ಅಂತರಾಷ್ಟ್ರೀಯ

ಚೀನಾದಿಂದ ಅಮೆರಿಕದ ಮೇಲೆ 30 ನಿಮಿಷಗಳಲ್ಲಿ ದಾಳಿ ಮಾಡಬಲ್ಲ ಕ್ಷಿಪಣಿ ಪ್ರದರ್ಶನ

Pinterest LinkedIn Tumblr


ಬೀಜಿಂಗ್: ಕೇವಲ 30 ನಿಮಿಷಗಳಲ್ಲಿ ಅಮೆರಿಕ ಮೇಲೆ ದಾಳಿ ಮಾಡಬಲ್ಲ ಹೈಪರ್ಸಾನಿಕ್‌ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಚೀನಾ ಇಂದು ಪ್ರದರ್ಶಿಸಿದೆ.

ಇಂದು ಚೀನಾದ 70ನೇ ವರ್ಷಾಚರಣೆಯಾಗಿದ್ದು, ಈ ವೇಳೆ ಚೀನಾ ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಪರೇಡ್‍ನಲ್ಲಿ ಡಿಎಫ್-17 ಮಿಸೈಲ್‍ಗಳ ಜೊತೆಗೆ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿರುವ ಡಿಎಫ್-41 ಖಂಡಾತರ ಕ್ಷಿಪಣಿಯನ್ನು ಪ್ರದರ್ಶಿಸಿದೆ. ಇದು ಕೇವಲ 30 ನಿಮಿಷಗಳಲ್ಲಿ ಅಮೆರಿಕದ ಮೇಲೆ ದಾಳಿ ನಡೆಸುವ ಶಕ್ತಿಯನ್ನು ಹೊಂದಿದೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು 80 ನಿಮಿಷಗಳ ಕಾಲ ಪರೇಡ್ ನಡೆಸಿದ್ದು, ಈ ವೇಳೆ ಸೇನೆಯ ಹೊಸ ಶಸ್ತ್ರಾಸ್ತ್ರಗಳು ಹಾಗೂ ಸಾಮಾಗ್ರಿಗಳು ವಿಶ್ವದ ಮುಂದೆ ಅನಾವರಣಗೊಂಡಿದೆ.

ಚೀನಾ ಭಾಷೆಯಲ್ಲಿ ಡಿಎಫ್ ಅಂದರೆ ಡಾಂಗ್‍ಫೆಂಗ್(ಪೂರ್ವ ಗಾಳಿ) ಎಂದು ಕರೆಯುತ್ತಾರೆ. ಈ ಹೆಸರಿನಲ್ಲೇ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಡಿಎಫ್-41 ಖಂಡಾಂತರ ಕ್ಷಿಪಣಿಯಾಗಿದ್ದು, ಇದು 12,000ರಿಂದ 15,000 ಕಿಲೋಮೀಟರ್(7,400-9,320 ಮೈಲಿ)ಗಳಷ್ಟು ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಇದು ವಿಶ್ವದಲ್ಲೇ ಅತಿ ಉದ್ದವಾದ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು 10-12 ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಪಡೆದಿದೆ.

40 ಸಾವಿರ ಕೆಜೆ ತೂಕ, 21 ಮೀಟರ್ ಉದ್ದ, 2.25 ಮೀಟರ್ ವ್ಯಾಸ ಹೊಂದಿರುವ ಈ ಕ್ಷಿಪಣಿಯನ್ನು 2012 ರಿಂದಲೇ ಚೀನಾ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದು ಇಂದು ಪ್ರದರ್ಶಿಸಿದೆ.

ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್‍ನ್ಯಾಷನಲ್ ಸ್ಟಡೀಸ್ ಈ ಕ್ಷಿಪಣಿಯೂ ಕೇವಲ 30 ನಿಮಿಷಗಳಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ.

ಏನಿದು ಹೈಪರ್ ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ?
ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ಮತ್ತೆ ಭೂಮಿಯನ್ನು ಪ್ರವೇಶಿಸಿ ಭೂಮಿಗೆ ಅಪ್ಪಳಿಸುವ ಕ್ಷಿಪಣಿಗಳಮನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತಿದೆ. ಈ ಕ್ಷಿಪಣಿಗಳು ವೇಗವಾಗಿ ಭೂಮಿಯ ವಾತಾವರಣ ಮರು ಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಹೆಚ್ಚಿನ ತಾಪಮಾನದಿಂದಾಗಿ ಶತ್ರುಗಳ ಕ್ಷಿಪಣಿಗಳನ್ನು ನಾಶಮಾಡಲು ಸಾಧ್ಯವಾಗುತ್ತದೆ.

ಕ್ಷಿಪಣಿಗಳು ಭೂಮಿ ಪ್ರವೇಶಿಸುವಾಗ ಭೂ ಗುರುತ್ವಾಕರ್ಷಣೆಗೆ ಒಳಗಾಗುತ್ತದೆ. ಹೀಗಾಗಿ ನಿರ್ಧಿಷ್ಟ ಗುರಿಯನ್ನು ತಲುಪುವಂತಾಗಲು ಗ್ಲೋಬಲ್ ಪೊಸಿಷನ್ ಸಿಸ್ಟಮ್(ಜಿಪಿಎಸ್) ಅಳವಡಿಸಲಾಗಿರುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತಗಾರ್ಮಿಯಿಂದ ಹಾಗೂ ಚಲಿಸುವ ವಾಹನಗಳ ಮೂಲಕವೂ ಉಡಾಯಿಸಬಹುದಾಗಿದೆ. ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವನ್ನು ಹೊಂದಿರುವ ಕಾರಣ ಇವುಗಳಿಗೆ ಹೈಪರ್‍ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ಕರೆಯಲಾಗುತ್ತದೆ.

Comments are closed.