ಅಂತರಾಷ್ಟ್ರೀಯ

ಪೋರ್ನ್ ಸಿನಿಮಾದಲ್ಲಿ ಮಿಯಾ ಖಲೀಫಾ ಗಳಿಸಿದ ಹಣವೆಷ್ಟು ಗೊತ್ತಾ?

Pinterest LinkedIn Tumblr


ಮಾಜಿ ಪೋರ್ನ್ ತಾರೆ ಮಿಯಾ ಖಲೀಫಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕೆಲ ಅಚ್ಚರಿಯ ವಿಚಾರಗಳನ್ನ ಹೊರಗೆಡವಿದ್ದಾರೆ. ತಾನು ಪೋರ್ನ್ ನಟಿಯಾಗಿ ಇದ್ದ 3 ತಿಂಗಳಲ್ಲಿ ಸಂಪಾದಿಸಿದ್ದು ಕೇವಲ 12 ಸಾವಿರ ಡಾಲರ್ (ಸುಮಾರು 8 ಲಕ್ಷ ರೂಪಾಯಿ) ಮಾತ್ರ ಎಂದು ಈ ಮಾಜಿ ಪೋರ್ನ್ ತಾರೆ ಹೇಳಿಕೊಂಡಿದ್ಧಾರೆ. ಪೋರ್ನ್ ನಟಿಯರು ಯಥೇಚ್ಛ ಹಣ ಸಂಪಾದಿಸುತ್ತಾರೆ ಎಂದು ಭಾವಿಸಿದ್ದವರಿಗೆ ಈಕೆಯ ಮಾತುಗಳು ಅಚ್ಚರಿ ಮೂಡಿಸುತ್ತದೆ. ಭಯಾನಕ ವಿಷವರ್ತುಲದಲ್ಲಿ ಈ ನಟಿಯರು ಸಿಲುಕಿ ನಲುಗಿ ಹೋಗುತ್ತಾರೆ ಎಂಬುದು ಮಿಯಾ ಮಾತುಗಳಿಂದ ವೇದ್ಯವಾಗುತ್ತದೆ.

ಮಿಯಾ ಖಲೀಫಾ ಕೇವಲ 3 ತಿಂಗಳು ಪೋರ್ನ್ ನಟಿಯಾಗಿದ್ದರೂ ಈಗಲೂ ಈಕೆಯ ಪೋರ್ನ್ ವಿಡಿಯೋಗಳು ಟಾಪ್ ಟ್ರೆಂಡಿಂಗ್​ನಲ್ಲಿವೆ. ಪೋರ್ನ್ ವೀಕ್ಷಣೆಯಲ್ಲಿ ಈಕೆಯ ವಿಡಿಯೋಗಳು ಅಗ್ರ ಸ್ಥಾನದಲ್ಲಿರುತ್ತವೆ. ಜನರು ಈಕೆಯ ವಿಡಿಯೋಗಳಿಗೆ ಸರ್ಚ್ ಮಾಡಿ ನೋಡುತ್ತಾರೆ. 2018ರಲ್ಲಿ ಅತೀ ಹೆಚ್ಚು ಸರ್ಚ್ ಆದ ಪೋರ್ನ್ ನಟಿ ಇವಳೆನಿಸಿದ್ಧಾಳೆ. ಬಹುತೇಕ ಮಂದಿಗೆ ಈಕೆ ಪೋರ್ನ್ ಉದ್ಯಮ ತೊರೆದು ಸಾಕಷ್ಟು ವರ್ಷಗಳೇ ಆಗಿರುವುದು ಗೊತ್ತೇ ಇಲ್ಲ. ಅಷ್ಟರಮಟ್ಟಿಗೆ ಈಕೆಯ ವಿಡಿಯೋಗಳು ಪೋರ್ನ್ ವೀಕ್ಷಕರಿಗೆ ಅವಿಭಾಜ್ಯ ಅಂಗವಾಗಿದೆ.

ಅಮೆರಿಕದ ಖ್ಯಾತ ಕಾದಂಬರಿಗಾರ್ತಿ ಮೆಗಾನ್ ಅಬಾಟ್ ಅವರೊಂದಿಗಿನ ಸಂದರ್ಶನದಲ್ಲಿ ಮಿಯಾ ಖಲೀಫಾ ಪೋರ್ನ್ ಉದ್ಯಮದ ಕೊಳಕುಗಳನ್ನ ಬಿಚ್ಚಿಟ್ಟಿದ್ಧಾರೆ. ಪೋರ್ನ್ ನಟಿ ಎಂಬ ಕಳಂಕ ತೊಟ್ಟು ಹೊರಜಗತ್ತಿನಲ್ಲಿ ಸಹಜ ಕೆಲಸಗಳನ್ನು ಮಾಡುವುದು ತೀರಾ ಕಷ್ಟ ಎಂದು ಅಸಹಾಯಕತೆ ತೋಡಿಕೊಂಡಿದ್ದಾಳೆ.

