ಬೆಂಗಳೂರು: ನಾನು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಒಂದ ವರ್ಷ ಬಹಳ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ತುಂಬಾ ಸಂತೋಷವಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ರಾಜಕೀಯಕ್ಕೆ ಹೋಗುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ದೇವರು ಹೇಗೇ ದಾರಿ ತೋರಿಸ್ತಾರೆ ಹಾಗೇ ಹೋಗ್ತೀನಿ ಎಂದು ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕರ್ನಾಟಕ, ಕರ್ನಾಟಕದ ಜನರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಅಣ್ಣಾಮಲೈ, ಇಲ್ಲಿ ತುಂಬಾ ಒಳ್ಳೆಯ ಜನಗಳಿದ್ದಾರೆ. ನನಗೆ ಸಂತೋಷ ಇದೆ. ಯಾವುದೇ ರಾಜಕೀಯ ವ್ಯಕ್ತಿಗಳಿಂದ ಒತ್ತಡ ಇಲ್ಲ. ಇದು ನನ್ನ ಸ್ವಂತ ನಿರ್ಧಾರ. ನಾನು ಜನರಿಗಾಗಿ ಕೆಲಸ ಮಾಡಿದ್ದೇನೆ. ಜನ ನನಗೆ ಒಳ್ಳೆಯ ಮರ್ಯಾದೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಾನೇನು ದೊಡ್ಡ ವ್ಯಕ್ತಿಯಲ್ಲ. ಸಾಮಾನ್ಯನಷ್ಟೇ. ಕರ್ನಾಟಕದ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನಗೆ 4 ತಿಂಗಳು ವಿಶ್ರಾಂತಿ ಬೇಕು. ನಾನು ಏನಾದ್ರೂ ಮಾಡ್ತೀನಿ. ಏನೂ ಅಂಥ ಹೇಳೋಕೆ ಆಗಲ್ಲ. ಯುವಕರ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಬುಕ್ ಬರೆಯುತ್ತಿದ್ದೇನೆ. ನಾನು ತಂದೆ ತಾಯಿಗೆ ಕುಟುಂಬಕ್ಕೆ ಸಮಯ ಕೊಡಬೇಕು. ನಾನು ಯಾವ ರಾಜಕೀಯ ಪಕ್ಷಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ರಾಜಕೀಯದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ನನ್ನ ಮುಂದೆ ಯಾವ ದಾರಿ ತೆರೆದುಕೊಳ್ಳುತ್ತದೆಯೋ ಆ ದಾರಿಯಲ್ಲಿ ಸಾಗುತ್ತೇನೆ ಎಂದು ತಿಳಿಸಿದರು.
ರಾಜಕಾರಣಿಗಳು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಕುಮಾರಸ್ವಾಮಿಯವರೇ ಇಲ್ಲಿಗೆ ಕರೆದುಕೊಂಡು ಬಂದಿದ್ದು. ಸಿದ್ದರಾಮಯ್ಯನವರು ಒಳ್ಳೆಯ ಬೆಂಬಲ ನೀಡಿದ್ದಾರೆ. ಹೀಗಾಗಿ ನಾವು ಒಳ್ಳೆ ಕೆಲಸ ಮಾಡೋಕೆ ಸಾಧ್ಯವಾಯ್ತು. ಉಡುಪಿ- ಕಾರ್ಕಳ ಜನರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಲೋಕಸಭಾ ಚುನಾವಣೆ ಮುಂಚೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೆ. ಆದರೆ ಚುನಾವಣಾ ಸಲುವಾಗಿ ನಿರ್ಧಾರ ಮುಂದೂಡಿದ್ದೆ ಎಂದರು.
ಕಾನ್ಸ್ಟೇಬಲ್ಗಳನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು. ಒಳ್ಳೆಯ ಸಂಬಳ ಕೊಡಬೇಕು. ಅವರ ಕೆಲಸ ಬಹಳ ಮುಖ್ಯವಾಗುತ್ತದೆ. ನನ್ನ ತಂದೆ ನನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ. ನನ್ನ ಮಗನನ್ನು ನಾನು ಅದೇ ರೀತಿ ನೋಡಿಕೊಳ್ಳಬೇಕು. ಮಗನ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ರಾಜೀನಾಮೆ ನೀಡಲು ಕಾರಣ ತಿಳಿಸಿದರು.
