ರಾಷ್ಟ್ರೀಯ

ಕಾಶ್ಮೀರ ಸ್ಥಾನಮಾನ ರದ್ದುಗೊಳಿಸಿದ ಬಳಿಕ ತಮ್ಮ ಪರಿಸ್ಥಿತಿ ಏನು ಎಂಬುದನ್ನು ವಿಮಾನದಲ್ಲಿ ರಾಹುಲ್​ ಗಾಂಧಿ ಮುಂದೆ ಅಳಲು ತೋಡಿಕೊಂಡ ಕಾಶ್ಮೀರಿ ಮಹಿಳೆ

Pinterest LinkedIn Tumblr

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ತೆರಳಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ನಿಯೋಗವನ್ನು ಕಾಶ್ಮೀರ ಸರ್ಕಾರ ವಾಪಸ್ ದೆಹಲಿಗೆ ಕಳುಹಿಸಿದೆ. ಆದರೆ ವಾಪಸ್ ತೆರಳುವ ವೇಳೆ ವಿಮಾನದಲ್ಲಿ ಕಾಶ್ಮೀರಿ ಮಹಿಳೆಯೊಬ್ಬರು ರಾಹುಲ್ ಗಾಂಧಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರ್ ಅವರು ಮಹಿಳೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದು, ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ಮಹಿಳೆ ವಿವರಿಸಿದ್ದಾರೆ.

‘ನಮ್ಮ ಮಕ್ಕಳು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ನನ್ನ ಸಹೋದರ ಹೃದಯ ರೋಗಿಯಾಗಿದ್ದು, ಕಳೆದ 10 ದಿನಗಳಿಂದ ಆತನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ನಾವು ತುಂಬಾ ಸಮಸ್ಯೆಯಲ್ಲಿ ಸಿಲುಕಿದ್ದೇವೆ’ ಎಂದು ಕಾಶ್ಮೀರಿ ಮಹಿಳೆ ರಾಹುಲ್ ಗಾಂಧಿ ಮುಂದೆ ಅಳಲು ತೋಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ರಾಹುಲ್ ಗಾಂಧಿ ಅವರು ಎದ್ದು ನಿಂತು ಮಹಿಳೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೆ, ಇತರೆ ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ ಹಾಗೂ ಕೆ ಸಿ ವೇಣುಗೋಪಾಲ್ ಅವರು ಸಮಾಧಾನದಿಂದ ಮಹಿಳೆಯ ಅಳಲನ್ನು ಆಲಿಸುತ್ತಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ 12 ಪ್ರತಿಪಕ್ಷಗಳ ನಾಯಕರ ನಿಯೋಗ ಇಂದು ಜಮ್ಮು ಮತ್ತು ಕಾಶ್ಮೀರ ಭೇಟಿಗಾಗಿ ಶ್ರೀನಗರಕ್ಕೆ ತೆರಳಿತ್ತು. ಆದರೆ ಪ್ರತಿಪಕ್ಷಗಳ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆದ ಭದ್ರತಾ ಸಿಬ್ಬಂದಿ, ಅವರನ್ನು ವಾಪಸ್ ದೆಹಲಿಗೆ ಕಳುಹಿಸಿದ್ದಾರೆ.

ಕೇಂದ್ರ ಸರ್ಕಾರದ ಈ ವರ್ತನೆಗೆ ಕಿಡಿ ಕಾರಿದ ರಾಹುಲ್​ ಗಾಂಧಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮೋದಿ ಸರ್ಕಾರ ಪ್ರತಿಪಕ್ಷ ನಿಯೋಗಕ್ಕೆ ಅವಕಾಶ ಕಲ್ಪಿಸದೇ ಏನನ್ನೊ ಮುಚ್ಚಿಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

Comments are closed.