“ಪೋರ್ನ್​ನಿಂದ ನಾನು ಕೋಟ್ಯಂತರ ಹಣ ಸಂಪಾದಿಸುತ್ತಿದ್ಧೇನೆಂದು ಜನರು ಭಾವಿಸಿದ್ಧಾರೆ. ಆದರೆ ಇದು ಶುದ್ಧ ಸುಳ್ಳು. ನಾನು ಈ ಉದ್ಯಮದಿಂದ ಸಂಪಾದಿಸಿದ್ದು ಸುಮಾರು 12 ಸಾವಿರ ಡಾಲರ್ ಇರಬಹುದು. ಅಲ್ಲಿಂದ ಹೊರಬಂದ ಮೇಲೆ ನನಗೆ ಅದರಿಂದ ಒಂದು ನಯಾಪೈಸೆಯೂ ಬಂದಿಲ್ಲ. ಭಯಾನಕ ವಿಷಯವೆಂದರೆ, ಪೋರ್ನ್ ಬಿಟ್ಟ ನಂತರ ಸಾಧಾರಣ ಕೆಲಸ ಹುಡುಕುವುದೇ ಪ್ರಯಾಸದ ಕೆಲಸವಾಗಿದೆ” ಎಂದು ಈಕೆ ಹೇಳುತ್ತಾಳೆ.

ಸದ್ಯಕ್ಕೆ ಮಿಯಾ ಖಲೀಫಾ ಅವರು ಸ್ಪೋರ್ಟ್ಸ್ ಪ್ರೆಸೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾಳೆ. ತನ್ನ ಹಿಂದಿನ ಕಾಯಕವನ್ನು ಮರೆತು ಸಂಪೂರ್ಣ ಹೊಸ ಜೀವನದಲ್ಲಿ ಈಕೆ ತೊಡಗಿಸಿಕೊಂಡಿದ್ದಾಳೆ. ಮುಂದೆಯೂ ಇದೇ ರೀತಿ ಮುಂದುವರಿಯುವುದು ಈಕೆಯ ಇಚ್ಛೆ.

ಆದರೆ, ಪೋರ್ನ್ ನಟಿಯಾಗಿ ಈಕೆ ಮಾಡಿದ ಸಂಪಾದನೆಯ ವಿವರಗಳು ಈ ಕೊಳಕು ಉದ್ಯಮದ ನಿಜಸ್ಥಿತಿಗೆ ಕನ್ನಡಿ ಹಿಡಿದಿರುವುದಂತೂ ಹೌದು. ಪೋರ್ನ್ ಉದ್ಯಮವು ಪ್ರತೀ ವರ್ಷ 13 ಬಿಲಿಯನ್ ಡಾಲರ್ (ಸುಮಾರು 1 ಲಕ್ಷ ಕೋಟಿ ರೂಪಾಯಿ)ನಷ್ಟು ಆದಾಯವನ್ನು ಗಳಿಸುತ್ತದೆ. ಈ ಉದ್ಯಮದ ಬೆನ್ನೆಲುಬಾಗಿರುವ ಮಹಿಳೆಯರಿಗೆ ಸಿಗುವುದು ತೃಣಪಾಲು ಮಾತ್ರವೇ. ಮಹಿಳೆಯರನ್ನು ಪೋರ್ನ್ ಎಂಬ ವಿಷವರ್ತುಲಕ್ಕೆ ಎಳೆದು ತರುವ ಪಿಂಪ್​ಗಳಿಗೇ ಸಿಂಹಪಾಲು ಹೋಗುತ್ತದೆ ಎಂಬುದು ಓಪನ್ ಸೀಕ್ರೆಟ್.

ಹಣಕಾಸು ತೊಂದರೆ ಇರುವ ಮಹಿಳೆಯರಿಗೆ ಯಥೇಚ್ಛ ಹಣ ಸಂಪಾದನೆಯ ಆಸೆಯೊಡ್ಡಿ ಪಿಂಪ್​ಗಳು ಪೋರ್ನ್ ಉದ್ಯಮಕ್ಕೆ ಎಳೆದು ತರುತ್ತಾರೆ. ಆದರೆ, ಇಲ್ಲಿಗೆ ಬಂದ ಬಳಿಕ ಮಹಿಳೆಗೆ ಭ್ರಮನಿರಸನವಾಗುತ್ತದೆ. ಕೆಲವೇ ದಿನಗಳಲ್ಲಿ ಇವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಘಾಸಿಗೊಂಡು ಸ್ಥಿಮಿತ ಕಳೆದುಕೊಂಡಿರುತ್ತಾರೆ. ಪೋರ್ನ್ ವಿಡಿಯೋದಲ್ಲಿ ನಟಿಸುವ ಮಹಿಳೆಗೆ ನೀಡಲಾಗುವ ಸಂಭಾವನೆಯ ಹಣದಲ್ಲಿ ಬಹುಪಾಲು ಆಕೆಯ ಮೇಕಪ್, ಆಹಾರ, ಪ್ರಯಾಣ, ಬಾಡಿಗೆ ವಗೈರೆಗಳಿಗೇ ವ್ಯಯವಾಗುತ್ತದೆ. ಸಾಕಪ್ಪಾ ಸಾಕು ಎಂದು ಪೋರ್ನ್​ನಿಂದ ಹೊರಬಂದಾಗ ಬ್ಯಾಂಕ್ ಬ್ಯಾಲೆನ್ಸ್​ನಲ್ಲಿ ಕೆಲವೇ ಸಾವಿರ ಹಣ ಇರುತ್ತದೆ ಎಂದು ಟ್ರೆಸ್ಸಾ ಎಂಬ ಪೋರ್ನ್ ಸ್ಟಾರ್ ಹೇಳುತ್ತಾಳೆ.

