ಅಂತರಾಷ್ಟ್ರೀಯ

ವೈದ್ಯರ ನಿರ್ಲಕ್ಷ್ಯ, ಒಂದೇ ಗ್ರಾಮದ 500ಕ್ಕೂ ಹೆಚ್ಚಿನ ಮಂದಿಗೆ ಹೆಚ್​ಐವಿ ಸೋಂಕು!

Pinterest LinkedIn Tumblr


ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಲರ್ಕಾನಾ ಎಂಬ ಜಿಲ್ಲೆಯ ಹಳ್ಳಿಯೊಂದರಲ್ಲಿ 500ಕ್ಕೂ ಹೆಚ್ಚಿನ ಮಕ್ಕಳಿಗೆ ಹೆಚ್​ಐವಿ ಸೋಂಕು ತಗುಲಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಹೆಚ್ಚಿನವರು ರಟೊಡೆರೊ ಎಂಬ ಗ್ರಾಮದವರಾಗಿದ್ದಾರೆ. ಈ ಹಳ್ಳಿಯಲ್ಲಿರುವ ವೈದ್ಯರ ನಿರ್ಲಕ್ಷ್ಯದಿಂದ 410 ಮಕ್ಕಳಿಗೆ ಹಾಗೂ ಇತರೆ 100 ಮಂದಿಗೆ ಹೆಚ್​ಐವಿ ಸೋಂಕು ತಗುಲಿದೆ.

ತಮ್ಮ ಬಳಿ ಚಿಕಿತ್ಸೆಗೆಂದು ಬರುತ್ತಿದ್ದವರಿಗೆ ವೈದ್ಯನು ಒಂದೇ ಸಿರಿಂಜ್ ಬಳಸುತ್ತಿದ್ದನು. ಇದರಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರೆಲ್ಲರಿಗೂ ಸೋಂಕು ವ್ಯಾಪಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಈಗಾಗಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಗ್ರಾಮದಲ್ಲಿ ತಾತ್ಕಾಲಿಕ ಹೆಚ್​ಐವಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ ಪರೀಕ್ಷೆಯಲ್ಲಿ ಹಲವರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಈ ಸಂಖ್ಯೆಯು ಮತ್ತಷ್ಟು ಹೆಚ್ಚಾಗಬಹುದು ಎಂಬ ಭಯದಲ್ಲಿದ್ದಾರೆ ಗ್ರಾಮಸ್ಥರು.

ಪತ್ತೆಯಾಗಿದ್ದು ಹೇಗೆ?

ಎನ್​ಆರ್​ಪಿ ವರದಿ ಪ್ರಕಾರ, ರಟೊಡೆರೊ ಗ್ರಾಮದ ಮಕ್ಕಳಲ್ಲಿ ಏಪ್ರಿಲ್​ ತಿಂಗಳಲ್ಲಿ ವಿಪರೀತ ಜ್ವರ ಕಾಣಿಸಿಕೊಂಡಿದೆ. ದಿನ ಕಳೆದಂತೆ ಜ್ವರ ಪೀಡಿತ ಮಕ್ಕಳ ಸಂಖ್ಯೆ ಹೆಚ್ಚಾಗ ತೊಡಗಿದೆ. ಹೀಗಾಗಿ ಸಮೀಪದ ವೈದ್ಯಕೀಯ ಪರೀಕ್ಷಾ ಕೇಂದ್ರ ಕರೆದೊಯ್ಯಲಾಗುತ್ತಿತ್ತು. ಆದರೆ ಮಕ್ಕಳ ಜ್ವರದಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬರುತ್ತಿರಲಿಲ್ಲ. ಈ ವೇಳೆ ರಕ್ತ ಪರೀಕ್ಷೆ ನಡೆಸಿದ್ದರಿಂದ ಪ್ರಕರಣ ಬೆಳಕಿಗೆ ಬರುವಂತಾಯಿತು.

ಏಪ್ರಿಲ್ 24 ರಂದು 2 ರಿಂದ 8 ವಯಸ್ಸಿನ 15 ಮಕ್ಕಳಲ್ಲಿ ಹೆಚ್​ಐವಿ ಸೋಂಕು ಇರುವುದು ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಲಾರ್ಕಾನಾ ಡೆಪ್ಯುಟಿ ಕಮೀಷನರ್ ಮೊಹಮ್ಮದ್ ಸಿದಿಕ್ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಯಿತು. ಈ ಶಿಬಿರದಲ್ಲಿ ಸ್ಥಳೀಯರ ರಕ್ತ ಮಾದರಿಗಳನ್ನು ಪರೀಕ್ಷಿಸಿದಾಗ ಹೆಚ್​ಐವಿ ವೈರಸ್​ಗಳು ಕಂಡು ಬಂದಿರುವುದಾಗಿ ತಿಳಿಸಲಾಗಿದೆ.

Comments are closed.