ರಾಷ್ಟ್ರೀಯ

ಧರ್ಮ ಆಧಾರಿತ ವಿಭಜನೆಯೇ ಸಿಎಎ ಉದ್ದೇಶ: ಸೋನಿಯಾ

Pinterest LinkedIn Tumblr


ಹೊಸದಿಲ್ಲಿ: ವಿವಾದಿತ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ತಾರತಮ್ಯದಿಂದ ಕೂಡಿದ್ದು, ದೇಶವನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವ ಉದ್ದೇಶವನ್ನು ಹೊಂದಿದೆ ಎಂಬುದಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಂಡಕಾರಿದ್ದಾರೆ.

ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. “ಸಿಎಎ ಒಂದು ತಾರತಮ್ಯ ಮತ್ತು ವಿಭಜಕ ಕಾನೂನು. ಭಾರತೀಯ ಜನರನ್ನು ಧಾರ್ಮಿಕ ದೃಷ್ಟಿಯಿಂದ ವಿಭಜಿಸುವ ಈ ಕಾನೂನಿನ ಕೆಟ್ಟ ಉದ್ದೇಶ ಪ್ರತಿಯೊಬ್ಬ ದೇಶಭಕ್ತ, ಸಹಿಷ್ಣು ಮತ್ತು ಜಾತ್ಯತೀತ ಭಾರತೀಯರಿಗೆ ಸ್ಪಷ್ಟವಾಗಿದೆ,” ಎಂದು ಅವರು ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿರುವ ಅವರು, ಹೊಸ ಪೌರತ್ವ ಕಾನೂನಿನ ಅನುಷ್ಠಾನದಿಂದಾಗುವ ‘ಗಂಭೀರ ಹಾನಿ’ ಯನ್ನು ಸಾವಿರಾರು ಯುವಕ-ಯುವತಿಯರು, ವಿಶೇಷವಾಗಿ ವಿದ್ಯಾರ್ಥಿಗಳು ಅರಿತುಕೊಂಡಿದ್ದಾರೆ ಎಂದರು.

“ಕೆಲವು ರಾಜ್ಯಗಳ ಪರಿಸ್ಥಿತಿ ಆತಂಕಕಾರಿಯಾಗಿದೆ. ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ದೆಹಲಿಯನ್ನು ಪೊಲೀಸ್ ರಾಜ್ಯಗಳಾಗಿ ಪರಿವರ್ತಿಸಲಾಗುತ್ತಿದೆ. ಉತ್ತರ ಪ್ರದೇಶದ ಅನೇಕ ಪಟ್ಟಣಗಳಲ್ಲಿ, ಜಾಮಿಯಾ ಮಿಲಿಯಾ ವಿವಿಯಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಅಲಹಾಬಾದ್ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಗುಜರಾತ್ ವಿಶ್ವವಿದ್ಯಾಲಯ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿತಿಮೀರಿ ಪೊಲೀಸರು ಮತ್ತು ಮೃಗೀಯ ಶಕ್ತಿಗಳನ್ನು ಬಳಸುತ್ತಿರುವುದರ ಬಗ್ಗೆ ನಾವು ದಿಗಿಲುಗೊಂಡಿದ್ದೇವೆ,” ಎಂಬುದಾಗಿ ಗಾಂಧಿ ಕಳವಳ ವ್ಯಕ್ತಪಡಿಸಿದರು.

ಈ ಕಾರಣಕ್ಕೆ “ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಉನ್ನತ ಆಯೋಗವನ್ನು ರಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ,” ಎಂದು ಅವರು ವಿವರಿಸಿದರು.

ಇದೇ ವೇಳೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅನ್ನು ಟೀಕಿಸಿದ ಸೋನಿಯಾ ಗಾಂಧಿ ಇದು ‘ಹಾನಿಕರವಲ್ಲದ ಪ್ರಕ್ರಿಯೆ’ ಎಂಬ ಭ್ರಮೆಯಲ್ಲಿರಬೇಡಿ ಎಂದು ಹಿರಿಯ ಕಾಂಗ್ರೆಸ್‌ ನಾಯಕರಿಗೆ ಕಿವಿಮಾತು ಹೇಳಿದರು.

“ರೂಪ ಮತ್ತು ವಿಷಯದಲ್ಲಿ, ‘ಎನ್‌ಪಿಆರ್ 2020’ ವೇಷ ಧರಿಸಿದ ಎನ್‌ಆರ್‌ಸಿ” ಎಂದು ಅವರು ಹರಿಹಾಯ್ದರು. ಇದಾದ ಬಳಿಕ ಅವರು ದೇಶದ ಹಣಕಾಸು ಸ್ಥಿತಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.

“ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತಿರುವುದು ದುಃಖ ಮತ್ತು ಕಳವಳಕಾರಿ ಸಂಗತಿ. ಆದರೆ ಸರಕಾರ ಮಾತ್ರ ಪರಿಸ್ಥಿತಿ ಸಾಮಾನ್ಯವಾಗಿದೆ ಎಂಬ ವಿಡಂಬನಾತ್ಮಕ ವಾದಗಳನ್ನು ಮಾಡುತ್ತಿದೆ ಮತ್ತು ರಾಜತಾಂತ್ರಿಕರ ಮಾರ್ಗದರ್ಶಿ ಪ್ರವಾಸಗಳನ್ನು ಏರ್ಪಡಿಸುತ್ತಿದೆ,” ಎಂದು ಅವರು ವಾಗ್ದಾಳಿ ನಡೆಸಿದರು.

Comments are closed.