಯಲ್ಲೇ ಕಾಲ ಕಳೆದಿದ್ದಾರೆ. ಕೋಣೆಯಿಂದ ಹೊರಗೆ ಬರಲು ಯತ್ನಿಸಿದಾಗಲ್ಲೆಲ್ಲಾ ಈ ಬೆಕ್ಕುಗಳ ಇವರ ಮೇಲೆ ದಾಳಿ ಮಾಡುತ್ತಿದ್ದವಂತೆ. ಹೀಗಾಗಿ, ಕೋಣೆಯಿಂದ ಹೊರಗೆ ಬಾರದೆ ಇವರು ಎರಡು ದಿನ ಭಯದಲ್ಲೇ ಕಾಲ ಕಳೆದಿದ್ದರು ಎಂದು ವರದಿಯಾಗಿದೆ.

ರಷ್ಯಾದ ಈ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಾಗ ಈ ಘಟನೆ ನಡೆದಿದೆ. ಆರಂಭದಲ್ಲಿ ಇದು ಸುಳ್ಳು ಸುದ್ದಿ ಎಂದೆ ಎಲ್ಲರೂ ತಿಳಿದುಕೊಂಡಿದ್ದರು. ಆದರೆ, ರಷ್ಯಾದ ಅರ್ಕಾಂಜೆಲ್ಸ್ಕ್‌ನ ರಕ್ಷಣಾ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ. ಈ ಮಾಹಿತಿ ಪ್ರಕಾರ, ಜನವರಿ 19ರ ಭಾನುವಾರ ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರು, ಸುವೊರೊವ್ ಬೀದಿಯ ಮೂರನೇ ಮಹಡಿಯ ಅಪಾರ್ಟ್‌ಮೆಂಟಿನ ಕಿಟಕಿಯಲ್ಲಿ ಮಹಿಳೆಯೊಬ್ಬರು ಸಹಾಯಕ್ಕಾಗಿ ಸನ್ನೆ ಮಾಡುತ್ತಿರುವುದನ್ನು ಗಮನಿಸಿದ್ದರು. ಜೊತೆಗೆ, ತನ್ನ ಎರಡು ಬೆಕ್ಕುಗಳು ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದು, ಎರಡು ದಿನಗಳಿಂದ ಕೋಣೆಯಿಂದ ಹೊರಗೆ ಬರಲು ಬಿಡುತ್ತಿಲ್ಲ ಎಂದು ಮಹಿಳೆ ಆ ಸ್ಥಳೀಯ ವ್ಯಕ್ತಿಯಲ್ಲಿ ವಿವರಿಸಿದ್ದರು.

ಹೀಗಾಗಿ, ಈ ವಿಷಯ ಅರ್ಕಾಂಜೆಲ್ಸ್ಕ್‌ನ ರಕ್ಷಣಾ ಸಂಸ್ಥೆಗೆ ತಲುಪುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಈ ಮಹಿಳೆ ಇದ್ದ ಮನೆಗೆ ಬಂದಿದ್ದರು. ಆದರೆ, ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಕಿಟಕಿಯ ಸಹಾಯದಿಂದ ಇವರು ಮನೆಯೊಳಗೆ ಪ್ರವೇಶಿಸಿದ್ದರು. ಬಳಿಕ ಆಕ್ರಮಣಕಾರಿ ಬೆಕ್ಕುಗಳನ್ನು ಹಿಡಿದ ಈ ಸಿಬ್ಬಂದಿ ಮಹಿಳೆಯನ್ನು ಇಲ್ಲಿಂದ ರಕ್ಷಿಸಿದ್ದಾರೆ.

ಈ ಎರಡು ದಿನ ತಾನು ಬೆಕ್ಕುಗಳಿಂದ ತಪ್ಪಿಸಿಕೊಳ್ಳಲು ಬಾತ್‌ರೂಮ್‌ನಲ್ಲಿ ಕಾಲ ಕಳೆದಿದ್ದಾಗಿ ಈ ಮಹಿಳೆ ಹೊರಗೆ ಬಂದ ಮೇಲೆ ತಿಳಿಸಿದ್ದಾರೆ. ಬೆಕ್ಕಿನಿಂದ ಈ ಮಹಿಳೆಗೆ ಯಾವುದೇ ಹಾನಿಯಾಗಿಲ್ಲ ಎಂದು ಗೊತ್ತಾಗಿದೆ. ಆದರೆ, ಈ ಎರಡು ಬೆಕ್ಕುಗಳ ಯಾಕೆ ಹೀಗೆ ವರ್ತಿಸಿದ್ದವು ಎಂಬುದು ನಿಗೂಢವಾಗಿದೆ. ಹೀಗಾಗಿ, ಇವುಗಳನ್ನು ಗೂಡಿನಲ್ಲಿಟ್ಟು ಪಶುವೈದ್ಯರು ಈ ಬೆಕ್ಕುಗಳ ವಿಲಕ್ಷಣ ವರ್ತನೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.

Comments are closed.