
ಮಾಂಟ್ರಿಯಲ್: ತಾನೊಂದು ಬಗೆದರೆ, ದೈವವೊಂದು ಬಗೆಯುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ.
ಮದುವೆಯಾಗಬೇಕೆಂಬ ಕನಸು ಹೊತ್ತು ಇರಾನ್‌ಗೆ ತೆರಳಿದ್ದ ಯುವ ಜೋಡಿಯೊಂದು ಇತ್ತೀಚೆಗೆ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕಾನ್‌ಕಾರ್ಡಿಯಾ ವಿಶ್ವವಿದ್ಯಾಲಯದಲ್ಲಿ ಎಂಜನಿಯರಿಂಗ್ ಪದವಿ ಮುಗಿಸಿದ್ದ ಸಿಯಾವಾಷ್ ಗೌಹರಿ ಅಜರ್ ಮತ್ತು ಸಾರ ಮಮಾನಿ ವಿಮಾನ ಅಪಘಾತದಲ್ಲಿ ಮೃತಪಟ್ಟ ನತದೃಷ್ಟ ಜೋಡಿ.
ಮಾಂಟ್ರಿಯಲ್‌ನಲ್ಲಿ ಪದವಿ ಮಾಡುವ ಸಂದರ್ಭದಲ್ಲಿ ಭೇಟಿಯಾದ ಇಬ್ಬರಿಗೂ ಪ್ರೇಮಾಂಕುರವಾಯಿತು. ಶಿಕ್ಷಣ ಪೂರೈಸಿ, ಉದ್ಯೋಗ ಪಡೆದ ನಂತರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವ ಕನಸು ಕಂಡಿದ್ದರು. ಇತ್ತೀಚೆಗೆ ಮಾಂಟ್ರಿಯಲ್‌ನಲ್ಲಿ ಹೊಸ ಮನೆಯನ್ನೂ ಕೂಡ ಖರೀದಿಸಿದ್ದರು. ಆದರೆ ವಿಧಿಯಾಟವೇ ಬೇರೆ ರೀತಿಯದ್ದಾಗಿತ್ತು.
ಇರಾನ್ ಮೂಲದ ಈ ಜೋಡಿ ಕೆಲವು ದಿನಗಳ ಹಿಂದೆ ಕೆನಡಾದಿಂದ ಪ್ರಯಾಣ ಬೆಳೆಸಿದ್ದರು. ಇರಾನ್‌ನಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಕೆನಡಾಗೆ ಮತ್ತೆ ವಾಪಸಾಗಬೇಕಾಯಿತು.
ಮದುವೆ ಮುಗಿದು ಕುಟುಂಬ ಸದಸ್ಯರ ಜತೆ ಕೆಲವು ದಿನಗಳ ಕಾಲ ಖುಷಿಯಾಗಿ ಕಳೆದ ನಂತರ ಕೆನಡಾಗೆ ವಾಪಸಾಗಲು ನವದಂಪತಿ ನಿರ್ಧರಿಸಿದರು. ಉಕ್ರೇನ್ ಅಂತಾರಾಷ್ಟ್ರೀಯ ವಿಮಾನದಲ್ಲಿ ಟಿಕೆಟ್ ಕೂಡ ಬುಕ್ ಮಾಡಿಸಿದರು. ಬುಧವಾರ ಬೆಳಗ್ಗೆ ಟೆಹರಾನ್‌ನಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 167 ಪ್ರಯಾಣಿಕರು ಅಸುನೀಗಿದರು. ಈ ಪೈಕಿ ನವ ದಂಪತಿ ಸಿಯಾವಾಷ್ ಗೌಹರಿ ಅಜರ್ ಮತ್ತು ಸಾರ ಮಮಾನಿ ಇದ್ದರು. ಒಟ್ಟು 63 ಮಂದಿ ಕೆನಡಾ ಪ್ರಯಾಣಿಕರಿದ್ದರು.
ಅಜರ್ ಬಗ್ಗೆ ವಿವಿಯ ಪ್ರೊಫೆಸರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಅತ್ಯಂತ ಚಾಣಾಕ್ಷ ಮತ್ತು ಸಭ್ಯ ವಿದ್ಯಾರ್ಥಿಯಾಗಿದ್ದ. ಅಲ್ಲದೇ ವಿಧೇಯನಾಗಿದ್ದ ಎಂದು ಹೇಳಿದ್ದಾರೆ.
ಮತ್ತೊಬ್ಬ ಪ್ರೊಫೆಸರ್ ಮಾತನಾಡಿ, ಅಜರ್ ವಿವಿಯಲ್ಲಿ ಇದ್ದಷ್ಟು ದಿನವೂ ಸಖತ್ ಆಕ್ಟೀವ್ ಆಗಿದ್ದ. ಹೇಳೀದ ಕೆಲಸವನ್ನು ಚಾಚೂತಪ್ಪದೇ ಮಾಡುತ್ತಿದ್ದ ಎಂದು ನೆನಪಿಸಿಕೊಂಡರು.
ಒಟ್ಟಾರೆಯಾಗಿ ನವಜೋಡಿಯ ಹೊಸ ಕನಸು ವಿಮಾನ ಅಫಘಾತದಲ್ಲಿ ಕಮರಿ ಹೋಗಿದೆ.
Comments are closed.