ಇಲ್ಲಿನ ಜನ ಬಹಳ ಒಳ್ಳೆಯವರು. ಹೊರರಾಜ್ಯದವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನಗೆ ಭಾಷೆ ಬರದೆ ಇರುವ ಸಂದರ್ಭದಲ್ಲೂ ನನ್ನನ್ನು ನಮ್ಮೋನು ಅಂತ ನೋಡಿದ್ದರು. ನಾನು ಬರುವಾಗ ಕೈಯಲ್ಲಿ 2 ಬ್ಯಾಗ್ ಹಿಡಿದು ಉಡುಪಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ. ಅಲ್ಲಿಂದ ಇಲ್ಲಿಯವರೆಗೂ ನನ್ನನ್ನು ಕರ್ನಾಟಕದ ಜನ ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ನಮ್ಮ ಡಿಪಾರ್ಟ್ಮೆಂಟಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ. ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ರಾಜೀನಾಮೆ ಹೊತ್ತಲ್ಲಿ ಕರ್ನಾಟಕವನ್ನು ಹಾಡಿ ಹೊಗಳಿದರು.
ಐಪಿಎಸ್ ಅಧಿಕಾರಿಗಳ ಬೇಸರ
ಅಣ್ಣಾಮಲೈ ರಾಜೀನಾಮೆಗೆ ರೈಲ್ವೆ ಐಜಿಪಿ ರೂಪಾ ಬೇಸರ ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈ ಜೊತೆ ಈಗಾಗಲೇ ಮಾತಾನಾಡಿದ್ದೇನೆ. ಇದು ಪೂರ್ವ ನಿರ್ಧರಿತ ರಾಜೀನಾಮೆ ಆಗಿದೆ. ಈ ರೀತಿ ನಿರ್ಧಾರ ತೆಗೆದುಕೊಳ್ಳೋಕೆ ಎದೆಗಾರಿಕೆ ಬೇಕು. ತುಂಬಾ ಕಠಿಣಭರಿತ ಹುದ್ದೆಯನ್ನು ತ್ಯಜಿಸುತ್ತಿದ್ದಾರೆ. ಅವರ ಸಾಧನೆ ತುಂಬಾ ಜನರ ಹೃದಯದಲ್ಲಿದೆ. ಈ ಕೆಲಸ ಬಿಟ್ಟು ರಾಜಕೀಯ ಜೀವನದಲ್ಲಿ ನಿರತರಾಗಲಿದ್ದಾರೆ. ಆಲ್ ದ ಬೆಸ್ಟ್ ಟು ಅಣ್ಣಾಮಲೈ ಎಂದು ಟ್ವೀಟ್ ಮಾಡಿದ್ದಾರೆ.
ಅಣ್ಣಾಮಲೈ ರಾಜೀನಾಮೆ ವಿಚಾರ ನಗರ ಪೊಲೀಸ್ ಕಮಿಷನರ್ ಟಿ ಸುನೀಲ್ ಕುಮಾರ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಎಲ್ಲಿ ಹೋದರೂ ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. ಅವರನ್ನು ಮನವೊಲಿಸುವ ಪ್ರಯತ್ನ ಕೂಡ ಮಾಡಿದ್ವಿ. ಆದರೆ ಅದು ಅವರ ಸ್ವಂತ ನಿರ್ಧಾರವಾಗಿದೆ. ಅವರು ರಾಜಕೀಯಕ್ಕೆ ಹೋಗುವ ಬಗ್ಗೆ ಅವರೇ ಹೇಳಬಹುದು. ಅವರ ಸೇವೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅವರು ದಿನದ 24 ಗಂಟೆ ಸೇವೆ ಮಾಡುತ್ತಿದ್ದರು. ಅವರ ಅನುಭವದ ಮೇರೆಗೆ ಮುಂದಿನ ನಡೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.