ಕರ್ನಾಟಕ

ಬರದ ನಡುವೆ ಕರ್ನಾಟಕಕ್ಕೆ ಮತ್ತೊಂದು ಶಾಕ್‌: ತಮಿಳುನಾಡಿಗೆ 9.19 ಟಿಎಂಸಿ ಕಾವೇರಿ ನದಿ ನೀರು ಬಿಡಲು ಪ್ರಾಧಿಕಾರ ಆದೇಶ

Pinterest LinkedIn Tumblr

ಹೊಸದಿಲ್ಲಿ: ರಾಜ್ಯದಲ್ಲಿ ಎಲ್ಲೆಡೆ ಬರಗಾಲ ಆವರಿಸಿದ್ದು, ಮಳೆ ಕೊರತೆಯಾದ ಬೆನ್ನಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಮತ್ತೆ ಶಾಕ್‌ ತಟ್ಟಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇಂದು ದೆಹಲಿ ಜಲಮಂಡಳಿ ಕಚೇರಿಯಲ್ಲಿ ನಡೆದಿದ್ದು, ಮತ್ತೆ ಕರ್ನಾಟಕದ ಪಾಲಿಗೆ ಬೇಸರದ ಆದೇಶ ಹೊರಬಿದ್ದಿದೆ. ಈ ಬಾರಿಯೂ ಮತ್ತೆ ಕರ್ನಾಟಕಕ್ಕೇ ಪ್ರಾಧಿಕಾರ ಬರೆ ಹಾಕಿದ್ದು, 9.19 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶಿಸಲಾಗಿದೆ.

ಸಭೆಯಲ್ಲಿ ಕಾವೇರಿ ಕೊಳ್ಳದ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಮುಂದಿನ ಜಲವರ್ಷದ ಮಳೆ ಮುನ್ಸೂಚನೆ ಬಗ್ಗೆ ಚರ್ಚೆ ನಡೆಸಿದ ಸದಸ್ಯರು ನಂತರ ಮಳೆಯಾಧರಿಸಿ ನೀರು ಹಂಚಿಕೆ, ನಿರ್ವಹಣೆ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಕರ್ನಾಟಕದ ಪರ ಅಧಿಕಾರಿಗಳು 2018-19ರಲ್ಲಿ ತೀವ್ರ ಮಳೆ ಅಭಾವ ಎದಿರುಸುತ್ತಿರುವ ಕರ್ನಾಟಕದ ಸ್ಥಿತಿಯನ್ನು ಪ್ರಾಧಿಕಾರದ ಮುಂದೆ ಇಟ್ಟರಾದರೂ ಯಾವುದೇ ಲಾಭವಾಗಿಲ್ಲ. ತಮಿಳುನಾಡಿಗೆ ನಿಗದಿತ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳಿದರೂ ಸಹ, ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿದೆ.

ಈ ಹಿಂದೆ ಜೂನ್ ತಿಂಗಳ ಅಂತ್ಯದೊಳಗೆ 9.25 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಕೋರಿತ್ತು. ಎರಡೂ ರಾಜ್ಯಗಳ ವಾದಗಳನ್ನು ಪರಿಗಣಿಸಿ ಇದೀಗ ಪ್ರಾಧಿಕಾರ ತನ್ನ ನಿರ್ಧಾರವನ್ನು ತಿಳಿಸಿದ್ದು, ಕರ್ನಾಟಕ 9.19 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ತೀರ್ಪನ್ನು ಪ್ರಾಧಿಕಾರದ ಅಧ್ಯಕ್ಷ ಮಸೂದ್​ ಹುಸೇನ್​ ಆದೇಶಿಸಿದ್ದಾರೆ.

ಮುಂದೇನು?:
ಆದೇಶಿಸಿದಷ್ಟು ಮಟ್ಟದ ನೀರನ್ನು ತಮಿಳು ನಾಡಿಗೆ ಹರಿಸಲು ವಾಸ್ತವದಲ್ಲಿ ಸಾಧ್ಯವಿಲ್ಲ ಎಂದು ಮನವಿ ಮಾಡಿರುವ ಕರ್ನಾಟಕ, ಈ ಬಾರಿ ಮುಂಗಾರುಮಳೆ ಕೂಡ ತಡವಾಗಿ ಬರುವ ಬಗ್ಗೆ ಹವಾಮಾನ ಇಲಾಖೆ ನೀಡಿರುವ ವರದಿಯನ್ನು ಪ್ರಾಧಿಕಾರಕ್ಕೆ ನೀಡಿದೆ. ಮಳೆ ತಡವಾದರೆ ಜೂನ್ ತಿಂಗಳಲ್ಲಿ ನೀರು ಬಿಡಲು ಸಾಧ್ಯವಾಗದಿರಬಹುದು ಅಥವಾ 9.19 ಟಿಎಂಸಿ ಬದಲಿಗೆ ಕಡಿಮೆ ನೀರು ಬಿಡಬಹುದು. ಆಗ ಮುಂದಿನ ಸಭೆಯಲ್ಲಿ ಸಂಕಷ್ಟ ಶುರುವಾಗಲಿದೆ. ಮುಂದಿನ ಸಭೆಯಲ್ಲಿ ಜುಲೈ ತಿಂಗಳ ನೀರಿನ ಜೊತೆಗೆ ಬಾಕಿ ನೀರನ್ನು ತಮಿಳುನಾಡು ಕೇಳಲಿದೆ. ಜತೆಗೆ ಜುಲೈನಲ್ಲೂ ನಿಗದಿತ ನೀರು ಬಿಡದಿದ್ದರೆ ತಮಿಳುನಾಡು ಸುಪ್ರೀಂ ಕೋರ್ಟಿಗೆ ಹೋಗುವ ಸಾಧ್ಯತೆಯೂ ಇದೆ. ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿ ಸುಪ್ರೀಂ ಕೋರ್ಟ್ ಮುಂದೆ ಕರ್ನಾಟಕವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಕೆಆರ್​ಎಸ್​ನ ಈಗಿನ ಸ್ಥಿತಿ:

ಗರಿಷ್ಟ ನೀರಿನ ಮಟ್ಟ: 124.80 ಟಿಎಂಸಿ

ಇಂದಿನ ನೀರಿನ ಮಟ್ಟ: 81.25 ಟಿಎಂಸಿ

ಒಳ ಹರಿವು: 138 ಕ್ಯುಸೆಕ್​

ಹೊರ ಹರಿವು: 50 ಕ್ಯುಸೆಕ್​

ಪ್ರಸ್ತುತ ಸಂಗ್ರಹ: 6.97 ಟಿಎಂಸಿ

Comments are closed.