
ನವದೆಹಲಿ: ಕಳೆದ 25 ವರ್ಷಗಳಲ್ಲಿ ಸುರಿಯದಂತಹ ಮುಂಗಾರು ಮಳೆ ಈ ವರ್ಷ ಸುರಿದಿದೆ. ಜೂನ್ನಿಂದ ಮಳೆಯ ಅವಘಡದಿಂದ 1600ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳಿದೆ. ಈಶಾನ್ಯದ ಎರಡು ರಾಜ್ಯಗಳಲ್ಲಿ ಪ್ರವಾಹದ ಎದುರು ಅಧಿಕಾರಿಗಳು ಹೋರಾಟ ನಡೆಸುತ್ತಿದ್ದಾರೆ ಮತ್ತು ಪ್ರಮುಖ ನಗರಗಳು ಮಣ್ಣುಮಿಶ್ರಿತ ನೀರಿನಿಂದ ತುಂಬಿ ಹೋಗಿವೆ.
ಸಾಮಾನ್ಯವಾಗಿ ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಮಾನ್ಸೂನ್ ಈಗಾಗಲೇ 50 ವರ್ಷಗಳ ಸರಾಸರಿಗಿಂತ ಶೇ. 10ರಷ್ಟು ಹೆಚ್ಚಿನ ಮಳೆಯಾಗಿದೆ.
ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ತೀವ್ರಮಟ್ಟದಲ್ಲಿ ಸುರಿದ ಮಳೆ ಭಾರೀ ಹಾನಿಯನ್ನು ಉಂಟು ಮಾಡಿದೆ. ಕಳೆದ ಶುಕ್ರವಾರದಿಂದ ಈವರೆಗೂ ಸುರಿದ ಮಳೆಯಿಂದಾಗಿ 144 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಬಿಹಾರದ ರಾಜಧಾನಿ ಪಾಟ್ನಾ ನಗರ ನದಿ ಸಮೀಪವಿರುವುದರಿಂದ ನಗರದೊಳಗೆ ನುಗ್ಗುವ ಪ್ರವಾಹ ಎರಡು ಮಿಲಿಯನ್ ಜನರ ಬದುಕನ್ನು ಮೂರಾಬಟ್ಟೆ ಮಾಡಿಹಾಕಿದೆ. ದಿನನಿತ್ಯದ ಅವಶ್ಯಕತೆಗಳಾದ ಕುಡಿಯುವ ನೀರು, ಹಾಲು, ಆಹಾರ ಪದಾರ್ಥಗಳಿಗೂ ಪರದಾಡುವಂತಾಗಿದೆ.
ದೇಶದಲ್ಲಿ ಅತಿ ಹೆಚ್ಚು ಜನರಿರುವ ಉತ್ತರಪ್ರದೇಶಲ್ಲಿ ಭಾರೀ ಮಳೆಯಾಗಿದ್ದು, 800ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿವೆ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಹಾಳಾಗಿದೆ. ಗೃಹ ಸಚಿವಾಲಯದ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಸುರಿದ ಮಳೆಗೆ 1673 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರವಾಹದಿಂದಲೇ 371 ಮಂದಿ ಅಸುನೀಗಿದ್ದಾರೆ.
Comments are closed.