ಹೇಳುವುದು ಒಂದು ಮಾಡುವುದು ಇನ್ನೊಂದು:

ಪೋರ್ನ್ ಸಿನಿಮಾದಲ್ಲಿ ನಟಿಸುವ ಮಹಿಳೆಗೆ ಎದುರಾಗುವ ಕಷ್ಟ ಕೋಟಲೆಗಳು ಅಪಾರ. ಸಹಜ ಸೆಕ್ಸ್ ಇರುವ ದೃಶ್ಯಗಳನ್ನು ಚಿತ್ರೀಕರಿಸುತ್ತೇವೆಂದು ಸ್ಕ್ರಿಪ್ಟ್ ಕೊಡುತ್ತಾರೆ. ಆದರೆ, ಶೂಟಿಂಗ್ ಮಾಡುವಾಗ ಪುರುಷ ನಟ ತನ್ನ ಮಿತಿ ಮೀರಿ ವರ್ತನೆ ತೋರುತ್ತಾನೆ. ಬೇಡವೆಂದರೂ ಅಸಹಜ ಸೆಕ್ಸ್ ಮಾಡುತ್ತಾನೆ. ಎಷ್ಟೇ ಯಾತನೆಯಿಂದ ಕಿರುಚಿದರೂ ಶೂಟಿಂಗ್ ನಿಲ್ಲುವುದಿಲ್ಲ ಎಂದು ಕೋರಿನಾ ಟೇಲರ್ ಎಂಬ ಮತ್ತೊಬ್ಬ ಪೋರ್ನ್ ಸ್ಟಾರ್ ಹೇಳಿಕೊಂಡಿದ್ದಾಳೆ.

ಶೂಟಿಂಗ್ ವೇಳೆ ಇಷ್ಟವಿಲ್ಲದ ಅಸಹಜ ಲೈಂಗಿಕ ಸಂಭೋಗದ ದೃಶ್ಯಗಳ ಚಿತ್ರೀಕರಣಕ್ಕೆ ಒಲ್ಲೆ ಎಂದು ಹೊರಬಂದರೆ ಅವಕಾಶದ ಬಾಗಿಲುಗಳು ಖಾಯಂ ಆಗಿ ಮುಚ್ಚಿಹೋಗುವ ಭಯ ಪೋರ್ನ್ ನಟಿಯರಿಗಿರುತ್ತದೆ. ಹೇಗೋ ಈ ಉದ್ಯಮಕ್ಕೆ ಬಂದಾಗಿದೆ. ಕಷ್ಟವೋ ಸುಖವೋ ಒಂದಷ್ಟು ದುಡ್ಡು ಮಾಡಿಕೊಳ್ಳೋಣ ಎಂದುಕೊಂಡ ಎಲ್ಲವನ್ನೂ ಸಹಿಸಿಕೊಂಡು ತೊಡಗಿಸಿಕೊಳ್ಳುತ್ತಾರೆ. ಪುರುಷರು ಇದನ್ನೇ ಬಲವಾಗಿ ಉಪಯೋಗಿಸಿಕೊಂಡು ಮನಬಂದಂತೆ ದೌರ್ಜನ್ಯ ಎಸಗುತ್ತಾರೆ. ಸಿಕ್ಕಸಿಕ್ಕಂತೆ ಬಳಸಿಕೊಳ್ಳುತ್ತಾರೆ ಎಂದು ಟೇಲರ್ ಅಲವತ್ತುಕೊಳ್ಳುತ್ತಾಳೆ.

ಪೋರ್ನ್ ಉದ್ಯಮದಲ್ಲಿರುವ ಜನರು ವಾಸ್ತವ ಜಗತ್ತಿನಿಂದ ವಿಮುಖರಾಗಿರುತ್ತಾರೆ; ಮಾದಕ ವ್ಯಸನಿಗಳಾಗಿರುತ್ತಾರೆ; ಜೀವಂತ ಶವಗಳಾಗಿರುತ್ತಾರೆ ಎಂದು ಮತ್ತೊಬ್ಬ ನಟಿ ಲೀಸಾ ಆ್ಯನ್ ತನ್ನ ಕಥೆ ಬಿಚ್ಚಿಡುತ್ತಾಳೆ.

Comments are closed.