ಅಂತರಾಷ್ಟ್ರೀಯ

ಪತ್ನಿಯ ಬ್ಯಾಂಕ್​ ಖಾತೆಯನ್ನು ಬಾಹ್ಯಾಕಾಶ ಕೇಂದ್ರದಿಂದಲೇ ಕದ್ದು ನೋಡಿದಳು ! ಮುಂದೆ ಏನಾಯಿತು ನೋಡಿ….

Pinterest LinkedIn Tumblr

ವಾಷಿಂಗ್ಟನ್​: ಆ್ಯನ್​ ಮೆಕ್ಲೇನ್​ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್​ಎಸ್​) ತೆರಳಿದ್ದರು. ಆ ಕೇಂದ್ರದಲ್ಲಿದ್ದ ಮತ್ತೊಬ್ಬ ಮಹಿಳಾ ಗಗನಯಾತ್ರಿ ಜತೆಗೆ ಬಾಹ್ಯಾಕಾಶ ನಡಿಗೆ ಕೈಗೊಂಡು ದಾಖಲೆ ನಿರ್ಮಿಸಬೇಕಿತ್ತು. ದುರದೃಷ್ಟವಶಾತ್​ ಅವರ ಸ್ಪೇಸ್​ಸೂಟ್​ನಲ್ಲಿ ನೂನ್ಯತೆ ಕಂಡುಬಂದಿತ್ತು. ಈ ಕಾರಣಕ್ಕಾಗಿ ಈ ದಾಖಲೆಯ ಅವಕಾಶ ಅವರ ಕೈತಪ್ಪಿತು. ಆದರೆ, ಈಗ ತಮ್ಮಿಂದ ಪ್ರತ್ಯೇಕಗೊಂಡಿದ್ದ ಪತ್ನಿಯ ಬ್ಯಾಂಕ್​ ಖಾತೆಯನ್ನು ಬಾಹ್ಯಾಕಾಶ ಕೇಂದ್ರದಿಂದಲೇ ಕದ್ದು ನೋಡಿದ ಗುರುತರ ಆರೋಪಕ್ಕೆ ಒಳಗಾಗಿದ್ದಾರೆ.

ಅಲ್ಲದೆ, ಬಾಹ್ಯಾಕಾಶದಿಂದ ನಡೆದ ಮೊದಲ ಅಪರಾಧ ಪ್ರಕರಣದಲ್ಲಿ ಭಾಗಿಯಾದ ದಾಖಲೆ ನಿರ್ಮಿಸಿದ್ದಾರೆ!
ಇದು ಕೇಳಲು ವಿಚಿತ್ರವೆನಿಸಿದರೂ ಸತ್ಯ. ಇದೀಗ ಆ್ಯನ್​ ಮೆಕ್ಲೇನ್​ ವಿರುದ್ಧ ಪತ್ನಿಯ ಖಾಸಗಿ ಮಾಹಿತಿಯ ಕಳ್ಳತನ ಮತ್ತು ಖಾಸಗಿ ಲೆಕ್ಕಪತ್ರ ವಿವರಗಳನ್ನು ಪರಿಶೀಲಿಸಿರುವ ಆರೋಪ ಮಾಡಲಾಗಿದೆ. ಅಮೆರಿಕದ ಫೆಡರಲ್​ ಟ್ರೇಡ್​ ಕಮಿಷನ್​ ಅಲ್ಲದೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಇನ್​ಸ್ಪೆಕ್ಟರ್​ ಜನರಲ್​ ಅವರಿಗೆ ಮೆಕ್ಲೇನ್​ ಅವರಿಂದ ಪ್ರತ್ಯೇಕಗೊಂಡಿರುವ ಪತ್ನಿ ಸಮ್ಮರ್​ ವಾರ್ಡನ್​ ದೂರು ನೀಡಿದ್ದಾರೆ.

ಗಗನಯಾತ್ರಿ ಆ್ಯನ್​ ಮೆಕ್ಲೇನ್​ ತಮ್ಮ ಗೆಳತಿ ಸಮ್ಮರ್​ ವಾರ್ಡನ್​ ಜತೆ ಸಲಿಂಗ ವಿವಾಹವಾಗಿದ್ದರು. ಆದರೆ ಸಂಬಂಧ ಹಳಿಸಿದ್ದರಿಂದ ಮೆಕ್ಲೇನ್​ ಅವರಿಂದ ಸಮ್ಮರ್​ ವಾರ್ಡನ್​ ದೂರಾಗಿದ್ದರು. ಅಷ್ಟರಲ್ಲೇ ಆರು ತಿಂಗಳ ಕಾರ್ಯಾಚರಣೆ ನಿಮಿತ್ತ ಅವರು ಐಎಸ್​ಎಸ್​ಗೆ ತೆರಳುವ ಅವಕಾಶ ಮೆಕ್ಲೇನ್​ ಅವರನ್ನು ಹುಡುಕಿಕೊಂಡು ಬಂದಿತ್ತು. ಅದರಂತೆ ಅವರು ಐಎಸ್​ಎಸ್​ಗೆ ತೆರಳಿದ್ದರು. ಅಲ್ಲಿ, ವಿವಿಧ ಬಗೆಯ ಸಂಶೋಧನೆಗಳನ್ನು ನಡೆಸುವ ಜತೆಗೆ ತಮ್ಮಿಂದ ಪ್ರತ್ಯೇಕಗೊಂಡಿದ್ದ ಪತ್ನಿಯ ಬ್ಯಾಂಕ್​ ಖಾತೆಯಲ್ಲಿನ ವಹಿವಾಟುಗಳನ್ನು ಗಮನಿಸುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ದೂರು ದಾಖಲಾಗಿರುವ ವಿಷಯವನ್ನು ಖಚಿತಪಡಿಸುವ ಮೆಕ್ಲೇನ್​ ಪರವಕೀಲರು, ಮೆಕ್ಲೇನ್​ ಅವರು ಬ್ಯಾಂಕ್​ ಖಾತೆ ಪರಿಶೀಲಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ಮೆಕ್ಲೇನ್​ ಮತ್ತು ವಾರ್ಡನ್​ ಒಟ್ಟಾಗಿ ಇದ್ದಾಗ ಜಂಟಿಯಾಗಿ ಹೊಂದಿದ್ದ ಬ್ಯಾಂಕ್​ ಖಾತೆಯ ವಿವರಗಳನ್ನು ಮಾತ್ರ ಮೆಕ್ಲೇನ್​ ಗಮನಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಹೇಳಿದ್ದಾರೆ.

ವಾರ್ಡನ್​ ದಾಖಲಿಸಿರುವ ದೂರನ್ನು ಅಮೆರಿಕದ ಫೆಡರಲ್​ ಟ್ರೇಡ್​ ಕಮಿಷನ್​ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಈ ದೂರಿನ ಕುರಿತು ನಾಸಾದ ಇನ್​ಸ್ಪೆಕ್ಟರ್​ ಜನರಲ್​ ಈ ಕುರಿತು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಮೆಕ್ಲೇನ್​ ಮತ್ತು ವಾರ್ಡನ್​ ಇಬ್ಬರಿಗೂ ನೋಟಿಎಸ್​ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

Comments are closed.