ಅಂತರಾಷ್ಟ್ರೀಯ

ಭತ್ತದ ಬಣವೆಗೆ ಬೆಂಕಿ ಹಾಕಿದ್ದರಿಂದ ಆಕ್ರೋಶಗೊಂಡು ಇಬ್ಬರು ಇಸಿಸ್ ಉಗ್ರರ ಕೊಂದು ಹಾಕಿದ ರೈತರು!

Pinterest LinkedIn Tumblr

ಬಾಗ್ದಾದ್: ಇರಾಕ್ ನಲ್ಲಿ ರೈತರು, ಇಸ್ಲಾಮಿಕ್ ಸ್ಟೇಟ್ ಉಗ್ರರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಭತ್ತದ ಬಣವೆಗೆ ಬೆಂಕಿ ಹಾಕಿದ್ದರಿಂದ ಆಕ್ರೋಶಗೊಂಡ ರೈತರು ಇಬ್ಬರು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹಾಗೂ ಇರಾಕಿನ ರೈತರ ಮಧ್ಯೆ ನಡೆದ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದು, ಮೂವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಚೀನಾ ಮೂಲದ ಸುದ್ದಿಸಂಸ್ಥೆ ಕ್ಸಿನ್ ಹುವಾ ವರದಿ ಮಾಡಿದ್ದು, ಸೋಮವಾರ ಸಂಜೆ ರೈತರು ಹಾಗೂ ಉಗ್ರರ ಮಧ್ಯೆ ಘರ್ಷಣೆ ಸಂಭವಿಸಿದ್ದು, ಅಲ್-ಅಹೈಮ್ ನಗರದ ಹೊರವಲಯದಲ್ಲಿ ರೈತರು ತಮ್ಮ ಹೊಲಗಳಲ್ಲಿ ಗೋಧಿಯನ್ನು ರಾಶಿ ಮಾಡುವಾಗ ಐಎಸ್ ಉಗ್ರರು ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ರೈತರು ಮತ್ತು ಉಗ್ರರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಉಗ್ರರು ರೈತರ ಗೋಧಿ ರಾಶಿ ಮಾಡುವ ಯಂತ್ರಕ್ಕೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಹಾಪೌರ ಮೊಹಮ್ಮದ್ ಅಲ್-ಒಬೀದಿ, ದಿಯಲಾ ಪೂರ್ವ ಪ್ರಾಂತ್ಯದ ರಾಜಧಾನಿ ಬಕುಬಾದ ಅಲ್-ಅಹೈಮ್ ಪಟ್ಟಣದ ಹೊರವಲಯದಲ್ಲಿ ಭತ್ತ ಮತ್ತು ಗೋದಿ ರಾಶಿ ಮಾಡುತ್ತಿದ್ದ ರೈತರ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ರೈತರು ಮತ್ತು ಉಗ್ರರ ನಡುವೆ ಸಂಘರ್ಷ ಏರ್ಪಟ್ಟಿದೆ. ಇದರಿಂದ ಉದ್ರಿಕ್ತಗೊಂಡ ರೈತರು ಉಗ್ರರ ಮೇಲೆ ಮುಗಿ ಬಿದ್ದಿದ್ದು ಈ ವೇಳೆ ಇಬ್ಬರು ಉಗ್ರರು ಹತರಾಗಿ ಮೂಲರು ನಾಗರಿಕರು ಗಾಯಗೊಂಡಿದ್ದಾರೆ. ಅಂತೆಯೇ ಉಗ್ರರು ಗೋಧಿ ರಾಶಿ ಮಾಡುವ ಯಂತ್ರಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಒಬೀದಿ ಮಾಹಿತಿ ನೀಡಿದ್ದಾರೆ.

Comments are closed.